ಅಲ್ಲು ಅರ್ಜುನ್ ನಟನೆಯ 'ರಾಕಾ' ಚಿತ್ರದಲ್ಲಿ ಉಪೇಂದ್ರ ಕೂಡ ಬಣ್ಣ ಹಚ್ತಾರಾ?
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ಟೈಟಲ್ ಘೋಷಣೆಯಾಗಿದೆ. ವಿಭಿನ್ನ ಲುಕ್‌ನಲ್ಲಿ 'ಪುಷ್ಪ' ಚಿತ್ರನಟ ಕಾಣಿಸಿಕೊಂಡಿರುವ ಪೋಸ್ಟರ್ ಕೂಡ ಅನಾವರಣವಾಗಿದೆ. ತಮಿಳು ನಿರ್ದೇಶಕ ಅಟ್ಲಿ ಈ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ.
ಬನ್ನಿ ಹುಟ್ಟುಹಬ್ಬದ ಸಂಭ್ರಮದಲ್ಲೇ 'ರಾಕಾ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ದರ್ಶನ ಕೊಟ್ಟಿದ್ದಾರೆ. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ದೀಪಿಕಾ ಪಡುಕೋಣೆ ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಬೇರೆ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆ ಊಹಾಪೋಹ ಶುರುವಾಗಿದೆ.

ಕನ್ನಡ ನಟ ಉಪೇಂದ್ರ ಕೂಡ 'ರಾಕಾ' ಚಿತ್ರದಲ್ಲಿ ನಟಿಸುತ್ತಾರಾ ಎನ್ನುವ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಅಲ್ಲು ಅರ್ಜುನ್‌ಗೆ ಉಪ್ಪಿ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 'ರಾಕಾ' ಚಿತ್ರದ ಪೋಸ್ಟರ್ ಶೇರ್ ಮಾಡಿ "ಹುಟ್ಟುಹಬ್ಬದ ಶುಭಾಶಯ ಬನ್ನಿಗಾರು.. ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ದೇವರ ಆಶೀರ್ವಾದ ಇರಲಿ.. ವಾವ್.. 'ರಾಕಾ' ಫಸ್ಟ್ ಲುಕ್ ನೋಡಿ ಎಕ್ಸೈಟ್ ಆಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಇದ್ದಕ್ಕಿದಂತೆ 'ರಾಕಾ' ಪೋಸ್ಟರ್ ಹಂಚಿಕೊಂಡು ಉಪ್ಪಿ ಹುಟ್ಟುಹಬ್ಬದ ಶುಭಾಶಯ ಕೋರಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಉಪೇಂದ್ರ ಕೂಡ ಅಪ್ಪಿ ತಪ್ಪಿ ಈ ಚಿತ್ರದಲ್ಲಿ ನಟಿಸ್ತಾರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಉಪೇಂದ್ರ ಬನ್ನಿ"ಗಾರು" ಎಂದು ಬರೆದಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಬನ್ನಿ "ಅವರು" ಎಂದು ಕನ್ನಡ ಪದ ಬಳಸಬಹುದಿತ್ತಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲು ಅರ್ಜುನ್ ನಟಿಸಿದ್ದ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ದೇವರಾಜ್ ನಾಯ್ಡು ಎಂಬ ಪವರ್‌ಫುಲ್ ಪಾತ್ರದಲ್ಲಿ ರಿಯಲ್ ಸ್ಟಾರ್ ಅಬ್ಬರಿಸಿದ್ದರು. ಹಾಗಾಗಿ ಅದೇ ಒಡನಾಟದಿಂದ ಈಗ ಅಲ್ಲು ಅರ್ಜುನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಅಷ್ಟೆ. 'ರಾಕಾ' ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಇದು ಬರೀ ಊಹಾಪೋಹ ಮಾತ್ರ. ಅಂತಹ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗ್ತಿದೆ.
ಸದ್ಯ 'ಭಾರ್ಗವ' ಎಂಬ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ನಾಗಣ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ನೆಕ್ಸ್ಟ್ ಲೆವೆಲ್' ಎಂಬ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅರವಿಂದ್ ಕೌಶಿಕ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. 'ರಾಕಾ' ಸಿನಿಮಾ ಬಗ್ಗೆ ಹೇಳುವುದಾದರೆ ಇದು ಸೈನ್ಸ್‌ಫಿಕ್ಷನ್ ಸಿನಿಮಾ. 'ಜವಾನ್' ಹಿಟ್ ಬಳಿಕ ಅಟ್ಲಿ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. 'ಪುಷ್ಪ' ಸರಣಿ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್, ಜಾನ್ವಿ ಕಪೂರ್ ಮತ್ತು ರಮ್ಯಾ ಕೃಷ್ಣನ್ ಕೂಡ 'ರಾಕಾ' ಚಿತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 800 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡಲಾಗ್ತಿದೆ. 'ಟಾಕ್ಸಿಕ್', 'ರಾಮಾಯಣ' ಹಾಗೂ 'ವಾರಣಾಸಿ' ಚಿತ್ರಗಳ ರೀತಿ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











