ತನ್ನ ಮ್ಯಾನೇಜರ್‌ನಿಂದಲೇ ಮೋಸ ಹೋದ ರಶ್ಮಿಕಾ ಮಂದಣ್ಣ? ನಂಬಿದವನೇ ದ್ರೋಹ ಬಗೆದಿದ್ದಕ್ಕೆ ನಟಿ ಮಾಡಿದ್ದೇನು?
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿ ಕಮಾಲ್ ಮಾಡ್ತಿದ್ದಾರೆ. ಟಾಲಿವುಡ್ ಮಾತ್ರವಲ್ಲ ಈಗ ಬಾಲಿವುಡ್‌ನಲ್ಲೂ ರೋಶ್ ಹವಾ ನಡೀತಿದೆ. ಹಿಂದಿಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಶ್ರೀವಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಬೆಡಗಿಯರಿಗೆ ಟಕ್ಕರ್ ಕೊಡುತ್ತಿದ್ದಾರೆ. ಆದರೆ ಆಕೆಗೆ ಸ್ವತಃ ಮ್ಯಾನೇಜರ್ ಮೋಸ ಮಾಡಿರುವುದಾಗಿ ಹೇಳಲಾಗ್ತಿದೆ. ಲಕ್ಷ ಲಕ್ಷ ವಂಚಿಸಿದ್ದಾನೆ ಎನ್ನಲಾಗ್ತಿದೆ.
ಸ್ಟಾರ್ ನಟರ ಬಹುತೇಕ ಸಿನಿಮಾ ವ್ಯವಹಾರಗಳನ್ನು ಮ್ಯಾನೇಜರ್‌ಗಳೇ ನೋಡಿಕೊಳ್ಳುತ್ತಾರೆ. ಅದರಲ್ಲೂ ಊರು ಬಿಟ್ಟು ಊರಿಗೆ ಹೋಗಿ ದೊಡ್ಡ ದೊಡ್ಡ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುವವರಿಗೆ ಇಂತಹವರ ಸಹಾಯ ಅಗತ್ಯವಾಗಿರುತ್ತದೆ. ಬಹುತೇಕ ಎಲ್ಲಾ ಸ್ಟಾರ್ ಕಲಾವಿದರಿಗೂ ಮ್ಯಾನೇಜರ್ ಇರ್ತಾರೆ. ಅವರೇ ನಟ, ನಟಿಯರು ಸಿನಿಮಾ ಕಾಲ್‌ಶೀಟ್, ಸಂಭಾವನೆ, ಪ್ರತಿ ದಿನದ ಕಾರ್ಯಕ್ರಮಗಳ ಶೆಡ್ಯೂಲ್ ನೋಡಿಕೊಳ್ಳುತ್ತಾರೆ. ಎಲ್ಲಾ ಜವಾಬ್ದಾರಿಯನ್ನು ಅವರಿಗೆ ವಹಿಸಿ ಸ್ಟಾರ್ಸ್ ನಟನೆಯತ್ತ ಗಮನ ಹರಿಸುತ್ತಾರೆ.

ಮ್ಯಾನೇಜರ್‌ಗಳು ಸಾಕಷ್ಟು ಬಾರಿ ಮೋಸ ಮಾಡಿರುವ ಉದಾಹರಣೆಗಳಿವೆ. ಅತಿಯಾಗಿ ನಂಬಿ ಎಲ್ಲಾ ವ್ಯವಹಾರವನ್ನು ಅವರಿಗೆ ವಹಿಸಿದ ಮೇಲೆ ಕೆಲವೊಮ್ಮೆ ಮ್ಯಾಜೇನರ್‌ಗಳು ಹಣ ಲಪಟಾಯಿಸುವ ಸಾಧ್ಯತೆ ಇರುತ್ತದೆ. ಇನ್ನು ರಶ್ಮಿಕಾ ರೀತಿ ಭಾಷೆ ಗೊತ್ತಿಲ್ಲದವರು ಹೊಸ ಇಂಡಸ್ಟ್ರಿಗೆ ಹೋದಾಗ ಇಂತಹವರನ್ನೇ ಅವಲಂಬಿಸಬೇಕಾಗುತ್ತದೆ. ಇತ್ತೀಚೆಗೆ ತೆಲುಗು ನಟ ಸಾಯಿ ಧರಮ್ ತೇಜ್ ತನ್ನ ಮ್ಯಾನೇಜರ್‌ನ ಬದಲಿಸಿದ್ದರು. ಇದೀಗ ರಶ್ಮಿಕಾ ಸರದಿ.
ಕನ್ನಡದ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ನಂತರ ಟಾಲಿವುಡ್ ಪ್ರವೇಶಿಸಿ ಸಕ್ಸಸ್ ಕಂಡರು. ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಎಲ್ಲರ ಹುಬ್ಬೇರಿಸಿದರು. ಬಳಿಕ ಬಾಲಿವುಡ್ ಪ್ರವೇಶಿಸಿ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಂಡರು. ಹೀಗೆ ದಿಢೀರನೇ ಕ್ರೇಜ್ ಹೆಚ್ಚಿಸಿಕೊಂಡ ರಶ್ಮಿಕಾ, ಸಂಭಾವೆ ಕೂಡ ರಾಕೆಟ್ ವೇಗದಲ್ಲಿ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಆಕೆಯ ಮ್ಯಾನೇಜರ್ ಜವಾಬ್ದಾರಿ, ಸಂಭಾವನೆ ಕೂಡ ಅಧಿಕವಾಗಿತ್ತು.
ರಶ್ಮಿಕಾಗೆ 80 ಲಕ್ಷ ರೂ. ಮೋಸ
ಕೆಲ ವರ್ಷಗಳಿಂದ ರಶ್ಮಿಕಾ ಜೊತೆಗಿದ್ದ ಮ್ಯಾನೇಜರ್ ಈಗ ಆಕೆಗೆ ಮೋಸ ಮಾಡಿರುವುದಾಗಿ ಗುಸುಗುಸು ಕೇಳಿಬರ್ತಿದೆ. ಬರೋಬ್ಬರಿ 80 ಲಕ್ಷ ರೂ.ವರೆಗೂ ತಪ್ಪು ಲೆಕ್ಕ ತೋರಿಸಿ ಆತ ಲಪಟಾಯಿಸಿರುವುದಾಗಿ ಹೇಳಲಾಗ್ತಿದೆ. ಆತ ಮೋಸ ಮಾಡಿ ಹಣ ಗುಳುಂ ಮಾಡಿರುವ ವಿಚಾರ ಗೊತ್ತಾಗುತ್ತಿದ್ದಂತೆ ರಶ್ಮಿಕಾ ಕ್ರಮ ಕೈಗೊಂಡಿದ್ದಾರಂತೆ. ಸತ್ಯ ಗೊತ್ತಾಗುತ್ತಿದ್ದಂತೆ ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ಟಾಲವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ದೊಡ್ಡ ಸಿನಿಮಾಗಳಲ್ಲಿ ರಶ್ಮಿಕಾ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನುಳಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತೆಲುಗಿನ 'ಪುಷ್ಪ- 2' ಹಾಗೂ ಹಿಂದಿಯ 'ಅನಿಮಲ್' ಸಿನಿಮಾಗಳಲ್ಲಿ ರೋಶ್ ಬಣ್ಣ ಹಚ್ಚಿದ್ದಾರೆ. 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ. 'ಭೀಷ್ಮ' ಕಾಂಬಿನೇಷನ್‌ನಲ್ಲಿ ಮತ್ತೆ ನಿತಿನ್ ಜೋಡಿಯಾಗಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಕನ್ನಡದಲ್ಲಿ ನಟಿಸ್ತಿಲ್ಲ
ಧ್ರುವ ಸರ್ಜಾ ಜೊತೆ ರಶ್ಮಿಕಾ 'ಪೊಗರು' ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಮತ್ಯಾವುದೇ ಕನ್ನಡ ಚಿತ್ರಕ್ಕೆ ಆಕೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಸದ್ಯಕ್ಕೆ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸೋ ಆಲೋಚನೆ ಇದ್ದಂತೆ ಇಲ್ಲ. ಬರೀ ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಾತ್ರ ಕೊಡಗಿನ ಕುವರಿ ಮಿಂಚುತ್ತಿದ್ದಾರೆ. ಬಾಲಿವುಡ್‌ನಲ್ಲಿ ಮತ್ತಷ್ಟು ಸಿನಿಮಾಗಳ ಚರ್ಚೆ ನಡೀತಿದೆ. ಅಭಿಮಾನಿಗಳಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗಲಿದೆ.


Click it and Unblock the Notifications











