ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದು ಮಾದರಿಯಾದ ನಟಿ ಶ್ರೀಲೀಲಾ!
ಕನ್ನಡದ ನಟಿ ಶ್ರೀಲೀಲಾ ಅವರು ಸದ್ಯ ಸಾಲು, ಸಾಲು ಸಿನಿಮಾಗಳ ಮೂಲಕ ಸುದ್ದಿಯಲ್ಲಿ ಇದ್ದಾರೆ. ಶ್ರೀಲೀಲಾ ಅವರ ಅಭಿನಯದ 'ಬೈ ಟು ಲವ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹಾಗಾಗಿ ಇದೇ ಚಿತ್ರದ ವಿಚಾರವಾಗಿ ಶ್ರೀಲೀಲಾ ಸದಾ ಸುದ್ದಿಯಲ್ಲಿ ಇರುತ್ತಾರೆ. ಯಾಕೆಂದರೆ ಈ ಚಿತ್ರ ಇದೇ ಫೆಬ್ರವರಿ 18ಕ್ಕೆ ತೆರೆಗೆ ಬರುತ್ತಿದೆ.
ಈಗ ಸಿನಿಮಾ ಬಿಟ್ಟು ವಿಶೇಷ ಕಾರಣ ಒಂದಕ್ಕೆ ಶ್ರೀಲೀಲಾ ಸುದ್ದಿ ಆಗುತ್ತಿದ್ದಾರೆ. ಹೌದು ನಟಿ ಶ್ರೀಲೀಲಾ ತೆರೆಯ ಮೇಲೆ ಮಾತ್ರ ಅಲ್ಲ ನಿಜ ಜೀವನದಲ್ಲೂ ಕೂಡ ಹೀರೋಯಿನ್ ಆಗಿದ್ದಾರೆ. ನಟಿ ಶ್ರೀಲೀಲಾ ಅವರು ತಮ್ಮ ಜೀವನದಲ್ಲಿ ಉತ್ತಮ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಅವರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.
ನಟಿ ಶ್ರೀಲೀಲಾ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅದೂ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ ಎನ್ನುವುದು ವಿಶೇಷ. ಇನ್ನು ವಿಶೇಷ ಎಂದರೆ ಎಲ್ಲರೂ ಸುಂದರವಾಗಿರುವ, ಆರೋಗ್ಯವಾಗಿರುವ ಮಕ್ಕಳನ್ನೇ ದತ್ತು ಪಡೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೆ ಶ್ರೀಲೀಲಾ, ದಿವ್ಯಾಂಗ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಮಾದರಿಯಾಗಿದ್ದಾರೆ.

ಶ್ರೀಲೀಲಾ ಬಾಳಿಗೆ ದತ್ತು ಮಕ್ಕಳ ಎಂಟ್ರಿ!
ನಟಿ ಶ್ರೀಲೀಲಾ ಅವರು ಸಿನಿಮಾಗಳಲ್ಲಿ ನಾಯಕಿ ಆಗಿ ಪಾತ್ರದ ಮೂಲಕ ಸಿನಿಮಾ ಪರದೆ ಮೇಲೆ ಇನ್ಯಾರಿಗೂ ಸಹಾಯ ಮಾಡುವ ಪಾತ್ರ ಮಾಡುವುದಷ್ಟೇ ಅಲ್ಲ. ಶ್ರೀಲೀಲಾ ತಮ್ಮ ನಿಜ ಬದುಕಿನಲ್ಲೂ ಕೂಡ ಉತ್ತಮ ಕೆಲಸವನ್ನು ಮಾಡಿದ್ದಾರೆ. ಇಬ್ಬರು ಅನಾಥ ದಿವ್ಯಾಂಗ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಈಗ ನಟಿ ಶ್ರೀಲೀಲಾ ಅವರದ್ದೇ ಆಗಿರುತ್ತದೆ. ಈ ಮೂಲಕ ಇಬ್ಬರು ಮಕ್ಕಳ ಬಾಳಿಗೆ ಈ ಯುವ ನಟಿ ಬೆಳಕಾಗಿದ್ದಾರೆ. ಶ್ರೀ ಮನೋವಿಕಾಸ ಕೇಂದ್ರದಿಂದ ಮಕ್ಕಳನ್ನು ಪಡೆದುಕೊಂಡಿದ್ದಾರೆ.

ಗುರು, ಶೋಭಿತ ಶ್ರೀಲೀಲಾ ದತ್ತು ಪಡೆದ ಮಕ್ಕಳು!
ಆಶ್ರಮದಿಂದ ಇಬ್ಬರು ಮಕ್ಕಳನ್ನು ನಟಿ ದತ್ತು ಸ್ವೀಕಾರ ಮಾಡಿದ್ದಾರೆ. ಅದರಲ್ಲಿ ಗುರು ಎಂಬ ಮಗು ಕೇವಲ 8 ತಿಂಗಳ ಮಗು. ಈ ಪುಟ್ಟ ಕಂದನ ಜೊತೆಗೆ, ಶೋಭಿತಾ ಎನ್ನುವ ಹೆಣ್ಣು ಮಗುವನ್ನು ಕೂಡ ಅವರು ದತ್ತು ಪಡೆದುಕೊಂಡಿದ್ದಾರೆ. ಮಕ್ಕಳನ್ನು ದತ್ತು ಪಡೆದುಕೊಂಡ ಬಳಿಕ ನಟಿ ಶ್ರೀಲೀಲಾ ಅವರು ಭಾವುಕರಾದರು.

ಸ್ಫೂರ್ತಿದಾಯಕ ಶ್ರೀಲೀಲಾ ಈ ಕಾಯಕ!
ನಟಿ ಶ್ರೀಲೀಲಾ ಮಾಡಿರುವ ಈ ಕಾಯಕ ನಿಜಕ್ಕೂ ಮಾದರಿಯ ಕೆಲಸ. ಹೀಗೆ ನಟಿಯರು ಅನಾಥ ಮಕ್ಕಳನ್ನು ದತ್ತು ಪಡೆಯುವುದು, ಮಕ್ಕಳನ್ನು ಸಾಕಿ ಸಲಹುವುದು ಬಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಬಹುದು. ಕನ್ನಡದ ನಟಿಯರು ಹೀಗೆ ಮಕ್ಕಳನ್ನು ದತ್ತು ಪಡೆದು ಬೆಳೆಸಿದ ಉದಾರಹಣೆಗಳು ತೀರಾ ಕಡಿಮೆ. ಅದರಲ್ಲೂ ಇತ್ತೀಚೆಗೆ ಯಾರೂ ಕೂಡ ಈ ರೀತಿಯ ಕೆಲಸಕ್ಕೆ ಕೈ ಹಾಕಿಲ್ಲ. ಶ್ರೀಲೀಲಾ ಅವರು ತಮ್ಮ ಕಿರಿಯ ವಯಸ್ಸಿನಲ್ಲಿ ಮಕ್ಕಳನ್ನು ದತ್ತು ಪಡೆದು ಮತ್ತೊಬ್ಬರಿಗೆ ಮಾದರಿ ಆಗಿದ್ದಾರೆ.

'ಬೈ ಟು ಲವ್' ಚಿತ್ರವೇ ಶ್ರೀಲೀಲಾಗೆ ಸ್ಫೂರ್ತಿ!
'ಬೈ ಟು ಲವ್' ಚಿತ್ರದಲ್ಲಿ ಮಗುವಿನ ಜೊತೆ ನಟಿಸಿದ್ದಾರೆ ಶ್ರೀಲೀಲಾ. ಆ ಮಗುವಿನೊಂದಿಗೆ ಶ್ರೀಲೀಲಾಗೆ ಬಂಧ ಬೆಸೆದಿದೆಯಂತೆ. ಜೊತೆಗೆ ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿನ ಮಕ್ಕಳನ್ನು ಕಂಡೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾಗಿ ಇಬ್ಬರು ಮಕ್ಕಳನ್ನ ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಜೊತೆಗೆ ಆಶ್ರಮದಲ್ಲಿ ಮಕ್ಕಳೊಂದಿಗೆ ಶ್ರೀಲೀಲಾ ಹೆಚ್ಚು ಸಮಯ ಕಳೆದಿದ್ದಾರೆ. ಈ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಸಿನಿಮಾ ಇವತ್ತಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದೆಯಂತೆ. 'ಬೈ ಟು ಲವ್' ಚಿತ್ರ ಇದೇ 18ಕ್ಕೆ ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.


Click it and Unblock the Notifications











