ಇಂದ್ರಭವನದಂತ ಬಂಗಲೆ ನಿರ್ಮಿಸುತ್ತಿರುವ ಅಲ್ಲು ಅರ್ಜುನ್; ಖರ್ಚು ಎಷ್ಟು ಕೋಟಿ ಗೊತ್ತಾ?
ತೆಲುಗು ನಟ ಅಲ್ಲು ಅರ್ಜುನ್ ಹೈದರಾಬಾದ್ ಬಿಟ್ಟು ಮುಂಬೈಗೆ ಸೆಟ್ಲ್ ಆಗ್ತಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ವೈರಲ್ ಆಗಿತ್ತು. ಆದರೆ ಇದೆಲ್ಲಾ ಸುಳ್ಳು, 'ರಾಕಾ' ಚಿತ್ರಕ್ಕಾಗಿ ಕೆಲ ದಿನಗಳ ಕಾಲ ಸ್ಟೈಲಿಶ್ ಸ್ಟಾರ್ ಮುಂಬೈನಲ್ಲಿ ಉಳಿದುಕೊಳ್ಳುತ್ತಾರೆ ಎಂದು ತಂದೆ ಅಲ್ಲು ಅರವಿಂದ್ ಸ್ಪಷ್ಟನೆ ನೀಡಿದ್ದರು.
ಇದೀಗ ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ದೊಡ್ಡ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಫಿಲ್ಮ್‌ನಗರ್‌ನಲ್ಲಿ ಚರ್ಚೆ ನಡೀತಿದೆ. ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ಈ ಐಷಾರಾಮಿ ಬಂಗಲೆ ತಲೆ ಎತ್ತಲಿದೆ. ಈ ವರ್ಷವೇ ಗೃಹಪ್ರವೇಶ ಮಾಡುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 4 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅರಮನೆಯಂತಹ ಮನೆಯನ್ನು ಕಟ್ಟಿಸಲಾಗುತ್ತಿದೆ ಎಂದು ವರದಿಯಾಗಿದೆ.

ಸ್ಮಾರ್ಟ್ ತಂತ್ರಜ್ಞಾನ, ಉನ್ನತ-ಮಟ್ಟದ ವಸ್ತುಗಳು, ಕಸ್ಟಮ್ ಪೀಠೋಪಕರಣಗಳು, ವಿಶಾಲವಾದ ತೆರೆದ ವಿನ್ಯಾಸಗಳು, ಭಾರೀ ಭದ್ರತೆ ವ್ಯವಸ್ಥೆ ಎಲ್ಲವೂ ಇರುವಂತೆ ಮನೆಯನ್ನು ಅಲ್ಲು ಅರ್ಜುನ್ ನಿರ್ಮಿಸುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ಜೂಬ್ಲಿ ಹಿಲ್ಸ್‌ನಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ ಜೊತೆ ವಾಸಿಸುತ್ತಿದ್ದಾರೆ.
ಜೂಬ್ಲಿ ಹಿಲ್ಸ್‌ನ ಮತ್ತೊಂದು ಭಾಗದಲ್ಲಿ ನಟ ಚಿರಂಜೀವಿ ಐಷಾರಾಮಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈಗ ಸೋದರ ಮಾವನ ಮನೆಗೆ ಸಮೀಪದಲ್ಲಿ ಅಲ್ಲು ಅರ್ಜುನ್ ಹೊಸ ಮನೆ ತಲೆ ಎತ್ತುತ್ತಿದೆ ಎಂದು ಹೇಳಲಾಗ್ತಿದೆ. 'ಪುಷ್ಪ' ಸರಣಿ ಸಿನಿಮಾಗಳಲ್ಲಿ ನಟಿಸಿ ಅಲ್ಲು ಅರ್ಜುನ್ ಭಾರೀ ಸಂಭಾವನೆ ಪಡೆದಿದ್ದಾರೆ. ಬೇರೆ ಬೇರೆ ಮೂಲಗಳಿಂದ ಕೂಡ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಇದೀಗ ಹೊಸ ಬಂಗಲೆ ನಿರ್ಮಿಸಿಕೊಂಡು ಫ್ಯಾಮಿಲಿ ಜೊತೆ ನೆಲೆಸಲು ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ಪ್ರತಿಯೊಬ್ಬರ ಜೀವನದಲ್ಲಿ ಮನೆ ನಿರ್ಮಾಣ ಎನ್ನುವುದು ಬಹಳ ವಿಶೇಷವಾದ ಸಂಗತಿ. ಅಲ್ಲು ಅರ್ಜುನ್ ಈಗಾಗಲೇ ಎರಡ್ಮೂರು ಬಂಗಲೆ ಹೊಂದಿದ್ದಾರೆ. ಈಗ ನಿರ್ಮಿಸುತ್ತಿರುವ ಮನೆ ಬಹಳ ವಿಶೇಷ ಎನ್ನಲಾಗ್ತಿದೆ. ಪ್ರತಿ ಚಿತ್ರದ ಆದಾಯದಲ್ಲಿ ರೂಪಾಯಿಗೆ 30 ಪೈಸೆ ರೀತಿ ಅಲ್ಲು ಅರ್ಜುನ್ ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ. ಅಟ್ಲಿ ನಿರ್ದೇಶನದ 'ರಾಕಾ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ತಕ್ಕಂತೆ ಸ್ಟೈಲಿಶ್ ಸ್ಟಾರ್ ಸಂಭಾವನೆ ಪಡೆಯಲಿದ್ದಾರೆ.
800 ಕೋಟಿ ರೂ. ಬಜೆಟ್‌ನಲ್ಲಿ 'ರಾಕಾ' ಸಿನಿಮಾ ತಯಾರಾಗುತ್ತಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಚಿತ್ರದಲ್ಲಿ ಬಹಳ ವಿಭಿನ್ನವಾದ ಗೆಟಪ್‌ನಲ್ಲಿ ಐಕಾನ್ ಸ್ಟಾರ್ ನಟಿಸುತ್ತಿದ್ದಾರೆ. ಅದಕ್ಕಾಗಿ ವಿಭಿನ್ನ ಮೇಕಪ್ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿತ್ತು.
'ಜವಾನ್' ಸಿನಿಮಾ ಬಳಿಕ ಅಟ್ಲಿ 'ರಾಕಾ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಹಾಲಿವುಡ್ ಗ್ರಾಫಿಕ್ಸ್ ಸಂಸ್ಥೆಗಳು ಚಿತ್ರಕ್ಕಾಗಿ ಕೆಲಸ ಮಾಡುತ್ತಿವೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಲೆಕ್ಕಾಚಾರ ಶುರುವಾಗಿದೆ. ರಶ್ಮಿಕಾ ಮಂದಣ್ಣ, ರಮ್ಯಾಕೃಷ್ಣ ಸೇರಿ ಮತ್ತಷ್ಟು ಕಲಾವಿದರು ಚಿತ್ರತಂಡ ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ.
ಅಲ್ಲು ಅರ್ಜುನ್ ಮನಸ್ಸು ಹೈದರಾಬಾದ್‌ನಲ್ಲೇ ಇದೆ. ಇಲ್ಲೇ ಇಬ್ಬರು ಮಕ್ಕಳು ಓದುತ್ತಿದ್ದಾರೆ. ಆತನ ಸ್ನೇಹಿತರೆಲ್ಲಾ ಇಲ್ಲೇ ಇದ್ದಾರೆ. ಹಾಗಾಗಿ ಹೈದರಾಬಾದ್ ಬಿಟ್ಟು ಮುಂಬೈಗೆ ಹೋಗಿ ನೆಲೆಸುತ್ತಾರೆ ಎನ್ನುವುದು ಸುಳ್ಳು ಎಂದು ತಂದೆ ಅಲ್ಲು ಅರವಿಂದ್ ಹೇಳಿದ್ದರು. 'ಪುಷ್ಪ'-2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಇದೀಗ 'ಧುರಂಧರ್'- 2 ಆ ದಾಖಲೆ ಮುರಿದು 3ನೇ ಸ್ಥಾನಕ್ಕೇರಿದೆ. 'ದಂಗಲ್' ಹಾಗೂ 'ಬಾಹುಬಲಿ-'2' ಚಿತ್ರಗಳು ಮೊದಲ ಎರಡು ಸ್ಥಾನಗಳಲ್ಲಿವೆ.


Click it and Unblock the Notifications