ಹಿರಿಯ ನಟನೊಂದಿಗೆ 'ನಮಿತಾ ಡೇಟಿಂಗ್': ಸುದ್ದಿ ಕೇಳಿ ಗರಂ ಆದ್ರು ಪತಿ!
ನಟಿ ನಮಿತಾ ಅವರು ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮದುವೆ ಆದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಆಗಾಗ ಒಂದೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕನ್ನಡದಲ್ಲಿ ಕೂಡ ನಮಿತಾ ಒಂದಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ನಮಿತಾ ಅಭಿನಯಿಸಿದ್ದಾರೆ.
ಆದರೆ ಈ ನಟಿಯ ಹೆಸರು ಈಗ ಮುಂಚೂಣಿಗೆ ಬಂದಿರುವುದು ಸಿನಿಮಾ ಆಗಲಿ ಅಥವಾ ಅವರ ಪಾತ್ರಗಳಿಗಾಗಲೀ ಅಲ್ಲ. ಬದಲಿಗೆ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ನಟಿ ನಮಿತಾ ಸದ್ಯ ಹಿರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದೇ ವಿಚಾರವಾಗಿ ನಮಿತಾ ಮತ್ತು ಆಕೆಯ ಪತಿ ಈಗ ಗರಂ ಆಗಿದ್ದಾರೆ. ಇದೆಲ್ಲಾ ಸುಳ್ಳು, ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದಿದ್ದಾರೆ. ಅಷ್ಟಕ್ಕೂ ಈ ಗಾಸಿಪ್ ಹಬ್ಬಿದ್ದು ಹೇಗೆ? ಆ ಹಿರಿಯ ನಟ ಯಾರು ಎನ್ನುವುದನ್ನು ಮುಂದೆ ಓದಿ....

ಹಿರಿಯ ನಟ ಶರತ್ ಬಾಬು ಜೊತೆಗೆ ನಮಿತಾ ಡೇಟಿಂಗ್?
ಕೆಲವು ವರ್ಷಗಳಿಂದ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ನಟಿ ನಮಿತಾ ಅವರು ಹಿರಿಯ ಪೋಷಕ ನಟ ಶರತ್ ಬಾಬು ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ. ಈ ಸುದ್ದಿ ಎಲ್ಲಿಂದ ಶುರುವಾಯಿತು ಎನ್ನುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ತಮಿಳು, ತೆಲುಗು, ಮಲಯಾಳಂನಲ್ಲಿ ಈ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಮದುವೆ ಬಳಿಕವೂ ನಮಿತಾ ಹಿರಿಯ ನಟನೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಮಿತಾ ಈ ಹಿಂದೆಯೇ ಮಾತನಾಡಿದ್ದಾರೆ. ಆದರೂ ಕೂಡ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದು ಬಿಟ್ಟಿದೆ.

ಶರತ್ ಬಾಬು ಜೊತೆ ಮದುವೆಗೆ ಮುಂದಾಗಿದ್ದರಂತೆ ನಮಿತಾ!
ಈ ಸುದ್ದಿ ಕೇವಲ ಡೇಟಿಂಗ್ ಸಮಾಚಾರದಲ್ಲಿ ಮುಕ್ತಾಯ ಆಗಿಲ್ಲ. ಬದಲಿಗೆ ಶರತ್ ಬಾಬು ಅವರನ್ನು ಮದುವೆ ಆಗಲು ಕೂಟ ನಮಿತಾ ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಹಲವು ದಿನಗಳಿಂದ ನಮಿತಾ ಮತ್ತು ಶರತ್ ಬಾಬು ಅವರು ಲಿವ್ ಇನ್ ಟುಗೆದರ್ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಸದ್ಯದಲ್ಲೇ ಮದುವೆ ಆಗುತ್ತಾರೆ ಎನ್ನಲಾಗಿತ್ತು. 2017ರಿಂದಲೇ ಈ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ಇದಕ್ಕೆ ನಮಿತಾ ಮತ್ತು ಪತಿ ವೀರೇಂದ್ರ ಚೌಧರಿ ತೆರೆ ಎಳೆದಿದ್ದಾರೆ.

ಎರಡನೇ ಮದುವೆ ಬಗ್ಗೆ ನಮಿತಾ ಪತಿ ಹೇಳಿದ್ದೇನು?
ನಮಿತಾ ಪತಿ ವೀರೇಂದ್ರ ಚೌದರಿ ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. "ಮದುವೆ ಬಳಿಕ ನಮಿತಾ ನನ್ನ ಜೊತೆಗೆ ಇದ್ದಾರೆ. ಆಕೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ಗಾಳಿ ಸುದ್ದಿ ಎಲ್ಲಿಂದ ಹುಟ್ಟಿತು ಎನ್ನುವ ಬಗ್ಗೆಯೂ ನಮಗೆ ಗೊತ್ತಿಲ್ಲ. ನಮಗೆ ಶರತ್ ಬಾಬು ಯಾರು ಅಂತ ಗೊತ್ತಿಲ್ಲ. ಹಾಗಾಗಿ ಇದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿಲ್ಲ. ಅವರು ಒಬ್ಬ ಹಿರಿಯ ನಟ, ಇದರಿಂದ ಅವರಿಗೂ ತೊಂದರೆ ಆಗಿರುತ್ತದೆ. ಇದು ತಪ್ಪು ಮಾಹಿತಿ" ಎಂದಿದ್ದಾರೆ.

ಶರತ್ ಬಾಬು ಜೊತೆಗೆ ಡೇಟಿಂಗ್: ನಮಿತಾ ಪ್ರತಿಕ್ರಿಯೆ!
ಇನ್ನು ಈ ಬಗ್ಗೆ ನಟಿ ನಮಿತಾ ಅವರು ಕೂಡ ಮಾತನಾಡಿದ್ದಾರೆ " ನನಗೆ ಶರತ್ ಬಾಬು ಯಾರು ಅಂತಲೇ ಗೊತ್ತಿಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಹೇಗೆ ಬಿತ್ತರವಾಯಿತು ಎನ್ನುವ ಬಗ್ಗೆಯೂ ಗೊತ್ತಿಲ್ಲ. ಇದು ಸಂಪೂರ್ಣ ಸುಳ್ಳುಸುದ್ದಿ. ನನಗಿಂತ ವಯಸ್ಸಿನಲ್ಲಿ ದುಪ್ಪಟ್ಟು ದೊಡ್ಡವರಾದ ವ್ಯಕ್ತಿಯನ್ನು ನಾನು ಹೇಗೆ ಮದುವೆ ಆಗುತ್ತೀನಿ?" ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ. ಈ ಮೂಲಕ ನಮಿತಾ ಮತ್ತು ಆಕೆ ಪತಿ ವಿರೇಂದ್ರ ಚೌಧರಿ ಇದು ಸುಳ್ಳು ಸುದ್ದಿ ಎಂದಿದ್ದಾರೆ. ನಮಿತಾ ಯಾರೊಂದಿಗೂ ಡೇಟಿಂಗ್ ಮಾಡ್ತಿಲ್ಲ, ಮತ್ತೊಂದು ಮದುವೆ ಕೂಡ ಆಗುತ್ತಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.


Click it and Unblock the Notifications











