ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾಗಿಂತ ಹೆಚ್ಚು ಸಂಭಾವನೆ ಪಡೆದ ಬಿಗ್ ಬಿ ಅಮಿತಾಬ್
ಟಾಲಿವುಡ್ ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷೆಯ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಹ ಸಿನಿಮಾತಂಡನೇ ಬಹಿರಂಗಪಡಿಸಿದೆ. ದಿಗ್ಗಜ ನಟನ ಎಂಟ್ರಿಯಿಂದ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಭಾಸ್ ಮತ್ತು ಅಮಿತಾಬ್ ಸಿನಿಮಾಗೆ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ನಟಿಸಲು ಅಮಿತಾಬ್, ದೀಪಿಕಾ ಪಡುಕೋಣೆಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಮೂಲಗಳ ಪ್ರಕಾರ ನಟಿ ದೀಪಿಕಾ ಪಡುಕೋಣೆ 12 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ದೀಪಿಕಾ ಸಂಭಾವನೆ 20 ಕೋಟಿ ಎಂದು ಕೇಳಿಬರುತ್ತಿತ್ತು. ಆದರೀಗ 12 ಕೋಟಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದೀಪಿಕಾಗಿಂತ ಅಮಿತಾಬ್ ಹೆಚ್ಚಿನ ಸಂಭಾವನೆ ಪಡೆಯುತಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ ತೆಲುಗು ಸಿನಿಮಾಗೆ ಅಮಿತಾಬ್ 20 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರಂತೆ. ಈ ಸಿನಿಮಾ ಕೇವಲ ತೆಲುಗು ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಅಮಿತಾಬ್ ಗೆಸ್ಟ್ ಪಾತ್ರದಲ್ಲಿ ಅಲ್ಲದೆ ಸಂಪೂರ್ಣವಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಭಾಸ್ ಪಾತ್ರದಷ್ಟೆ ಅಮಿತಾಬ್ ಪಾತ್ರ ಕೂಡ ಪವರ್ ಫುಲ್ ಆಗಿದೆಯಂತೆ. ಪೌರಾಣಿಕ-ಥ್ರಿಲ್ಲರ್ ಕಥೆಯಾಗಿದ್ದು, ಅಮಿತಾಬ್ ಪಾತ್ರ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪ್ರಭಾಸ್ ಮತ್ತು ದೀಪಿಕಾ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ತಮ್ಮ ಕೈಯಲ್ಲಿರುವ ಸಿನಿಮಾ ಮುಗಿಸಿ ಮುಂದಿನ ವರ್ಷ ಈ ಸಿನಿಮಾ ಪ್ರಾರಂಭಿಸುವ ಸಾಧ್ಯತೆ ಇದೆ.


Click it and Unblock the Notifications











