ಚಿತ್ರರಂಗಕ್ಕೆ ಸೌಂದರ್ಯಾ ಜಯಮಾಲಾ ಗುಡ್ ಬೈ!?
ಕಣ್ಣಲ್ಲಿ ಕೋಲ್ಮಿಂಚು, ಅಭಿನಯದಲ್ಲಿ ಅಮ್ಮನ ಪಡಿಯಚ್ಚು, ಹೆಸರಿಗೆ ತಕ್ಕ 'ಸೌಂದರ್ಯ', ಅಮ್ಮನಿಗೆ ತಕ್ಕ ಮಗಳು ನಟಿ ಸೌಂದರ್ಯಾ ಜಯಮಾಲಾ. ಚಿತ್ರರಂಗಕ್ಕೆ ಕಾಲಿಟ್ಟಾಗ ಸೌಂದರ್ಯಾ, ಅಮ್ಮನಂತೆ ಪ್ರತಿಭಾನ್ವಿತ ನಟಿಯಾಗಿ ಬೆಳೆಯುತ್ತಾರೆ ಅಂತ ಇಡೀ ಗಾಂಧಿನಗರ ಊಹಿಸಿತ್ತು.
ಅದರಂತೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸಿದ್ದ ಮೊದಲ ಚಿತ್ರ 'ಗಾಡ್ ಫಾದರ್' ನಲ್ಲಿ ಸೌಂದರ್ಯಾ ಪ್ರತಿಭೆ ಅನಾವರಣವಾಯ್ತು. ಇದರ ಬೆನ್ನಲ್ಲೇ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ಸೌಂದರ್ಯಾ, ಎರಡು ವರ್ಷದಲ್ಲಿ ನಟಿಸಿರುವುದು ಕೇವಲ ನಾಲ್ಕು ಸಿನಿಮಾಗಳು. [ಸಿಂಹಾದ್ರಿ ಚಿತ್ರವಿಮರ್ಶೆ: ನಾಡಿನ ಸಮಸ್ತ ತಂಗಿಯರಿಗೆ ಅರ್ಪಣೆ]

ಜಯಮಾಲಮ್ಮನ ಮುದ್ದಿನ ಮಗಳಾಗಿ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ, ಪಾತ್ರದ ಮಹತ್ವಕ್ಕೆ ಬೆಲೆಕೊಡುತ್ತಿದ್ದ ಸೌಂದರ್ಯಾ, ಇದೀಗ ಬಣ್ಣದ ಬದುಕಿಗೆ ಗುಡ್ ಬೈ ಹೇಳುವ ಆಲೋಚನೆಯಲ್ಲಿದ್ದಾರೆ. ನಟನೆಗಿಂತ ಹೆಚ್ಚಾಗಿ ಉದ್ಯಮಿಯಾಗುವತ್ತ ಅವರು ಗಮನ ಹರಿಸುತ್ತಿದ್ದಾರಂತೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಇನ್ನೂ ಅಮ್ಮ ಜಯಮಾಲಾ ಕೂಡ, ''ಮಗಳು ನಟಿಸಿದ್ದು ಸಾಕು, ಬೇಗ ಮದುವೆ ಮಾಡಬೇಕು'' ಅಂತ ವರಾನ್ವೇಷಣೆಯಲ್ಲಿ ತೊಡಗಿದ್ದಾರಂತೆ. ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಹುಡುಗರನ್ನ ಕಂಡರೆ, ''ಇವನು ನನ್ನ ಅಳಿಯ ಆದ್ರೆ, ಎಷ್ಟು ಚೆನ್ನಾಗಿರುತ್ತೆ'', ಅಂತ ನಿಜ ಜೀವನದಲ್ಲಿ ಅತ್ತೆಯಾಗುವ ಕನಸು ಕಾಣುತ್ತಿದ್ದಾರೆ ಜಯಮಾಲಾ. [ಸೌಂದರ್ಯಾ ಸಿನಿ ಪ್ರವೇಶ ಕನ್ನಡದಿಂದಲೇ ಆರಂಭ!]

ನಿಜ ಹೇಳ್ಬೇಕಂದ್ರೆ, ಜಯಮಾಲಾ ಅವರಿಗೂ ಮಗಳ ಸಿನಿಮಾ ಬದುಕು ಸಾಕ್ಹಾಗಿ ಹೋಗಿದ್ಯಂತೆ. ''ಈಗಿನ ಚಿತ್ರರಂಗದಲ್ಲಿ ಶಿಸ್ತಿಲ್ಲ. ರಾಜ್ ಕುಮಾರ್ ಇರುವಾಗ ಇದ್ದ ಚಿತ್ರರಂಗ ಈಗಿಲ್ಲ. ನನ್ನ ಸಹನೆಗೆ ಮಿತಿ ಮೀರಿದೆ. ಹೀಗಾಗಿ ನನ್ನ ಮಗಳು ಚಿತ್ರರಂಗದಲ್ಲಿ ಮುಂದುವರಿಯುವುದು ನನಗೆ ಸರಿ ಕಾಣುತ್ತಿಲ್ಲ. ಸೌಂದರ್ಯಾಗೆ ಉದ್ಯಮದ ಕಡೆ ಆಸಕ್ತಿ ಇದೆ. ಅವಳು ಅದರಲ್ಲೇ ಬೆಳಿಯಲಿ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಬೇಗ ಅತ್ತೆಯಾಗಬೇಕು ಅನ್ನುವ ಆಸೆ ನನಗಿದೆ''.

''ಇಲ್ಲಿವರೆಗೂ ತೆರೆಮೇಲೆ ಅನೇಕ ಚಿತ್ರಗಳಲ್ಲಿ ಅತ್ತೆಯಾಗಿ ಅಭಿನಯಿಸಿದ್ದೀನಿ. ರೀಲ್ ಅತ್ತೆ ಆಗಿದ್ದು ಸಾಕು. ಈಗಲಾದರೂ ನಾನು ರಿಯಲ್ ಅತ್ತೆ ಅನಿಸಿಕೊಳ್ಳಬೇಕು. ನನ್ನ ಮಗಳಿಗೂ ಮದುವೆಯ ವಯಸ್ಸಾಗಿದೆ. ಒಳ್ಳೆ ವರನನ್ನು ನೋಡುತ್ತಿದ್ದೇನೆ'', ಅಂತ ಆಪ್ತರ ಬಳಿ ಜಯಮಾಲಾ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡಿದ್ದಾರೆ. [ತೆಲುಗು ಚಿತ್ರದಲ್ಲಿ ಜಯಮಾಲಾ ಮಗಳು]
'ಸಿಂಹಾದ್ರಿ' ಚಿತ್ರ ಬಿಟ್ಟರೆ, ಸದ್ಯಕ್ಕೆ ಬೇರೆ ಇನ್ಯಾವ ಚಿತ್ರವನ್ನೂ ಸೌಂದರ್ಯಾ ಒಪ್ಪಿಕೊಂಡಿಲ್ಲ. ಇನ್ನೂ ಜಯಮಾಲಮ್ಮನ ಇಚ್ಛೆ ನೋಡಿದರೆ ಸೌಂದರ್ಯಾ ನಟನೆಯ ಬದುಕಿಗೆ ಪೂರ್ಣ ವಿರಾಮ ಬೀಳುವುದು ಪಕ್ಕಾ.

ಚಿತ್ರರಂಗದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಯಮಾಲಾ ಮತ್ತು ಅವರ ಮಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಅಂತದ್ದೇನಾಯ್ತು ಅನ್ನುವುದು ಸದ್ಯಕ್ಕೆ ಗುಟ್ಟಾಗಿದೆ. ಆದರೂ, ಅದನ್ನೆಲ್ಲಾ ಪಕ್ಕಕ್ಕಿಟ್ಟು ಮಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವ ಜಯಮಾಲಾಗೆ ಒಳ್ಳೆಯ ವರ ಸಿಕ್ಕರೆ, ವಾಲಗ ಊದಿಸಿ, ಮಗಳ ಮದುವೆ ಊಟ ಹಾಕಿಸುವುದು ಖಂಡಿತ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











