ಭರ್ಜರಿ ಆಫರ್: ನಟಿ ರಾಕುಲ್ ಪ್ರೀತ್‌ಸಿಂಗ್ ಕೊಡ್ತಿದ್ದಾರೆ 50% ಡಿಸ್‌ಕೌಂಟ್!
ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಭರ್ಜರಿ ಆಫರ್ ಘೋಷಿಸಿದ್ದಾರಂತೆ. ಅವರು ಶೇ 50 ರಷ್ಟು ರಿಯಾಯತಿ ನೀಡುತ್ತಿದ್ದಾರೆ!
Recommended Video
ರಾಕುಲ್ ಪ್ರೀತ್‌ಸಿಂಗ್ ಯಾವುದರ ಮೇಲೆ ರಿಯಾಯಿತಿ ನೀಡುತ್ತಿದ್ದಾರೆ. ಅವರು ಏನನ್ನಾದರು ಮಾರಾಟ ಮಾಡುತ್ತಿದ್ದಾರಾ ಎಂಬ ಅನುಮಾನ ಬಾರದೆ ಇರದು, ಆದರೆ ಅವರು ಏನನ್ನೂ ಮಾರಾಟ ಮಾಡುತ್ತಿಲ್ಲ ಬದಲಿಗೆ ಅವರು ಡಿಸ್‌ಕೌಂಟ್ ನೀಡುತ್ತಿರುವುದು ತಮ್ಮ ನಿರ್ಮಾಪಕರಿಗೆ.
ಹೌದು, ರಾಕುಲ್ ಅವರು ತಮ್ಮ ಸಂಭಾವನೆಯ ಶೇ 50 ಪ್ರತಿಶತ ಹಣವನ್ನು ರಿಯಾಯಿತಿಯನ್ನಾಗಿ ನೀಡುತ್ತಿದ್ದಾರೆ. ಆ ಮೂಲಕ ಬೇರೆಲ್ಲಾ ನಟ-ನಟಿಯರಿಗೆ ರಾಕುಲ್ ಪ್ರೀತ್ ಸಿಂಗ್ ಮಾದರಿಯಾಗಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಅವರು ಸಿನಿಮಾಕ್ಕೆ ಎಷ್ಟು ಹಣ ಪಡೆಯುತ್ತಿದ್ದರು, ಈಗ ಎಷ್ಟು ರಿಯಾಯಿತಿ ಕೊಟ್ಟಿದ್ದಾರೆ ತಿಳಿಯೋಣ ಬನ್ನಿ.

ರಾಕುಲ್ ಮಾಡಿದ್ದಾರೆ ಗಟ್ಟಿ ನಿರ್ಣಯ
ಕೊರೊನಾ ಸಂಕಷ್ಟದಿಂದ ನಟ-ನಟಿಯರೆಲ್ಲರೂ ಕೆಲಸವಿಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಕುಲ್ ಪ್ರೀತ್ ಸಹ ಉದ್ಯೋಗವಿಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಒಂದೊಮ್ಮೆ ಸಿನಿಮಾ ಚಿತ್ರೀಕರಣ, ಬಿಡುಗಡೆ ಪ್ರಾರಂಭವಾದ ಮೇಲೆ ಈಗ ಉಂಟಾಗಿರುವ ನಷ್ಟವನ್ನು ಸರಿತೂಗಿಸಲು ರಾಕುಲ್ ನಿರ್ಣಯವೊಂದನ್ನು ತಳೆದಿದ್ದಾರೆ.

ಒಟ್ಟು ಸಂಭಾವನೆಯ 50ರಷ್ಟು ಮಾತ್ರವೇ ಪಡೆಯುತ್ತಾರೆ
ರಾಕುಲ್ ಪ್ರೀತ್ ಸಿಂಗ್ ತಮ್ಮ ಸಿನಿಮಾ ಸಂಭಾವನೆಯಲ್ಲಿ ಕೇವಲ 50% ಹಣವನ್ನಷ್ಟೆ ಪಡೆಯುತ್ತಾರಂತೆ. ರಾಕುಲ್ ಅವರು ಒಂದು ಸಿನಿಮಾಕ್ಕೆ 1.50 ಕೋಟಿ ಹಣ ಪಡೆಯುತ್ತಾರೆ. ಆದರೆ ಇನ್ನು ಮುಂದೆ ಒಂದು ಸಿನಿಮಾಕ್ಕೆ ಕೇವಲ 75 ಲಕ್ಷ ಹಣವನ್ನಷ್ಟೆ ತೆಗೆದುಕೊಳ್ಳುತ್ತಾರಂತೆ.

ಕೆಲವು ತಿಂಗಳಷ್ಟೆ ಈ ಆಫರ್
ರಾಕುಲ್ ಅವರು ಈ 50% ರಿಯಾಯಿತಿಯ ಆಫರ್ ಅನ್ನು ಕೆಲವೇ ತಿಂಗಳುಗಳಿಗಾಗಿ ನೀಡಿದ್ದಾರೆ ಎನ್ನಲಾಗಿದೆ. ಚಿತ್ರಮಂದಿರಗಳು ಪ್ರಾರಂಭವಾಗಿ ಕೊರೊನಾ ಪ್ರಭಾವ ತಗ್ಗಿ ಸಿನಿಮಾ ಉದ್ಯಮ ಮತ್ತೆ ಹಳಿಗೆ ಬಂದ ಮೇಲೆ ಈ ಡಿಸ್‌ಕೌಂಟ್ ಇರುವುದಿಲ್ಲವಂತೆ.

ನಿರ್ಮಾಪಕರನ್ನು ಉಳಿಸಲು ನಿರ್ಣಯ
ಚಿತ್ರೀಕರಣ ಇಲ್ಲದೆ, ಸಿನಿಮಾ ಬಿಡುಗಡೆ ಇಲ್ಲದೆ ನಿರ್ಮಾಪಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ತಂದು ಸಿನಿಮಾಕ್ಕೆ ಬಂಡವಾಳ ಹೂಡಿದವರ ಸಾಲದ ಬಡ್ಡಿ ಏರುತ್ತಲೇ ಇದೆ. ಸಾಲ ತೀರಿಸಲಾಗದೆ ತಲೆಯ ಮೇಲೆ ಕೈ ಹೊತ್ತು ಕೂತಿದ್ದಾರೆ. ನಿರ್ಮಾಪಕರಿಗೆ ಸಹಾಯ ಮಾಡಲೆಂದು ರಾಕುಲ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ನೀಡಿಲ್ಲ ರಾಕುಲ್.


Click it and Unblock the Notifications











