'ಪುಷ್ಪ' ಸಿನಿಮಾಕ್ಕೆ ಸೊಳ್ಳೆ ಕಾಟ: ಚಿತ್ರೀಕರಣ ಸ್ಥಗಿತ, ಸಂಕಷ್ಟದಲ್ಲಿ ಅಲ್ಲು-ರಶ್ಮಿಕಾ!
'ಪುಷ್ಪ' ಸಿನಿಮಾಕ್ಕೆ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇವೆ. ಸಿನಿಮಾ ಘೋಷಣೆ ಆಗುತ್ತಲೇ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ತಡವಾಗಿ ಆರಂಭವಾಯ್ತು. ಅದಾದ ನಂತರವೂ ಲಾಕ್‌ಡೌನ್, ಸೆಟ್‌ನಲ್ಲಿರುವವರಿಗೆ ಕೊರೊನಾ, ಮಳೆ, ಅರಣ್ಯ ಇಲಾಖೆ ತಕರಾರು ಇತರೆ ಕಾರಣಗಳಿಂದ ಚಿತ್ರೀಕರಣ ತಡವಾಗುತ್ತಲೇ ಸಾಗಿತ್ತು.
ಕೆಲವು ದಿನಗಳ ಹಿಂದೆ ಸಿನಿಮಾದ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಸುಕುಮಾರ್ ವಾರಕ್ಕೂ ಹೆಚ್ಚು ಕಾಲ ವಿಶ್ರಾಂತಿಗೆ ಒಳಪಟ್ಟರು, ಇನ್ನೇನು ಸುಕುಮಾರ್ ಹುಷಾರಾದರು ಎಂದುಕೊಳ್ಳುವಾಗಲೇ ಸಿನಿಮಾದ ನಾಯಕ ಅಲ್ಲು ಅರ್ಜುನ್ ಹಾಗೂ ನಾಯಕಿ ರಶ್ಮಿಕಾ ಮಂದಣ್ಣಗೆ ಡೆಂಗ್ಯೂ ಆಗಿದೆ!
ಅಲ್ಲು ಅರ್ಜುನ್, ರಶ್ಮಿಕಾಗೆ ಡೆಂಗ್ಯೂ ಆಗಿರುವ ಬಗ್ಗೆ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಮುಗಿಸಿ 'ಪುಷ್ಪ' ಸೆಟ್ ಸೇರಿಕೊಂಡ ಬಳಿಕ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ನಡೆಸುವಾಗ ನಾಯಕ-ನಾಯಕಿ ಇಬ್ಬರಿಗೂ ಡೆಂಗ್ಯೂ ಕಾಣಿಸಿಕೊಂಡಿದೆಯಂತೆ.

ಹಲವು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ
ರಶ್ಮಿಕಾ, ಅಲ್ಲುಗೆ ಮಾತ್ರವೇ ಅಲ್ಲದೆ ಚಿತ್ರತಂಡದ ಸುಮಾರು 20 ಮಂದಿಗೆ ಡೆಂಗ್ಯೂ ಆಗಿದೆ. ಹಲವು ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ರಶ್ಮಿಕಾಗೆ ಹೆಚ್ಚಿನ ರೋಗ ಲಕ್ಷಣಗಳು ಇಲ್ಲವಾದರೂ ಅಲ್ಲು ಅರ್ಜುನ್‌ಗೆ ಜ್ವರ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಡೆಂಗ್ಯೂ ಕಾರಣದಿಂದ 'ಪುಷ್ಪ' ಸಿನಿಮಾದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಚಿತ್ರತಂಡದ ಆರೋಗ್ಯ ಸುಧಾರಣೆ ಬಳಿಕ ಚಿತ್ರೀಕರಣ ಮುಂದುವರೆಸಲಾಗುತ್ತದೆ.

ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ
ರಕ್ತ ಚಂದನ ಸಾಗಾಟ ಮಾಡುವ ವ್ಯಕ್ತಿಯೊಬ್ಬನ ಕತೆ 'ಪುಷ್ಪ' ಸಿನಿಮಾ. ಹಾಗಾಗಿ ಅರಣ್ಯ ಪ್ರದೇಶ, ಹಳ್ಳಿಗಾಡು ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ಸಮಯದಲ್ಲಿ ಸೊಳ್ಳೆಗಳ ಕಡಿತದಿಂದಾಗಿ ಸೆಟ್‌ನಲ್ಲಿನ ಹಲವರಿಗೆ ಡೆಂಗ್ಯೂ ಬಂದಿದೆ.

ಎರಡು ಭಾಗಗಳಲ್ಲಿ 'ಪುಷ್ಪ' ಬಿಡುಗಡೆ
'ಪುಷ್ಪ' ಸಿನಿಮಾವನ್ನು ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಕನ್ನಡದ ನಟ ಧನಂಜಯ್ ಸೇರಿದಂತೆ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್, ತಮಿಳಿನ ಚಿಯಾನ್ ವಿಕ್ರಂ ಸಹ ಇದ್ದಾರೆ. ಕಾಮಿಡಿ ನಟ ಸುನಿಲ್, ನಟ ಪ್ರಕಾಶ್ ರೈ ಸಹ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾ ಕೈಲಿವೆ ಹಲವು ಸಿನಿಮಾಗಳು
'ಪುಷ್ಪ' ಸಿನಿಮಾದ ನಾಯಕಿ ಕನ್ನಡತಿ ರಶ್ಮಿಕಾ ಮಂದಣ್ಣ ಈಗಷ್ಟೆ ಬಾಲಿವುಡ್‌ನ ಪ್ರಮುಖ ಸಿನಿಮಾದ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಲಕ್' ಸಿನಿಮಾದ ಚಿತ್ರೀಕರಣ ಮುಗಿದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನಟಿಸುತ್ತಿರುವ 'ಮಿಷನ್ ಮಜ್ನು' ಸಿನಿಮಾದ ಚಿತ್ರೀಕರಣ ಇನ್ನೂ ಬಾಕಿ ಇದೆ. ಇದರ ಜೊತೆಗೆ ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದ ಚಿತ್ರೀಕರಣದಲ್ಲಿಯೂ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











