8 ವರ್ಷದ ನಂತರ ಚಿತ್ರರಂಗಕ್ಕೆ ಕೊಹ್ಲಿ ಪತ್ನಿ ? ಅಲ್ಲು ಅರ್ಜುನ್ ಜೊತೆ ಅನುಷ್ಕಾ ಶರ್ಮಾ ರೀ ಎಂಟ್ರಿ ?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಅಂತಹದ್ದರಲ್ಲಿ ಸೂಪರ್ ಸ್ಟಾರ್ ಜೊತೆ ಬ್ಲಾಕ್ ಬಸ್ಟರ್ ಡೈರೆಕ್ಟರ್ ಕೈ ಜೋಡಿಸಿದರೆ ಕೇಳಬೇಕಾ..? ಆ ಚಿತ್ರದ ಕುತೂಹಲದ ಕಡಲು ಆಗಿರುತ್ತೆ. ಉದಾಹರಣೆಗೆ ಅಲ್ಲು ಅರ್ಜುನ್ ಮತ್ತು ಆಟ್ಲೀ ಕಾಂಬಿನೇಷನ್‌ನಲ್ಲಿ ರೆಡಿಯಾಗುತ್ತಿರುವ ಸಿನಿಮಾ.
ಹೌದು, ಆಟ್ಲೀ.. ಕಾಲಿವುಡ್‌ನ ಸೋಲಿಲ್ಲದ ಸರದಾರ. ''ರಾಜರಾಣಿ'' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಆಟ್ಲೀ ದಳಪತಿ ವಿಜಯ್ ಜೊತೆ ಬ್ಯಾಕ್ ಟು ಬ್ಯಾಕ್ ಸಿನ್ಮಾ ಮಾಡಿದರು. ''ಥೇರಿ''.. ''ಮರ್ಸಲ್''.. ''ಬಿಗಿಲ್''ನಂತಹ ಬ್ಲಾಕ್‍ಬಸ್ಟರ್ ಚಿತ್ರಗಳನ್ನ ಕಾಲಿವುಡ್‍ಗೆ ಕಾಣಿಕೆಯನ್ನಾಗಿ ನೀಡಿದರು.

''ಬಿಗಿಲ್'' ನಂತರ ಸುಮಾರು 3 ವರ್ಷಗಳ ಕಾಲ ನಿರ್ದೇಶನದಿಂದ ದೂರ ಉಳಿದಿದ್ದ ಆಟ್ಲೀ, ''ಜವಾನ್'' ಚಿತ್ರದ ಮೂಲಕ ಬಿಗ್ ಕಂಬ್ಯಾಕ್ ಮಾಡಿದರು. ಸೌತ್ ಮಾತ್ರವಲ್ಲ ನಾರ್ತ್ ಸಿನಿಮಾ ಲೋಕವನ್ನು ಬೆಕ್ಕಸ ಬೆರಗಾಗಿಸಿದರು.
ಇಂಥಾ ಆಟ್ಲಿ ಈ ಬಾರಿ ಆಂಧ್ರದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸೇರಿ ಹಾಲಿವುಡ್‌ಗೆ ಸೆಡ್ಡು ಹೊಡೆಯುವ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯನ್ನು ಈ ಚಿತ್ರ ಹೊಂದಿರಲಿದೆ ಎನ್ನುವ ಸುದ್ದಿ ಇದೆ. ಸುಮಾರು 600 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕಾಗಿ ಹಾಲಿವುಡ್‌ನ ವಿಎಫ್‌ಎಕ್ಸ್ ತಂಡಗಳು ಕೆಲಸ ಮಾಡುತ್ತಿವೆ.
ತಮ್ಮ ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ಕೂಡ ಆಟ್ಲೀ ಕರೆತಂದಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕಸರತ್ತನ್ನೂ ಕೂಡ ಆಗಲೇ ಶುರು ಮಾಡಿದ್ದಾರೆ. ಹೀಗಿರುವಾಗ ಈ ಚಿತ್ರದ ಮೂಲಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
''ಡೆಕ್ಕನ್ ಕ್ರಾನಿಕಲ್'' ಈ ಕುರಿತು ವರದಿಯನ್ನು ಮಾಡಿದ್ದು, ಆ ಪ್ರಕಾರ ಈಗಾಗಲೇ ಅನುಷ್ಕಾ ಶರ್ಮಾ ಅವರ ಜೊತೆ ಆಟ್ಲೀ ಮಾತುಕತೆಯನ್ನು ನಡೆಸಿದ್ದಾರೆ. ಆದರೆ.. ಅನುಷ್ಕಾ ಶರ್ಮಾ ಒಪ್ಪಿದ್ದಾರಾ..? ಇಲ್ಲವಾ..? ಎನ್ನುವುದು ಇನ್ನೂ ಗೊತ್ತಾಗಬೇಕಿದೆ.

ಹಾಗೊಂದು ವೇಳೆ ಅನುಷ್ಕಾ ಶರ್ಮಾ ಒಪ್ಪಿಕೊಂಡಿದ್ದೇ ಆದಲ್ಲಿ 8 ವರ್ಷದ ನಂತರ ಚಿತ್ರರಂಗಕ್ಕೆ ಅನುಷ್ಕಾ ಶರ್ಮಾ ಮರಳಿದಂತೆ ಆಗಲಿದೆ. 2018ರಲ್ಲಿ ಬಂದ ''ಜೀರೋ'' ಚಿತ್ರವೇ ಕೊನೆ. ಆ ನಂತರ ಅನುಷ್ಕಾ ಬಣ್ಣದ ಲೋಕದತ್ತ ಮುಖ ಮಾಡಿರಲಿಲ್ಲ.
ನಡುವೆ ಮಹಿಳಾ ಕ್ರಿಕೆಟ್ ಲೋಕದ ದಂತಕಥೆ ಝೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ ''ಚಕ್ಡಾ ಎಕ್ಸ್‌ಪ್ರೆಸ್'' ಒಪ್ಪಿಕೊಂಡಿದ್ದರಾದರೂ ಆ ಚಿತ್ರ ಡಬ್ಬಾದಲ್ಲಿಯೇ ಉಳಿಯಿತು. ಈ ಹಿನ್ನೆಲೆ ತಮ್ಮ ಕಂಬ್ಯಾಕ್ ಚಿತ್ರಕ್ಕೆ ಅಲ್ಲು ಅರ್ಜುನ್ ಚಿತ್ರವನ್ನು ಅನುಷ್ಕಾ ಶರ್ಮಾ ಆಯ್ಕೆ ಮಾಡುತ್ತಾರಾ ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ.
ಅಟ್ಲೀ ಚಿತ್ರದಲ್ಲಿ ನಾಯಕಿಯರು ಕೇವಲ ಗ್ಲಾಮರ್ ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಆ ಪಾತ್ರಕ್ಕೆ ಪ್ರಾಮುಖ್ಯತೆ ಇರುತ್ತೆ. ಅನುಷ್ಕಾ ಶರ್ಮಾ ನಟನೆಯಲ್ಲಿ ಪಳಗಿದವರು. ಹೀಗಾಗಿ ಅನುಷ್ಕಾ ಅವರದ್ದು ಈ ಚಿತ್ರದಲ್ಲಿ ಅತಿಥಿ ಪಾತ್ರವಲ್ಲ ಬದಲಿಗೆ ಪವರ್ ಫುಲ್ ಪಾತ್ರ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.
ಏಪ್ರಿಲ್ 8ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಸಿನಿಮಾದ ಟೈಟಲ್ ಅನೌನ್ಸ್ ಆಗುವ ಸಾಧ್ಯತೆಯಿದೆ. ಅಂದೇ ಅನುಷ್ಕಾ ಶರ್ಮಾ ಅವರ ಕುರಿತ ಸುದ್ದಿಗೆ ಸ್ಪಷ್ಟನೆ ಕೂಡ ಸಿಗುವ ಸಾಧ್ಯತೆ ಇದೆ.


Click it and Unblock the Notifications











