»   » ಉಂಡ ಮನೆಗೆ ಗಾಯಕ ಎರಡು ಬಗೆದನೆಂದು ಲೇಖಕ

ಉಂಡ ಮನೆಗೆ ಗಾಯಕ ಎರಡು ಬಗೆದನೆಂದು ಲೇಖಕ

Subscribe to Filmibeat Kannada

ಬೆಂಗಳೂರು : ಅಂತೂ ಇಂತೂ ಮುಗಿಯಿತಲ್ಲಪ್ಪ ಅಶ್ವತ್ಥ್‌ - ಅಕ್ಕಾ ವಿವಾದ ಎಂದುಕೊಳ್ಳುತ್ತಿರುವಾಗಲೇ ಮೊತ್ತೊಂದು ಕಾಂಟ್ರವರ್ಸಿಗೆ ನಾಂದಿ ಹಾಡುವ ಹೇಳಿಕೆ ಕವಿ ಭಟ್ಟರಿಂದ ಬಂದಿದೆ. ಅಕ್ಕಾ - ಅಶ್ವತ್ಥ್‌ ಅವರಿಬ್ಬರ ನಡುವಿದ್ದ ವಿವಾದ ಇನ್ನು ಮುಂದೆ ಲಕ್ಷ್ಮೀನಾರಾಯಣ ಭಟ್ಟರು ಹಾಗೂ ಅಶ್ವತ್ಥ್‌ರ ನಡುವಿನ ಆಂತರಿಕ ಜಗಳವಾಗಿ ಮಾರ್ಪಟ್ಟು, ಮತ್ತೊಂದು ಪತ್ರಿಕಾ ಸಮರಕ್ಕೆ ವೇದಿಕೆ ಕಲ್ಪಿಸುತ್ತದೆಯೇ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿದೆ.

ಭಟ್ಟರ ಹೇಳಿಕೆ : ಸಪತ್ನೀಕರಾಗಿ ಅಮೆರಿಕೆಗೆ ಹೋಗಿ ಬೀಗರ ಮನೆಯಲ್ಲೂ ಸಿಗದಷ್ಟು ಉಪಚಾರ ಸ್ವೀಕರಿಸಿ ಬೀಗುತ್ತಾ ಬೆಂಗಳೂರಿಗೆ ಬಂದ ಗಾಯಕ ಸಿ. ಅಶ್ವತ್ಥ್‌ ಅಮೆರಿಕನ್ನಡಿಗರ ಅದರಾತಿಥ್ಯ ಮರೆತು ಸಲ್ಲದ ಮಾತುಗಳನ್ನಾಡಿರುವ ಬಗ್ಗೆ ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಕಿಡಿ ಕಾರಿದ್ದಾರೆ.

ಹತ್ತಿದ ಏಣಿಯನ್ನೇ ಒದೆವಂತೆ ತಿಂಗಳುಗಟ್ಟಲೆ ಅಮೆರಿಕದಲ್ಲಿ ಕನ್ನಡಿಗರ ಮನೆಯಲ್ಲಿ ತಂಗಿದ್ದು, ರಾಜ ಮರ್ಯಾದೆ ಮಾಡಿಸಿಕೊಂಡು ಯಾರೋ ಒಬ್ಬರು ಮಾಡಿದ ತಪ್ಪಿಗೆ ಅಮೆರಿಕದ ಕನ್ನಡಿಗರ ಮನಸ್ಸಿಗೆಲ್ಲಾ ಅಶ್ವತ್ಥ್‌ ಘಾಸಿ ಮಾಡಿದ್ದಾರೆ ಎಂದು ಭಟ್ಟರು ಆಕ್ಷೇಪಿಸಿದ್ದಾರೆ. ಅಮೆರಿಕಾಗೆ ಹೋಗಿ ಬಂದ ಒಬ್ಬ ಲೇಖಕನಾಗಿ ತಾವು ಕೆಲವು ಮಾತುಗಳನ್ನು ಆಡುವುದು ಅನಿವಾರ್ಯ ಎಂದು ಭಾವಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಲಕ್ಷ್ಮೀನಾರಾಯಣ ಭಟ್ಟರು, ಅವೇಶದ ಭರದಲ್ಲಿ ಅಶ್ವತ್ಥ್‌ ಅಮೆರಿಕದ ಕನ್ನಡಿಗರ ಮನ ನೋಯುವಂತೆ ಮಾತನಾಡಬಾರದಿತ್ತು ಎಂದಿದ್ದಾರೆ.

ಅಮೆರಿಕದಲ್ಲಿರುವ ಕನ್ನಡಿಗರು, ಕನ್ನಡನಾಡಿನಿಂದ ಕಡಲಾಚೆಗೆ ಹೋಗುವ ಕನ್ನಡಿಗರಿಗೆ ತೋರುವ ಪ್ರೀತಿ, ವಿಶ್ವಾಸ, ಆತಿಥ್ಯಗಳ ಬಗ್ಗೆ ಸಪತ್ನೀಕರಾಗಿ ಅಮೆರಿಕಕ್ಕೆ ತೆರಳಿದ ಅಶ್ವತ್ಥ್‌ ಅವರಿಗೂ ಅರಿವಿದೆ. ಅಶ್ವತ್ಥ್‌ ಎರಡು ಬಾರಿ ಅಮೆರಿಕಕ್ಕೆ ಹೋಗಿ ಮೂರ್ಮೂರು ತಿಂಗಳಿದ್ದು ಬಂದರು. ಆ ಅವಧಿಯಲ್ಲಿ ಅಶ್ವತ್ಥ್‌ ಒಂದು ದಿನವೂ ಹೊಟೆಲ್‌ನಲ್ಲಿ ಇರಲಿಲ್ಲ. 150ಕ್ಕೂ ಹೆಚ್ಚು ದಿನ ಅಶ್ವತ್ಥ್‌ ಇದ್ದದ್ದು ಕನ್ನಡಿಗರ ಮನೆಯಲ್ಲಿ, ಏರ್‌ಪೋರ್ಟ್‌ನಿಂದ ಮನೆಗೆ ಕರೆತಂದು, ಉಪಚರಿಸಿ, ಅಶ್ವತ್ಥ್‌ ದಂಪತಿಗಳಿಗೆ ತಮ್ಮ ಮನೆಯಲ್ಲಿ ಪ್ರತ್ಯೇಕ ಕೊಠಡಿ ನೀಡಿ, ಪ್ರವಾಸಕ್ಕೆ ತಮ್ಮ ಕಾರುಗಳನ್ನೇ ನೀಡಿ, ಸಂಭ್ರಮದ ಔತಣ ನೀಡಿದ ಹೊರನಾಡ ಕನ್ನಡಿಗರಿಗೆ ಹೀಗೆ ಮಾಡಬಾರದಿತ್ತು ಎಂಬುದು ಭಟ್ಟರ ಅಭಿಪ್ರಾಯ.

ತಾವು ಎರಡು ಬಾರಿ ಅಮೆರಿಕಕ್ಕೆ ಹೋಗಿದ್ದಾಗಲೂ ಅಮೆರಿಕನ್ನಡಿಗರು ಮನೆಯವರಿಗಿಂತಲೂ ಹೆಚ್ಚಾಗಿ ನೋಡಿಕೊಂಡರು, ಶಿವಮೊಗ್ಗ ಸುಬ್ಬಣ್ಣ, ಮಂಜುಳಾ ಗುರುರಾಜ್‌, ನರಸಿಂಹ ನಾಯಕ್‌ ಮುಂತಾದ ಗಾಯಕರೂ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ನಾವೆಲ್ಲರೂ ಅಲ್ಲಿ ಕನ್ನಡಿಗರು ತೋರಿದ ಪ್ರೀತ್ಯಾದರಗಳಿಗೆ ಕೃತಜ್ಞರಾಗಿದ್ದೇವೆ. ಅವರ ಆ ಆತ್ಮೀಯತೆಯನ್ನು ಸದಾ ಸ್ಮರಿಸುತ್ತೇವೆ. ಅಶ್ವತ್ಥ್‌ ಅವರಾಡಿದ ಮಾತುಗಳಿಂದ ಅಮೆರಿಕದ ಕನ್ನಡಿಗರಿಗೆ ನೋವಾಗಿದೆ. ಎಲ್ಲ ಕಲಾವಿದರೂ ಅಶ್ವತ್ಥ್‌ರಂತಹವರಲ್ಲ ಎಂದು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ ಎಂದರು ಭಟ್ಟರು.

ಅಶ್ವತ್ಥ್‌ ಇಲ್ಲಿಂದ ತೆಗೆದುಕೊಂಡು ಹೋಗಿದ್ದ, ಕ್ಯಾಸೆಟ್‌, ಸಿಡಿಗಳನ್ನು ಅವರು ಕೊಂಡಿದ್ದಾರೆ, ಇತರರಿಗೂ ಮಾರಿಸಿ, ಅಶ್ವತ್ಥ್‌ರಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದ ಭಟ್ಟರು ಲೇಖಕರು ಹಾಗೂ ಕಲಾವಿದರ ಪರವಾಗಿ ನಡೆದು ಹೋಗಿರುವ ಕಹಿ ಘಟನೆಗೆ ಅಮೆರಿಕದ ಕನ್ನಡಿಗರ ಕ್ಷಮೆಯನ್ನೂ ಕೋರಿದರು.

(ಇನ್‌ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada