ಗಂಡನಿಗೆ ಅವಮಾನ? ಸ್ಟಾರ್ ನಟನ ಮೇಲೆ ಮುನಿಸಿಕೊಂಡ ನಯನತಾರಾ ಶಪಥ?
ಕಾಲಿವುಡ್ ಕ್ಯೂಟ್ ಜೋಡಿ ನಯನತಾರಾ- ವಿಘ್ನೇಶ್ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವಳಿ ಮಕ್ಳ ಲಾಲನೆ ಪಾಲನೆ ಜೊತೆಗೆ ಸಿನಿಮಾ ಶೂಟಿಂಗ್, ಪ್ರಮೋಷನ್, ಪ್ರೊಡಕ್ಷನ್ ಕಂಪೆನಿ ಅಂತೆಲ್ಲಾ ಓಡಾಡುತ್ತಿದ್ದಾರೆ. ಆದರೆ ಇವರಿಬ್ಬರ ವಿಚಾರದಲ್ಲಿ ವದಂತಿವೊಂದರ ಹರಿದಾಡುತ್ತಿದೆ.
ವಿಘ್ನೇಶ್- ನಯನ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾದ 5 ತಿಂಗಳಿಗೆ ಸಾರೋಗಸಿ ವಿಧಾನದಲ್ಲಿ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದರು. ಇನ್ನು ಇತ್ತೀಚೆಗೆ ನಯನತಾರಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ತಮ್ಮ ರೌಡಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಹಾರರ್ ಥ್ರಿಲ್ಲರ್ 'ಕನೆಕ್ಟ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್ 22ಕ್ಕೆ ಬಿಡುಗಡೆಯಾಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಶಾರುಖ್ ಖಾನ್ ನಟನೆಯ 'ಜವಾನ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಯನತಾರ ನಟಿಸುತ್ತಿದ್ದಾರೆ.
ವಿಘ್ನೇಶ್ ಶಿವನ್ ಕೂಡ ವಿಭಿನ್ನ ಸಿನಿಮಾಗಳಿಂದ ಕಾಲಿವುಡ್‌ನ ಭರವಸೆಯ ನಿರ್ದೇಶನ ಎನಿಸಿಕೊಂಡಿದ್ದಾರೆ. ವಿಕ್ಕಿ ನಿರ್ದೇಶನದ 'ನಾನುಂ ರೌಡಿತಾನ್' ಚಿತ್ರದಲ್ಲಿ 7 ವರ್ಷಗಳ ಹಿಂದೆ ನಯನ್ ನಟಿಸಿದ್ದರು. ಆಗ ಇಬ್ಬರ ನಡುವೆ ಪರಿಚಯ ಶುರುವಾಗಿತ್ತು. ಅದು ಪ್ರೀತಿಗೆ ತಿರುಗಿ ಮದುವೆವರೆಗೆ ಸಾಗಿ ಬಂತು.

ವಿಕ್ಕಿ- ನಯನ್ ದಂಪತಿಗೆ ಮುಖಭಂಗ?
ಥಲಾ ಅಜಿತ್ ನಟನೆಯ ಮುಂದಿನ ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಬೇಕಿತ್ತು. ಅಜಿತ್‌ಗೆ ಕಥೆಯನ್ನು ಹೇಳಿ ವಿಕ್ಕಿ ಒಪ್ಪಿಸಿದ್ದರಂತೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಇದ್ದಕ್ಕಿದ್ದಂತೆ ಅಜಿತ್ ಆ ಚಿತ್ರಕ್ಕೆ ನೋ ಎಂದಿದ್ದಾರಂತೆ. ಇದು ಸಹಜವಾಗಿಯೇ ನಯನತಾರ ಬೇಸರಕ್ಕೂ ಕಾರಣವಾಗಿದೆ ಎಂದು ಕಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ. ಮೊದಲ ಓಕೆ ಮಾಡಿ ಅಜಿತ್ ಈಗ ಯಾಕೆ ಸಿನಿಮಾ ಬೇಡ ಎನ್ನುತ್ತಿದ್ದಾರೆ ಎನ್ನುವುದು ವಿಕ್ಕಿ- ನಯನ್ ದಂಪತಿ ಪ್ರಶ್ನೆಯಾಗಿದೆಯಂತೆ.

ವಿಘ್ನೇಶ್ ಸಿನಿಮಾ ಕೈಬಿಟ್ಟ ಅಜಿತ್?
ವಿಘ್ನೇಶ್ 4 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎಲ್ಲವೂ ಒಂದು ಹಂತಕ್ಕೆ ಒಳ್ಳೆ ಹೆಸರು ತಂದುಕೊಟ್ಟಿದೆ. ಆದರೆ ಅಜಿತ್‌ಗೆ ಆಕ್ಷನ್ ಕಟ್ ಹೇಳಿದ್ದರೆ ವಿಕ್ಕಿ ಕ್ರೇಜ್ ಕೂಡ ಡಬಲ್ ಆಗ್ತಿತ್ತು. ಅದೇ ಕಾರಣಕ್ಕೆ ಬಹಳ ದಿನಗಳಿಂದ ಈ ಸ್ಕ್ರಿಪ್ಟ್‌ಗಾಗಿ ಕೆಲಸ ಮಾಡಿದ್ದರಂತೆ. ಆದರೆ ಅಜಿತ್ ಈಗ ಸಿನಿಮಾ ಬೇಡ ಎನ್ನುತ್ತಿರುವುದು ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದೆಯಂತೆ. ಇನ್ನು ಅಜಿತ್‌ಗೆ ಕಥೆ ಹೇಳಿ ಒಪ್ಪಿಸಲು ವಿಘ್ನೇಶ್‌ಗೆ ಪತ್ನಿ ನಯನತಾರ ಕೂಡ ಸಹಾಯ ಮಾಡಿದ್ದರಂತೆ. ಆದರೆ ಎಲ್ಲವೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಜಿತ್ ಈ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ನಯನತಾರ ಸಂಧಾನ ವ್ಯರ್ಥ
ನಯನತಾರ ಎಷ್ಟೇ ಪ್ರಯತ್ನಿಸಿದರೂ ಈ ಸಿನಿಮಾ ಸೆಟ್ಟೇರುವ ಸುಳಿವು ಸಿಗುತ್ತಿಲ್ಲವಂತೆ. ಹಾಗಾಗಿ ಆಕೆಗೂ ಮುಖಭಂಗ ಆಗಿದೆ ಎನ್ನುವುದು ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅಂದಹಾಗೆ ಅಜಿತ್ ಜೋಡಿಯಾಗಿ ನಯನತಾರ 'ಬಿಲ್ಲಾ', 'ಆರಂಭಂ' ಹಾಗೂ 'ವಿಶ್ವಾಸಂ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ಸಲುಗೆಯಿಂದ ಪತಿ ವಿಘ್ನೇಶ್ ಶಿವನ್ ಪ್ರಾಜೆಕ್ಟ್ ಟೇಕಾಫ್ ಆಗಲು ಮುಂದೆ ನಿಂತಿದ್ದರಂತೆ.

ಅಜಿತ್ ಜೊತೆ ನಯನ್ ನಟಿಸಲ್ವಾ?
ಇಷ್ಟೆಲ್ಲಾ ಆದಮೇಲೆ ಇನ್ಮುಂದೆ ಅಜಿತ್ ಜೊತೆ ನಾನು ನಟಿಸುವುದಿಲ್ಲ ಎಂದು ನಯನತಾರಾ ಹೇಳುತ್ತಿದ್ದಾರೆ. ಇವರಿಬ್ಬರದ್ದು ಹಿಟ್ ಪೇರ್. ಹಾಗಾಗಿ ಇವರಿಬ್ಬರು ಒಟ್ಟಿಗೆ ನಟಿಸಲ್ಲ ಎನ್ನುವುದು ಇಬ್ಬರ ಅಭಿಮಾನಿಗಳಿಗೂ ಬೇಸರ ತರಿಸಿದೆ. ಅಜಿತ್ ನಟನೆಯ 'ಥುನಿವು' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 'ಥುನಿವು' ನಂತರ ಅಜಿತ್ ಮತ್ಯಾವುದೇ ಸಿನಿಮಾಗೂ ಇನ್ನು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.


Click it and Unblock the Notifications











