ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರನ ಜೊತೆ ನಟಿ ಶ್ರೀಲೀಲಾ ಡೇಟಿಂಗ್?
ಭಾರತದಲ್ಲಿ ಸಿನಿಮಾ ಹಾಗೂ ಕ್ರಿಕೆಟ್ ನಡುವೆ ಅವಿನಾಭಾವ ಸಂಬಂಧವಿದೆ. ಈ ನಂಟು ಇಂದು ನಿನ್ನೆಯದಲ್ಲ. ಕ್ರಿಕೆಟ್ ಆಟಗಾರರ ಕಥೆ ತೆರೆಮೇಲೆ ಬಂದಿರುವುದು ಮಾತ್ರವಲ್ಲ, ಕ್ರಿಕೆಟ್ ಆಟಗಾರರು ಬಣ್ಣ ಹಚ್ಚಿ ನಟಿಸಿರುವುದು ಇದೆ. ಇನ್ನು ಕ್ರಿಕೆಟಿಗರ ಜೊತೆ ನಟಿಯರ ಲವ್ ಸ್ಟೋರಿಗಳು ಹೊಸದೇನಲ್ಲ. ಸದ್ಯ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಹಾಗೂ ನಟಿ ಶ್ರೀಲೀಲಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಳ್ಳುವ ಗಾಳಿಸುದ್ದಿಗಳಿಗೆ ತಲೆ ಬುಡ ಇರಲ್ಲ. ಯಾವುದೋ ವಿಚಾರವನ್ನು ಮತ್ಯಾವುದೋ ಸಂಗತಿ ಜೊತೆ ಸೇರಿಸಿ ಒಂದಕ್ಕೊಂದು ತಾಳೆ ಹಾಕಿ ಹೊಸ ಕಥೆ ಕಟ್ಟಿಬಿಡುತ್ತಾರೆ. Redditನಲ್ಲಿ ತಿಲಕ್ ವರ್ಮಾ ಹಾಗೂ ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಪೋಸ್ಟ್ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಇಬ್ಬರ ಬಗ್ಗೆ ಗುಸುಗುಸು ಶುರುವಾಗಿದೆ. ಲವ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ವೈಕುಂಠ ಏಕಾದಶಿ ಸಮಯದಲ್ಲಿ ಶ್ರೀಲೀಲಾ ತಿರುಪತಿಗೆ ಫ್ಯಾಮಿಲಿ ಸಮೇತ ಭೇಟಿ ನೀಡಿದ್ದರು. ಅದೇ ಸಮಯದಲ್ಲಿ ತಿಲಕ್ ವರ್ಮಾ ತಮ್ಮ ಫ್ಯಾಮಿಲಿ ಜೊತೆ ಅಲ್ಲಿಗೆ ಹೋಗಿದ್ದರು. ಇತ್ತೀಚೆಗೆ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯ ವೀಕ್ಷಿಸಲು ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಮೈದಾನದ ಪೆವಿಲಿಯನ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ತಂಡದ ವ್ಯಕ್ತಿಯೊಬ್ಬ ತಿಲಕ್ ವರ್ಮಾ ಹೆಸರಿನ ಜೆರ್ಸಿ ತೊಟ್ಟಿದ್ದರು. ಇದನ್ನೆಲ್ಲಾ ಒಂದಕ್ಕೊಂದು ಲಿಂಕ್ ಮಾಡಿ ಶ್ರೀಲೀಲಾ ಹಾಗೂ ತಿಲಕ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಚರ್ಚೆ ಹುಟ್ಟಾಕ್ಕಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಶ್ರೀಲೀಲಾ ಮಾತನಾಡಿ ತಿಲಕ್ ವರ್ಮಾ ಹಾಗೂ ನಿತಿಶ್ ಕುಮಾರ್ ರೆಡ್ಡಿ ಹೆಸರು ತೆಗೆದುಕೊಂಡಿದ್ದರು. ಹೈದರಾಬಾದ್ ಮೂಲಕ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ಗಮನ ಸೆಳೆದಿದ್ದರು. ಏಷ್ಯಾಕಪ್ ಹಾಗೂ ಟಿ-20 ವಿಶ್ವಕಪ್ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದಾರೆ.
ಇತ್ತೀಚೆಗೆ ಎಂಬಿಬಿಎಸ್ ಕಂಪ್ಲೀಟ್ ಮಾಡಿರುವ ಶ್ರೀಲೀಲಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್ ಕದ ತಟ್ಟಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದು ಇತ್ತ ತೆಲುಗು, ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದ್ಯಾಕೋ ಕನ್ನಡ ಸಿನಿಮಾ ಒಪ್ಪಿಕೊಳ್ಳಲು ಈಗ ಮೀನಾಮೇಷ ಎಣಿಸುತ್ತಿದ್ದಾರೆ.
ಈ ಹಿಂದೆ ಕೂಡ ಶ್ರೀಲೀಲಾ ಡೇಟಿಂಗ್, ಮದುವೆ ಬಗ್ಗೆ ಸಾಕಷ್ಟು ಊಹಾಪೋಹ ಹರಿದಾಡಿತ್ತು. ಆಕೆಯ ಹುಟ್ಟುಹಬ್ಬದ ಸಂಭ್ರಮಾಚರಣೆ ಫೋಟೊಗಳು ವೈರಲ್ ಆಗಿ ಸದ್ದಿಲ್ಲದೇ ಮದುವೆ ಆಗಿದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಮೆರಿಕಾದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಓದಿ ಬೆಳೆದವರು ಶ್ರೀಲೀಲಾ. ತಾಯಿ ಡಾ. ಸ್ವರ್ಣಲತಾ ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞೆ (Gynecologist) ಆಗಿ ಗುರ್ತಿಸಿಕೊಂಡಿದ್ದಾರೆ.
ಶ್ರೀಲೀಲಾ ಅವರ ಅಜ್ಜಿ ತಾತ ಆಂಧ್ರದ ಒಂಗೊಲ ಮೂಲದವರು. ಹಾಗಾಗಿ ಕನ್ನಡ, ತೆಲುಗು ಎರಡೂ ಭಾಷೆಗಳನ್ನು ಶ್ರೀಲೀಲಾ ಸ್ಪಷ್ಟವಾಗಿ ಮಾತನಾಡುತ್ತಾರೆ. ಬಾಲ್ಯದಲ್ಲೇ ಒಂದು ತೆಲುಗು ಚಿತ್ರದಲ್ಲಿ ಕೂಡ ನಟಿಸಿದ್ದರು. ಕನ್ನಡದ 'ಕಿಸ್' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಸ್ಟಾರ್ ನಟರ ಜೊತೆಗೆ ನಟಿಸಿದರೂ ಈವರೆಗೆ ಆಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗಲೇ ಇಲ್ಲ.


Click it and Unblock the Notifications