For Quick Alerts
  ALLOW NOTIFICATIONS  
  For Daily Alerts

  ಸಿ. ಅಶ್ವತ್‌ಗೆ 2ಲಕ್ಷ ರು. ಸಂದಾಯ,ಅಂತ್ಯಗೊಂಡ ಅಕ್ಕಾ ಚೆಕ್‌ ವಿವಾದ

  By Staff
  |

  ಬೆಂಗಳೂರು : ಮನುಜ ಮತ - ವಿಶ್ವಪಥದ ರೂವಾರಿ ಗಾಯಕ ಸಿ. ಅಶ್ವತ್‌ ಅವರಿಗೆ akka 2ಲಕ್ಷ 10 ಸಾವಿರ ರುಪಾಯಿಗಳ ನಗದು ಸಂದಾಯ ಮಾಡಿ ಬೌನ್ಸ್‌ ಆಗಿದ್ದ ಚೆಕ್‌ ವಾಪಸ್‌ ಪಡೆಯುವ ಮೂಲಕ ಅಕ್ಕಾ ಹಾಗೂ ಅಶ್ವತ್‌ ನಡುವಿನ ಚೆಕ್‌ ವಿವಾದ ಸುಖಾಂತ್ಯ ಕಂಡಿದೆ.

  ಮಂಗಳವಾರ ಸಂಜೆ ಅಕ್ಕಾ ಪ್ರತಿನಿಧಿ ಹಾಗೂ ಟ್ರಸ್ಟಿಗಳಲ್ಲೊಬ್ಬರಾದ ಪ್ರಭುದೇವ್‌ ಅವರು ಅಶ್ವತ್‌ ಅವರ ವಕೀಲರಾದ ಅರವಿಂದ ಕುಮಾರ್‌ ಅವರ ಸಮ್ಮುಖದಲ್ಲಿ ಆಗಿಹೋದ ಕಹಿ ಘಟನೆಗೆ ವಿಷಾದ ವ್ಯಕ್ತಪಡಿಸಿ, ಸಿ. ಅಶ್ವತ್‌ ಅವರಿಗೆ 2ಲಕ್ಷ 10 ಸಾವಿರ ರುಪಾಯಿಗಳನ್ನು ನೀಡಿ, ಚೆಕ್‌ ವಾಪಸ್‌ ಪಡೆದಿದ್ದಾರೆ.

  ಅಶ್ವತ್‌ ಪ್ರತಿಕ್ರಿಯೆ : ಇದು ಕೇವಲ ಕಾಲದ ಸಂಚಿನ ಫಲಶ್ರುತಿ ಎಂದು ಅಶ್ವತ್‌ ಕನ್ನಡ. ಇಂಡಿಯಾ ಇನ್‌ಫೋಗೆ ತಿಳಿಸಿದ್ದಾರೆ. ನಾನು ಆತುರ ನಿರ್ಧಾರವನ್ನೇನೂ ಕೈಗೊಂಡಿರಲಿಲ್ಲ, ಪತ್ರಿಕೆಗಳ ಬಳಿಗೆ ಹೋಗಿ ನನ್ನ ನೋವನ್ನೂ ತೋಡಿಕೊಂಡಿರಲಿಲ್ಲ, ನಾನು ಬ್ಯಾಂಕ್‌ನಲ್ಲಿ ಚೆಕ್‌ ನೀಡಿ ಡಿಸ್ಕೌಂಟ್‌ ಮಾಡಿಸಿ ಹಣ ಪಡೆದಿದ್ದೆ, ಚೆಕ್‌ ಬೌನ್ಸ್‌ ಆದ ನಂತರ ಬ್ಯಾಂಕ್‌ನವರು ನಾನು ಮುಂಗಡವಾಗಿ ಪಡೆದಿದ್ದ ಹಣವನ್ನು ಕೂಡಲೇ ಹಿಂತಿರುಗಿಸುವಂತೆ ಸೂಚಿಸಿದರು, ಇದರಿಂದ ಬ್ಯಾಂಕ್‌ನಲ್ಲಿ ನಾನು ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಘನತೆಗೆ ಕುಂದುಂಟಾಯಿತು, ಮಿಗಿಲಾಗಿ ಅಲ್ಪ ಸಮಯದಲ್ಲೇ ಹಣ ಹೊಂದಿಸುವ ಅನಿವಾರ್ಯತೆಯೂ ನನಗೆ ಎದುರಾಯಿತು. ವಿಧಿಯಿಲ್ಲದೆ ಸ್ನೇಹಿತರ ಬಳಿ ನೆರವಿಗಾಗಿ ಕೈಚಾಚುವಂತಾಯ್ತು, ಈ ಹಂತದಲ್ಲಿ ಸುದ್ದಿ ಒಬ್ಬರಿಂದ ಒಬ್ಬರಿಗೆ ಮುಟ್ಟಿ ಪತ್ರಿಕೆಗಳಿಗೆ ತಲುಪಿತೇ ವಿನಾ ನಾನಾಗಿ ಪತ್ರಿಕಾಗೋಷ್ಠಿ ಕರೆದು ಅಕ್ಕಾ ಹೆಸರಿಗೆ ಮಸಿ ಬಳಿಯಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಅಕ್ಕಾ ಬಗ್ಗೆ ನನಗೆ ಗೌರವವಿದೆ : akka ಬಗ್ಗೆ ಇಂದೂ ನನಗೆ ಅಪಾರ ಗೌರವವಿದೆ. ಇದನ್ನೊಂದು ಕೆಟ್ಟ ಕನಸು ಎಂದು ಎಲ್ಲರೂ ಮರೆಯೋಣ, ಈ ಪ್ರಕರಣದಿಂದ ಅಮೆರಿಕನ್ನಡಿಗರಾದ ನೋವಿನ ಬಗ್ಗೆ ನನಗೂ ನೋವಿದೆ. ಅಂದಿನ ಆ ಪರಿಸ್ಥಿತಿ ಹಾಗಿತ್ತು, ಅಪಾರ ನೋವು ಹಾಗೂ ಆಘಾತದಲ್ಲಿ 'ನಾನು ಉದ್ವೇಗದಲ್ಲಿ ಇನ್ನು ಎಂದೆಂದೂ ಅಮೆರಿಕಾಕ್ಕೆ ಹೋಗುವುದಿಲ್ಲ ಎಂದೆನೇ ವಿನಾ ಮನದಂತರಾಳದಿಂದ ಮಾತುಗಳು ಅವಲ್ಲ " ಎಂದು ಸ್ಪಷ್ಟಪಡಿಸಿದರು. ನನಗೆ ಹಣ ಬಂದೇ ಬರುತ್ತದೆ ಎಂದು ಗೊತ್ತಿತ್ತು. ಅಕ್ಕಾ ಬಗ್ಗೆ ನನಗೆ ನಂಬಿಕೆಯೂ ಇತ್ತು, ಆದದ್ದೆಲ್ಲಾ ಆಗಿ ಹೋಯಿತು. ಈಗ ಅದನ್ನೆಲ್ಲಾ ನಾವು ಮರೆಯಬೇಕು ಎಂದ ಅವರು, ಅಕ್ಕಾ ಆಹ್ವಾನಿಸಿದರೆ ಮತ್ತೆ ತಾವು ಅಮೆರಿಕೆಗೆ ಹೋಗಲು ಸಿದ್ಧ ಎಂದೂ ನುಡಿದರು.

  ಈ ವಿವಾದವನ್ನು ಮತ್ತಷ್ಟು ಜಟಿಲಗೊಳಿಸದೆ ಇಲ್ಲಿಗೇ ಮಂಗಳ ಹಾಡೋಣ ಎಂದು ಪದೇ ಪದೇ ಹೇಳಿದ ಅಶ್ವತ್‌, ಅಕ್ಕಾ ದವರಿಗೆ ಚೆಕ್‌ ನೀಡಿದ ಬಳಿಕವೂ ಒಂದು ತಿಂಗಳಿಗೂ ಹೆಚ್ಚು ಸಮಯಾಕಾಶವಿತ್ತು , ಆ ಅವಧಿಯಲ್ಲಿ ಅವರು ನನಗೆ ಫೋನ್‌ ಮಾಡಿ ವಿಷಯ ತಿಳಿಸಿದ್ದರೆ, ಈ ಕಹಿ ಘಟನೆ ಸಂಭವಿಸುತ್ತಲೇ ಇರಲಿಲ್ಲ ಎಂದು ಹೇಳಿದರು. ಮನುಜ ಮತ ವಿಶ್ವ ಪಥ ಕಾರ್ಯಕ್ರಮ ಸಾಂಗವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು. ನಾನು ಕಾರ್ಯಕ್ರಮಕ್ಕೆ ಹೋದ ಕಡೆಯಲ್ಲೆಲ್ಲಾ ನನ್ನನ್ನು ಬಹಳ ಆದರಾಭಿಮಾನದಿಂದ ನೋಡಿಕೊಂಡರು, ಅವರ ಹೃದಯ ಶ್ರೀಮಂತಿಕೆಗೆ ನಾನು ಆಭಾರಿ ಎಂದು ಹೇಳಿದ ಅಶ್ವತ್‌, ಅಕ್ಕಾಗೆ ಧನ್ಯವಾದ ಅರ್ಪಿಸಿದರು.

  ವಿರಸ ಇಲ್ಲ : ಅಕ್ಕಾ ಜತೆ ನನಗೆ ವಿರಸವಿಲ್ಲ. ಸುದ್ದಿ ಮಾಡುವುದೂ ನನ್ನ ಉದ್ದೇಶವಾಗಿರಲಿಲ್ಲ, ನನಗರಿವಿಲ್ಲದೆಯೇ ಇಷ್ಟೇಲ್ಲಾ ನಡೆದು ಹೋಯಿತು ಎಂದ ಅಶ್ವತ್‌ ಮತದಾನ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿಗೆ ಹೋಗುವ ಸಲುವಾಗಿ ಸಿದ್ಧತೆಗಳನ್ನು ನಡೆಸಿದ್ದರು. ಕೊನೆಯದಾಗಿ ಅವರು ಹೇಳಿದ್ದು, ಈ ಎಲ್ಲ ವಿವಾದಕ್ಕೆ ಜಯಸ್ವಾಮಿ ಅವರೊಬ್ಬರನ್ನೇ ಬಲಿ ಪಶು ಮಾಡುವುದು ತಪ್ಪು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X