ಮತ್ತೆ ತಮಿಳಿಗೆ ಐಶ್ವರ್ಯಾ ರೈ: ಸ್ಟಾರ್ ನಟ ನಾಯಕ
ನಟಿ ಐಶ್ವರ್ಯಾ ರೈ ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಾರೆ. ಅದರಲ್ಲಿಯೂ ಐಶ್ವರ್ಯಾ ರೈಗೆ ಹಿಂದಿಗಿಂತಲೂ ತಮಿಳಿನಲ್ಲಿಯೇ ಒಳ್ಳೆಯ ಸಿನಿಮಾಗಳು ಸಿಕ್ಕಿರುವುದು ಹೆಚ್ಚು.
ಇತ್ತೀಚೆಗಷ್ಟೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ ರೈ, ಇದೀಗ ಮತ್ತೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹೌದು, ನಟಿ ಐಶ್ವರ್ಯಾ ರೈ ಮತ್ತೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ಸ್ಟಾರ್ ನಟ ಅಜಿತ್ ಕುಮಾರ್ ನಾಯಕ ನಟನಾಗಿ ನಟಿಸಲಿದ್ದಾರೆ. ಐಶ್ವರ್ಯಾ ರೈರ ಈ ಹಿಂದಿನ ಸಿನಿಮಾಗಳ ರೀತಿಯಲ್ಲಿಯೇ ಮಹಿಳಾ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವ ಸಿನಿಮಾ ಎನ್ನಲಾಗುತ್ತಿದೆ.

ಅಜಿತ್ ಕುಮಾರ್ ಈಗಷ್ಟೆ 'ತುನಿವು' ಮೂಲಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಇದೀಗ ಮತ್ತೊಂದು ಹೊಸ ಸಿನಿಮಾಕ್ಕೆ ತಯಾರಾಗಿದ್ದು, ಸಿನಿಮಾವನ್ನು ಜನಪ್ರಿಯ ನಿರ್ದೇಶಕ, ನಯನತಾರ ಪತಿ ವಿಗ್ನೇಶ್ ಶಿವನ್ ನಿರ್ದೇಶನ ಮಾಡಲಿದ್ದಾರೆ.
ಅಜಿತ್‌ಕುಮಾರ್ ಹಾಗೂ ಐಶ್ವರ್ಯಾ ರೈ ನಟಿಸಲಿರುವ ಈ ಸಿನಿಮಾ ಆಕ್ಷನ್-ಕಾಮಿಡಿ ಸಿನಿಮಾ ಆಗಿರಲಿದೆ. ಈ ರೀತಿಯ ಪಾತ್ರದಲ್ಲಿ ಅಜಿತ್ ಹಿಂದೆಂದೂ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದ್ದು, ಮಾಸ್ ಆಕ್ಷನ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಅಜಿತ್, ಈ ಸಿನಿಮಾ ಮೂಲಕ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲಿದ್ದಾರೆ ಎನ್ನಲಾಗುತ್ತಿದೆ.
ಐಶ್ವರ್ಯಾ ರೈ ನಟನೆಯ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಸೂಪರ್ ಹಿಟ್ ಆಗಿದ್ದು, 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಇದರ ನಡುವೆ ಅಜಿತ್ ಕುಮಾರ್ ಜೊತೆಗಿನ ಹೊಸ ಸಿನಿಮಾ ಪ್ರಾರಂಭಿಸಲಿದ್ದಾರೆ ಐಶ್ವರ್ಯಾ ರೈ.
ಐಶ್ವರ್ಯಾ ರೈ ಹಾಗೂ ಅಜಿತ್ ಕುಮಾರ್ ಒಟ್ಟಿಗೆ ನಟಿಸುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ 2000 ರಲ್ಲಿ ಬಿಡುಗಡೆ ಆಗಿದ್ದ 'ಕಂಡುಕುಂಡೇನ್ ಕಂಡುಕುಂಡೇನ್' ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು.
ಐಶ್ವರ್ಯಾ ರೈ ನಟನೆಗೆ ಕಾಲಿಟ್ಟಿದ್ದೇ ತಮಿಳು ಸಿನಿಮಾ ಮೂಲಕ. ಮಣಿರತ್ನಂ ನಿರ್ದೇಶನದ 'ಇರುವರ್' ತಮಿಳು ಸಿನಿಮಾ ಮೂಲಕ ಐಶ್ವರ್ಯಾ ರೈ ನಟನೆ ಆರಂಭಿಸಿದರು. ಈ ವರೆಗೆ ಏಳು ತಮಿಳು ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಅದರಲ್ಲಿ ಆರು ಬಿಡುಗಡೆ ಆಗಿದ್ದು, 'ಪೊನ್ನಿಯಿನ್ ಸೆಲ್ವನ್ 2' ಶೀಘ್ರವೇ ಬಿಡುಗಡೆ ಆಗಲಿದೆ. ಇದೀಗ ಎಂಟನೇ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.


Click it and Unblock the Notifications











