For Quick Alerts
  ALLOW NOTIFICATIONS  
  For Daily Alerts

  ಅಂಬಿ ಹುಟ್ಟು ಹಬ್ಬದಲ್ಲಿ ಮೀನು ಹಿಡಿದವರು

  By Staff
  |

  *ಸತ್ಯನಾರಾಯಣ

  ನಿನ್ನೆ ಮೊನ್ನೆ ಬಂದ ಉಪೇಂದ್ರನಿಗೆ ವಜ್ರದ ಕಿರೀಟ ತೊಡಿಸುವುದಾದರೆ ನಮ್ಮ ರೆಬೆಲ್‌ ಸ್ಟಾರ್‌ ಅಂಬರೀಶ್‌ ಏನು ಕಮ್ಮಿ . ಮೊನ್ನೆಯ ಅಂಬಿ ಹುಟ್ಟು ಹಬ್ಬ ಮತ್ತು ವಜ್ರದ ಕಿರೀಟ ಧಾರಣೆಯೆಂಬೋ ಸಮಾರಂಭ ನೆರವೇರುವುದಕ್ಕೆ ಇದೊಂದೇ ಕಾರಣವಲ್ಲ.

  ದಾವಣಗೆರೆಯ ನೆಹರೂ ಕ್ರೀಡಾಂಗಣದ ವೇದಿಕೆಯಲ್ಲಿ ಜಮಾಯಿಸಿದ್ದ ಪ್ರತಿಯಾಬ್ಬರಿಗೂ ಒಂದೊಂದು ಕನಸಿತ್ತು. ಅದೆಲ್ಲವೂ ಒಂದೇ ಏಟಿಗೆ ಸಾಕಾರಗೊಳ್ಳುವುದಕ್ಕೊಂದು ಸಂದರ್ಭ ಬೇಕಾಗಿತ್ತು. ಆಗ ಅನಾಯಾಸವಾಗಿ ಒದಗಿ ಬಂದಿದ್ದು ಅಂಬರೀಷ್‌ ಹುಟ್ಟು ಹಬ್ಬ.

  ಯಾವ ಆ್ಯಂಗಲ್‌ನಲ್ಲಿ ನೋಡಿದರೂ ದಾವಣಗೆರೆಯಲ್ಲಿ ಅಂಬರೀಶ್‌ ಹುಟ್ಟು ಹಬ್ಬದಾಚರಣೆಗೆ ಮೇಲ್ನೋಟಕ್ಕೆ ಕಾರಣಗಳು ಸಿಗುವುದಿಲ್ಲ. ಯಾಕೆಂದರೆ ಅಂಬರೀಶ್‌ ಮಂಡ್ಯದ ಗಂಡು, ದಾವಣಗೆರೆಯಲ್ಲಿ ಅವರ ಸಿನಿಮಾಗಳಿಗೂ ಅಂಥ ಡಿಮ್ಯಾಂಡಿಲ್ಲ. ರಾಜಕೀಯ ಮತ್ತು ಜಾತಿವಾರು ಲೆಕ್ಕಾಚಾರದಲ್ಲೂ ಅಂಬರೀಶ್‌ ಮತ್ತು ದಾವಣಗೆರೆ ಎರಡು ವಿಭಿನ್ನ ದಿಕ್ಕಲ್ಲೇ ನಿಲ್ಲುತ್ತವೆ.

  ಆದರೆ ಅಂಬರೀಶ್‌ ಅವರ ರಾಜಕೀಯ ಬದುಕಿಗೆ ಬಡ್ತಿ ಸಿಗಬೇಕಾಗಿದ್ದಲ್ಲಿ ಅವರು ಮಂಡ್ಯದ ಗಂಡಾಗಿಯೇ ಉಳಿದರಷ್ಟೇ ಸಾಕಾಗುವುದಿಲ್ಲ. ಅದೇ ಥರ ದಾವಣಗೆರೆಯ ಮಿನಿ ವಿನಾಯಕ ಮತ್ತು ಸಚಿವ ಬಿ. ಮಲ್ಲಿಕಾರ್ಜುನ ಅವರಿಗೂ ತುರ್ತಾಗಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಬಡ್ತಿ ಬೇಕಾಗಿದೆ. ದಾವಣಗೆರೆಯ ಡಿಸಿ ಮತ್ತು ಸಿನಿಮಾ ನಟ

  ಕೆ. ಶಿವರಾಂ ಅವರಿಗೆ ಇನ್ನೂ ಕೆಲ ಕಾಲ ದಾವಣಗೆರೆಯಲ್ಲೇ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಬೇಕಾಗಿದೆ. ಜೊತೆಗೆ ಸರಕಾರಿ ಅಧಿಕಾರಿಗಳು ಸಿನಿಮಾದಲ್ಲಿ ನಟಿಸಬಾರದು ಎನ್ನುವ ನಿಯಮಾವಳಿ ರದ್ದಾಗುವ ತನಕ ಅವರಿಗೆ ನೆಮ್ಮದಿಯಿಲ್ಲ.

  ಸರ್ವ ಸಮಾನರೆಂದು ಎಲ್ಲರನ್ನೂ ಉಪಚರಿಸಿದ ಪೊಲೀಸರು

  ಹೀಗೆ ಹಲವು ಮಹೋನ್ನತ ಧ್ಯೇಯೋದ್ದೇಶಗಳ ಸಲುವಾಗಿ ರೂಪಿತಗೊಂಡ ಹುಟ್ಟುಹಬ್ಬದಾಚರಣೆ ಕಾರ್ಯಕ್ರಮ, ಕೊನೆಗೆ ಎಲ್ಲಾ ಕಾಂಗ್ರೆಸ್‌ ಸಮಾರಂಭಗಳಂತೆಯೇ ದೊಂಬಿಯಲ್ಲಿ ಮುಕ್ತಾಯಗೊಂಡಿತು. ಬೆಂಗಳೂರಿನಿಂದ ಆಹ್ವಾನಿತ ಪತ್ರಕರ್ತರು ಮತ್ತು ನಿಲಯದ ಪತ್ರಕರ್ತರಿಗೆ ಪೊಲೀಸರಿಂದ ಭರ್ಜರಿ ಆತಿಥ್ಯ. ಅಂಬಿ ಮತ್ತು ವಿಷ್ಣು ದರ್ಶನಕ್ಕಾಗಿ ಬಂದಿದ್ದ ಲಕ್ಷಾಂತರ ಜನರಿಂದ ವೇದಿಕೆಯತ್ತ ಕಲ್ಲು ತೂರಾಟ, ವಜ್ರ ಕಿರೀಟಧಾರಣೆಯಾದ ಸ್ವಲ್ಪ ಹೊತ್ತಲ್ಲಿ ವೇದಿಕೆಗೆ ಚಪ್ಪಲಿಗಳು ತೂರಿ ಬಂದವು. ಕೊನೆಗೆ ಅದೊಂದು ಚಪ್ಪಲಿ ಅಂಗಡಿಯೇ ಆಗಿ ಹೋಯ್ತು.

  ಮುಖ್ಯ ಅತಿಥಿಗಳಾಗಿದ್ದ ಅಂಬರೀಶ್‌, ವಿಷ್ಣು, ರಾಜೇಂದ್ರ ಸಿಂಗ್‌ ಬಾಬು, ಜಯಂತಿ, ಪ್ರೇಮಾ, ಮೊದಲಾದವರೇ ವೇದಿಕೆ ತಲುಪುವುದಕ್ಕೆ ಹರಸಾಹಸ ಮಾಡಬೇಕಾಯ್ತು ಅಂದ ಮೇಲೆ ಹುಲುಮಾನವರ ಪಾಡೇನು.... ಅಲ್ಲಂ ವೀರಭಧ್ರಪ್ಪ, ಶಾಮನೂರು ಶಿವ ಶಂಕರಪ್ಪ, ಮಲ್ಲಿಕಾರ್ಜುನ್‌ ಆದಿಯಾಗಿ ಕಾಂಗ್ರೆಸ್‌ನ ಹಿರಿಕಿರಿ ನಾಯಕರೆಲ್ಲಾ ಅಲ್ಲಿ ಜಮಾಯಿಸಿದ್ದರು. ಅಂಬರೀಶ್‌ ಅವರು ತಮ್ಮ ಬಲಗೈ ಮತ್ತು ಎಡಗೈ ಬಂಟರೊಂದಿಗೆ, ಒಂದಿಷ್ಟು ನೆಂಟರೊಂದಿಗೆ ಬಂದಿದ್ದರು.

  ಅನಂತರ ಶುರುವಾಗಿದ್ದು ಪೊಲೀಸ್‌ ಪೆರೇಡ್‌. ಅವರ ಮೊದಲ ಗುರಿ ಫೋಟೋಗ್ರಾಫರ್ಸ್‌ ಮತ್ತು ಪತ್ರಕರ್ತರು. ಪೊಲೀಸರ ಹಲ್ಲೆಯಿಂದ ಬೇಸತ್ತ ಜನ ಗಲಾಟೆ ಶುರುಮಾಡಿದಾಗ ಅಂಬಿ ವೇದಿಕೆಯ ಅಂಚಿಗೆ ಬಂದು ಕೈ ಮುಗಿದು ಮನವಿ ಮಾಡಿದರು. ಇದು ನಿಮ್ಮೂರಿನ ಮರ್ಯಾದೆ ಪ್ರಶ್ನೆ. ದಯವಿಟ್ಟು ಗಲಾಟೆ ಮಾಡಬೇಡಿ. ಅದರಿಂದೇನೂ ಪ್ರಯೋಜನವಾಗಲಿಲ್ಲ.

  ಈ ಗಲಿಬಿಲಿಯ ನಡುವೆಯೇ ಭಾಷಣಗಳು ನಡೆದವು. ವಿಷ್ಣುವರ್ಧನ್‌ ಅವರು ತಮ್ಮ ಮತ್ತು ಅಂಬಿಯ ಸ್ನೇಹವನ್ನು ಗಂಡಹೆಂಡತಿ ಸಂಬಂಧಕ್ಕೆ ಹೋಲಿಸಿದ್ದು ತಮಾಷೆಯಾಗಿತ್ತು . ಅಂಬಿಗೆ ರಾಜಕೀಯ ಬದುಕಲ್ಲಿ ಬಡ್ತಿ ಸಿಗಲಿ ಅನ್ನುವ ಹಾರೈಕೆ, ತಾವು ಮಾತ್ರ ರಾಜಕೀಯಕ್ಕೆ ಖಂಡಿತಾ ಬರುವುದಿಲ್ಲ ಎಂಬ ಪ್ರಮಾಣವಚನ - ಇದು ವಿಷ್ಣು ಮಾತಿನ ಹೈಲೈಟ್‌.

  ಶಿವರಾಂಗೆ ಉಳಿದವು ಚಪ್ಪಲಿಗಳು : ರಾಜೇಂದ್ರ ಸಿಂಗ್‌ ಬಾಬು ತಮ್ಮ ಕೈಗೆ ಮೈಕು ಸಿಕ್ಕಿದ್ದೇ ತಡ, ಅಂಬಿ ಭಜನೆಯಿನ್ನು ತೋಡಿ ರಾಗದಲ್ಲಿ ಶುರುಹಚ್ಚಿಕೊಂಡರು. ಅಂಬರೀಶ್‌ ಅಪರೂಪಕ್ಕೋ ಎಂಬಂತ ಸೆನ್ಸಿಬಲ್‌ ಆಗಿ ಮೂರೇ ವಾಕ್ಯದಲ್ಲಿ ಮಾತು ಮುಗಿಸಿದರು. ತಾನಿನ್ನೂ ಪುಟ್ಟ ಹುಡುಗ ಅಂತಾನೇ ಅನಿಸ್ತಾ ಇದೆ ಅಂದರು. ಅವರಿಗೆ ಮೊನ್ನೆ 49 ತುಂಬಿತು.

  ಈ ನಡುವೆ ಕೆ. ಶಿವರಾಂ ಅವರ ಸುಭಾಷ್‌ ಚಿತ್ರದ ಕ್ಯಾಸೆಟ್‌ ಬಿಡುಗಡೆ, ಅವರ ಮಕ್ಕಳ ಡ್ಯಾನ್ಸ್‌ ಇತ್ಯಾದಿ ಮನರಂಜನೆಗಳು ನಡೆದವು. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಅಂಬಿ, ವಿಷ್ಣು ಮಾಯವಾದರು. ವೇದಿಕೆಯಲ್ಲಿ ಉಳಿದಿದ್ದ ಶಿವರಾಂಗೆ ಚಪ್ಪಲಿಗಳು ಉಡುಗೊರೆಯಾಗಿ ಬಂದವು.

  ವಾರ್ತಾ ಸಂಚಯ
  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X