»   » ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಯಲ್ಲಿ ನೀತೂ!

ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಯಲ್ಲಿ ನೀತೂ!

Posted By:
Subscribe to Filmibeat Kannada
ಕನ್ನಡ ನಟಿ ನೀತೂ ಭಾರೀ ಬವಣೆ ಎದುರಿಸುತ್ತಿದ್ದಾರೆ. ಅವರಿಗೆ ಈಗ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ. ಪರಭಾಷೆ, ನೆರೆಭಾಷೆಗಳಿಂದ ಆಫರ್ಸ್ ಬರುತ್ತಿಲ್ಲ. ಅಚ್ಚ ಕನ್ನಡತಿ, ಮಂಗಳೂರಿನ ಮಲ್ಲಿಗೆ ನೀತೂ ಶೆಟ್ಟಿಗೆ ಈಗ ಅವಕಾಶಗಳನ್ನು ಬೆನ್ನಟ್ಟುವ ಮನಸ್ಥಿತಿಯೂ ಇಲ್ಲ, ಕಾರಣ, ಅವರೀಗ ಚಿತ್ರರಂಗಕ್ಕೆ ಹೊಸಬರಲ್ಲ. ಅವರ ಪ್ರತಿಭೆ ಹಾಗೂ ಬದ್ಧತೆ ಬಗ್ಗೆ ಕನ್ನಡ ಚಿತ್ರರಂಗಕ್ಕೆ ಚೆನ್ನಾಗಿ ಗೊತ್ತು.

ಅವರೀಗ ಹೊಸಬರಂತೆ ಅವಕಾಶ ಅರಸಿ ಹೋಗಬೇಕಾಗಿಲ್ಲ. ಆದರೆ ಬರಬೇಕಾಗಿರುವ ಅವಕಾಶ ಬರುತ್ತಿಲ್ಲ. ಈ ಬಗ್ಗೆ ನೀತು "ಪರಭಾಷೆಯ ಅವಕಾಶಗಳು ಹುಡುಕಿಕೊಂಡು ಬಂದಾಗ ಕನ್ನಡ ಚಿತ್ರರಂಗದ ಮೇಲಿನ ಪ್ರೀತಿ ಅಡ್ಡ ಬಂತು. ಕನ್ನಡ ಚಿತ್ರರಂಗ ನನ್ನನ್ನು ಕಡೆಗಣಿಸುತ್ತಿರುವ ಈ ಸಂದರ್ಭದಲ್ಲಿ ಪರಭಾಷೆಯ ಅವಕಾಶಗಳು ಮುಗಿದುಹೋಗಿವೆ, ಅಲ್ಲಿ ನನಗೆ ಬಾಗಿಲು ಮುಚ್ಚಿಹೋಗಿದೆ" ಎಂದಿದ್ದಾರೆ.

ನೀತೂ ನಟಿಸಿರುವ ಒಂದೇ ಒಂದು ಪರಭಾಷೆಯ ಚಿತ್ರ ಮಲಯಾಳಂನ 'ಫೋಟೋಗ್ರಾಫರ್'. ಆದರೆ ಕನ್ನಡದಲ್ಲಿ ಅವರು ಸುಮಾರು ಹದಿನೇಳು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ 'ಗಾಳಿಪಟ'ದಲ್ಲಿ ಅವರ 'ರಾಧಾ' ಪಾತ್ರವನ್ನಂತೂ ಪ್ರೇಕ್ಷಕರು ಎಂದೂ ಮರೆಯಲಾರರು. ನೀತೂ 'ಥೂ' ಎಂದು ಉಗಿಯುವ ಡೈಲಾಗಿಗೆ ಸ್ಯಾಂಡಲ್ ವುಡ್ 'ಶಹಬ್ಬಾಸ್' ಎಂದಿತ್ತು.

ಆ ವೇಳೆ ಬಹಳಷ್ಟು ಪರಭಾಷೆಯ ನಿರ್ಮಾಪಕರು ಹಾಗೂ ನಿರ್ದೇಶಕರು ನೀತೂ ಕಾಲ್ ಶೀಟ್ ಕೇಳಿದ್ದರು. ಆದರೆ ಆಗ ನೀತೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದಕ್ಕೆ ಕಾರಣ, ಅವರೇ ಹೇಳಿಕೊಂಡಂತೇ ಅವರಿಗೆ ಕನ್ನಡ ಚಿತ್ರರಂಗದ ಮೇಲಿದ್ದ ಪ್ರೀತಿ. ಆಗ ಅದೇ ಸರಿ ಅನ್ನಿಸಿತ್ತಂತೆ. ಆದರೆ ಈಗ ನೀತೂಗೆ ಅಂದು ಮಾಡಿರುವ ತಪ್ಪಿನ ಅರಿವಾಗಿದೆಯಂತೆ.

ಇಂದು ಕನ್ನಡ ಚಿತ್ರರಂಗ ನೀತೂರನ್ನು ಕಡೆಗಣಿಸುತ್ತಿದೆ. ಯಾವ್ಯಾವುದೋ ಪ್ರಯೋಜನಕ್ಕೆ ಬಾರದ ಪಾತ್ರಗಳೇ ಅವರನ್ನು ಹುಡುಕಿಕೊಂಡು ಬರುತ್ತಿವೆ. ದೊಡ್ಡ ನಿರ್ದೇಶಕರು, ದೊಡ್ಡ ಬ್ಯಾನರುಗಳು ನೀತೂಗೆ ಆಫರ್ ನೀಡುತ್ತಿಲ್ಲ. ನೀತೂ ಈಗ ಕನ್ನಡದಲ್ಲಿ ಆಟಕ್ಕಿರುವ ಲೆಕ್ಕಕ್ಕಿಲ್ಲದ ನಾಯಕಿನಟಿ. ಹೊಸಬರು ಅವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಚಿತ್ರಗಳು ಗೆಲ್ಲುತ್ತಿಲ್ಲ.

ನೀತೂ ಈಗ ಪರಭಾಷೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಸದ್ಯಕ್ಕೆ ಯಾರೂ ಕರೆದಿಲ್ಲ. ಅವರ ಕೈಯಲ್ಲೀಗ ಕೇವಲ ಎರಡು ಕನ್ನಡ ಚಿತ್ರಗಳಿವೆ. ಒಂದು '90' ಖ್ಯಾತಿಯ ಲಕ್ಕಿ ಶಂಕರ್ ನಿರ್ದೇಶನ ಹಾಗೂ ರವಿಶಂಕರ್ ನಾಯಕತ್ವದ 'ದೇವರಾಣೆ'. ಇನ್ನೊಂದು ಸುನಿಲ್ ಹುಬ್ಬಳ್ಳಿ ನಿರ್ದೇಶನದ 'ಪಾರು ಐ ಲವ್ ಯೂ'.

ಪಾರು ಐ ಲವ್ ಯೂ ಚಿತ್ರದ ಪಾತ್ರ ನೀತೂಗೆ ತುಂಬಾ ಇಷ್ಟವಾಗಿದೆಯಂತೆ. ಇದು ಯೋಗರಾಜ್ ಭಟ್ಟರ 'ಗಾಳಿಪಟ'ದ ರಾಧಾಳ ಪಾತ್ರವನ್ನೂ ಮೀರಿಸುವಂತಿದೆ ಎಂಬುದು ಸ್ವತಃ ನೀತೂ ಹೇಳಿಕೆ. ಆದರೆ ಚಿತ್ರ ಗೆದ್ದರೆ ಮಾತ್ರ ಇದರಿಂದ ಅವರಿಗೆ ಲಾಭ ಎಂಬ ಅರಿವು ನೀತೂಗೆ ಸ್ಪಷ್ಟವಾಗಿದೆ. ಮುಂದಕ್ಕೆ ಏನೋ ಎಂಬ ಗಾಬರಿ ನೀತೂ ಮುಖ ಹಾಗೂ ಮಾತಿನಲ್ಲಿದೆ. ಆಲ್ ದಿ ಬೆಸ್ಟ್ ನೀತೂ... (ಒನ್ ಇಂಡಿಯಾ ಕನ್ನಡ)

English summary
Kannada Actress Neethu Talks about her present Film Carrier. She opinions that she gave extra importance to Kannada movies. But, Sandalwood neglected her talent. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada