'ಕಣ್ಣಪ್ಪ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಾತ್ರ ಏನು? ಎಷ್ಟು ಕೋಟಿ ಸಂಭಾವನೆ ಸಿಕ್ತು?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಗೊಮ್ಮೆ ಈಗೊಮ್ಮೆ ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಶಕಗಳ ಹಿಂದೆ 'ವಿಷ್ಣು ವಿಜಯ' ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಜನಿಕಾಂತ್ ನಟನೆಯ 'ರೋಬೊ-2' ಚಿತ್ರದಲ್ಲಿ ಕೂಡ ಮಿಂಚಿದ್ದರು. ಬಹಳ ದಿನಗಳ ಬಳಿಕ 'ಕಣ್ಣಪ್ಪ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಅಕ್ಷಯ್ ಕುಮಾರ್ ಕೈಯಲ್ಲಿ ಸದ್ಯ ಒಂದಲ್ಲ ಎರಡಲ್ಲ 10 ಸಿನಿಮಾಗಳಿವೆ. ಕನ್ನಡದ 'ಬೇಡರ ಕಣ್ಣಪ್ಪ' ರೀಮೆಕ್ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಅಕ್ಕಿ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಅಕ್ಷಯ್ ಕುಮಾರ್ ಅವರನ್ನು ಸ್ವಾಗತಿಸಿದ್ದರು. ಸದ್ದಿಲ್ಲದೇ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿ ಹೊರ ಬಂದಿದ್ದಾರೆ. ಇದಕ್ಕಾಗಿ ಭರ್ಜರಿ ಸಂಭಾವನೆ ಕೂಡ ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ.

ಮುಕೇಶ್ ಕುಮಾರ್ ಸಿಂಗ್ 'ಕಣ್ಣಪ್ಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಂಚು ವಿಷ್ಣು ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಮೋಹನ್ ಲಾಲ್, ಪ್ರಭಾಸ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಸಹ ತಂಡ ಸೇರುವ ಸಾಧ್ಯತೆಯಿದೆ. ಮಧೂ, ಬ್ರಹ್ಮಾನಂದಂ, ದೇವರಾಜ್, ಐಶ್ವರ್ಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಶಿವನ ಭಕ್ತ ಬೇಡರ ಕಣ್ಣಪ್ಪ ಪಾತ್ರದಲ್ಲಿ ವಿಷ್ಣು ಬಣ್ಣ ಹಚ್ಚಿದ್ದಾರೆ. ನ್ಯೂಜಿಲೆಂಡ್ ಕಾಡುಗಳಲ್ಲಿ ಚಿತ್ರೀಕರಣ ಮಾಡಿ ಬಂದಿದೆ ಚಿತ್ರತಂಡ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ ಎಲ್ಲಾ ಭಾಷೆಗಳ ಸ್ಟಾರ್ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಬಾಲಿವುಡ್‌ನಿಂದ ಅಕ್ಷಯ್ ಕುಮಾರ್ ಬಂದಿದ್ದಾರೆ. ಚಿತ್ರದಲ್ಲಿ ಶಿವನ ಪಾತ್ರದಲ್ಲಿ ಅಕ್ಕಿ ನಟಿಸಿದ್ದಾರೆ ಎನ್ನಲಾಗ್ತಿದೆ.

'ಓ ಮೈಗಾಡ್' ಚಿತ್ರದಲ್ಲಿ ಅಕ್ಷಯ್‌ಕುಮಾರ್ ಹೆಚ್ಚು ಕಮ್ಮಿ ಇದೇ ತರಹದ ಪಾತ್ರ ಮಾಡಿದ್ದರು. ಇನ್ನು ಮಂಚು ವಿಷ್ಣು ತಂದೆ ಮೋಹನ್ ಬಾಬು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇಂದಿನ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಈ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಲು ಅಕ್ಷಯ್ ಕುಮಾರ್ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.
ಕನ್ನಡದ 'ಬೇಡರ ಕಣ್ಣಪ್ಪ' ಆಧರಿಸಿ ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ದಶಕಗಳ ಹಿಂದೆ ಸಿನಿಮಾ ಮಾಡಿದ್ದರು. ಇದೇ ಕಥೆಯಲ್ಲಿ ಪ್ರಭಾಸ್ ನಟಿಸಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಲು ಯಂಗ್ ರೆಬಲ್ ಸ್ಟಾರ್ ಒಪ್ಪಿಕೊಂಡಿದ್ದಾರೆ. ಅಂದಹಾಗೆ 'ಬೇಡರ ಕಣ್ಣಪ್ಪ' ಕಥೆಯನ್ನು ಕೊಂಚ ಬದಲಿಸಿ 'ಶಿವ ಮೆಚ್ಚಿದ ಕಣ್ಣಪ್ಪ' ಸಿನಿಮಾ ಮಾಡಲಾಗಿತ್ತು. ಶಿವಣ್ಣ ಲೀಡ್ ರೋಲ್‌ನಲ್ಲಿ ಮಿಂಚಿದ್ದರು.
ಈ ವರ್ಷವೇ 'ಕಣ್ಣಪ್ಪ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಶೆಲ್ಡೊನ್ ಶಾ ಛಾಯಾಗ್ರಹಣ, ಸ್ಟೀಫನ್ ದೆವಸ್ಸಿ ಹಾಗೂ ಮಣಿಶರ್ಮ ಸಂಗೀತ ಚಿತ್ರಕ್ಕಿದೆ. 5 ವರ್ಷಗಳ ಹಿಂದೆಯೇ 'ಕಣ್ಣಪ್ಪ' ಚಿತ್ರಕ್ಕಾಗಿ ಮಂಚು ವಿಷ್ಣು ಮತ್ತವರ ತಂಡ ಕೆಲಸ ಆರಂಭಿಸಿತ್ತು. ವಿದೇಶಗಳಲ್ಲಿ ತೆರಳಿ ಲೊಕೇಶನ್ ಹುಡುಕಾಟ ನಡೆಸಿತ್ತು. ಅಷ್ಟರಲ್ಲಿ ಕೊರೊನಾ ಹಾವಳಿ ಶುರುವಾಗಿತ್ತು.
ಕೊರೊನಾ ಸಮಸ್ಯೆ ಕಳೆದು ಮತ್ತೆ ಚಿತ್ರರಂಗ ಚೇತರಿಸಿಕೊಳ್ಳುತ್ತಿದ್ದಂತೆ ಮಂಚು ವಿಷ್ಣು ತಮ್ಮ ಕನಸಿನ ಸಿನಿಮಾ ಕೈಗೆತ್ತಿಕೊಂಡಿದ್ದರು. ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಚಿತ್ರೀಕರಣದಕ್ಕೆ ಬೇಕಾದ ಪರಿಕರಗಳನ್ನು ಹೈದರಾಬಾದ್‌ನಿಂದ ನ್ಯೂಜಿಲೆಂಡ್‌ಗೆ ಕೊಂಡೊಯ್ದು ಚಿತ್ರೀಕರಣ ನಡೆಸಲಾಗಿತ್ತು.


Click it and Unblock the Notifications










