»   » ಸಿ. ಅಶ್ವತ್‌ಗೆ ನೀಡಿದ ಚೆಕ್‌ ಬಗ್ಗೆ 'ಅಕ್ಕಾ' ಸ್ಪಷ್ಟನೆ

ಸಿ. ಅಶ್ವತ್‌ಗೆ ನೀಡಿದ ಚೆಕ್‌ ಬಗ್ಗೆ 'ಅಕ್ಕಾ' ಸ್ಪಷ್ಟನೆ

Posted By:
Subscribe to Filmibeat Kannada

ಅಮೆರಿಕಾ : ಗಾಯಕ ಸಿ. ಅಶ್ವತ್‌ರಿಗೆ ನೀಡಿದ ಚೆಕ್‌ ಬೌನ್ಸ್‌ ವಿವಾದ ಈಗ ಹೊಸ ತಿರುವು ಪಡೆದಿದೆ. ಚೆಕ್‌ ತಡೆ ನೀಡಿದ ಪ್ರಕರಣಕ್ಕೆ 'ಅಕ್ಕಾ" ಮಂಡಳಿ ಉಸ್ತುವಾರಿ ನಿರ್ವಾಹಕ ಎಚ್‌.ಎಸ್‌. ಜಯಸ್ವಾಮಿ ಅವರೇ ಸಂಪೂರ್ಣ ಜವಾಬ್ದಾರರು ಎಂದು ಹೇಳಿದೆ. ಅಶ್ವತ್‌ರಿಗಾದ ಅನನುಕೂಲಕ್ಕೆ ವಿಷಾದಿಸಿರುವ ಅಕ್ಕಾ, ಈ ವಿವಾದವನ್ನು ಬಗೆಹರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ ಈ ಮಧ್ಯೆ 'ಅಕ್ಕಾ" ಕನ್ನಡ.ಇಂಡಿಯಾ ಇನ್‌ಫೋಗೆ ನೀಡಿರುವ ಪತ್ರಿಕಾ ಹೇಳಿಕೆಯ ಸ್ಪಷ್ಟೀಕರಣ ಈ ಕೆಳಕಂಡಂತಿದೆ :

ಅಸೋಸಿಯೇಷನ್‌ ಆಫ್‌ ಕನ್ನಡ ಕೂಟಾಸ್‌ ಆಫ್‌ ಅಮೆರಿಕಾ (ಅಕ್ಕಾ) ನಿರ್ದೇಶಕರ ಮಂಡಳಿ ಮತ್ತು ಅಮೆರಿಕಾ ಕನ್ನಡ ಕೂಟಗಳ ಆಗರ ಅಕ್ಕಾದ ಉಸ್ತುವಾರಿ ಕಾರ್ಯನಿರ್ವಾಹಕರಾದ ಎಚ್‌.ಎಸ್‌. ಜಯಸ್ವಾಮಿ ಅವರು ಹೆಸರಾಂತ ಗಾಯಕ ಸಿ. ಅಶ್ವತ್‌ ಅವರಿಗೆ ನೀಡಿದ ಚೆಕ್‌ ಹಣ ಪಾವತಿಗೆ ತಡೆ ನೀಡಿರುವುದನ್ನು ಖಂಡಿಸಿದೆ.

ಈ ಚೆಕ್‌ನ ಸ್ಟಾಪ್‌ ಪೇಮೆಂಟ್‌ ಪ್ರಕ್ರಿಯೆ ಆಶ್ಚರ್ಯಾಘಾತ ನೀಡಿರುವುದೇ ಅಲ್ಲದೆ ಅಕ್ಕಾ ಆಡಳಿತ ಮಂಡಳಿ, ಸದಸ್ಯರು ಹಾಗೂ ಹಿತಚಿಂತಕರಿಗೆ ಆಘಾತವನ್ನುಂಟು ಮಾಡಿದೆ. ಸಿ. ಅಶ್ವತ್‌ ಅವರಿಂದ ನಾವು ಇಂತಹ ಪತ್ರಿಕಾ ಹೇಳಿಕೆ ನಿರೀಕ್ಷಿಸಿರಲಿಲ್ಲ. ಅವರು ಪತ್ರಿಕೆಗಳಿಗೆ ಚೆಕ್‌ ವಿಚಾರದಲ್ಲಿ ಸಾರ್ವಜನಿಕ ಹೇಳಿಕೆ ನೀಡುವ ಮೊದಲು ಅಕ್ಕಾವನ್ನು ಸಂಪರ್ಕಿಸಬಹುದಿತ್ತು. ಇದೊಂದು ಹೇಯ ಕ್ರಮ. ಅಶ್ವತ್‌ ಅವರ ಈ ನಡೆ ಕೇವಲ ಅಕ್ಕಾ ಬಳಗಕ್ಕಷ್ಟೇ ಅಲ್ಲ ಉತ್ತರ ಅಮೆರಿಕದಲ್ಲಿರುವ ಕನ್ನಡಿಗರ ಹೃದಯಕ್ಕೆ ಘಾಸಿ ಮಾಡಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಮನುಜ ಮತ ಯೋಜನೆಯನ್ನು ಅಕ್ಕಾ ಅನುಮೋದಿಸಿತ್ತು. ಇದರ ಪೂರ್ಣ ಜವಾಬ್ದಾರಿ ಎಚ್‌.ಎಸ್‌. ಜಯಸ್ವಾಮಿ ಅವರ ಮೇಲಿತ್ತು. ಅವರೇ ಹಣಕಾಸಿನ ಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಯೋಜನೆಯ ನಿಧಿ ಸಂಗ್ರಹಕ್ಕೆ ಮೊದಲೇ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಗಳು ಸಿ. ಅಶ್ವತ್‌ ಅವರಿಗೆ 4500 ಡಾಲರ್‌ಗಳ ಚೆಕ್‌ ನೀಡಿದ್ದಾರೆ. ಆದರೆ, ಇದಕ್ಕೆ ಮುನ್ನ ಆಡಳಿತ ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ. (ಸಮ್ಮೇಳನ ಮುನ್ನುಡಿ : ಪುಟ 17. ಆರ್ಟಿಕಲ್‌ ವಿ, ಹಣಕಾಸು ವಿಭಾಗ 1. ಸಿ ರೀತ್ಯ ಅಕ್ಕಾದ ಕಾರ್ಯನಿರ್ವಾಹಕರಿಗೆ ಪೂರ್ವಾನುಮತಿ ಇಲ್ಲದೆ ಕೇವಲ 500 ಡಾಲರ್‌ಗಳನ್ನು ವೆಚ್ಚ ಮಾಡಲು ಅಧಿಕಾರ ಇದೆ. ) ಆದರೆ, ಕೆಟ್ಟ ಸಂಪ್ರದಾಯ ಹುಟ್ಟಿಹಾಕುವಂತಹ ಇಂತಹ ಕ್ರಮದಿಂದ ಲಾಭದಾಯಕ ವೃತ್ತಿಯಲ್ಲಿಲ್ಲದ ಒಂದು ಸಾರ್ವಜನಿಕ ಸೇವಾ ಸಂಸ್ಥೆಯ ಘನತೆಗೆ ಕುಂದಾಗಿದೆ ಎನ್ನುವುದು ಹೇಳಿಕೆಯ ತಾತ್ಪರ್ಯವಾಗಿದೆ.

ಈ ಸಂಬಂಧ ಅಕ್ಟೋಬರ್‌ 6ರಂದು ನಡೆದ ಮೀಟಿಂಗ್‌ನಲ್ಲಿ ಈ ನಿಧಿಗೆ ಅನುಮೋದನೆ ಪಡೆಯಬೇಕೆಂದು ತಿಳಿಸಿತ್ತು. ಆ ಮೀಟಿಂಗ್‌ನಲ್ಲಿ ಎಚ್‌.ಎಸ್‌. ಜಯಸ್ವಾಮಿ ಅವರು, ಸಿ. ಅಶ್ವತ್‌ ಅವರಿಗೆ ನೀಡಿರುವ 4500 ಡಾಲರ್‌ಗಳ ಮೊತ್ತದ ಚೆಕ್‌ಗೆ ಅಗತ್ಯವಾದ ಹಾಗೂ ಅದಕ್ಕಿಂತಲೂ ಹೆಚ್ಚು ಹಣವನ್ನು ಮೂರು ತಿಂಗಳ ಅವಧಿಯಲ್ಲಿ ಸಂಗ್ರಹಿಸುವ ಭರವಸೆ ನೀಡಿದ್ದರು. ಅದೇ ತುರ್ತು ಸಭೆಯಲ್ಲಿ ಜಯಸ್ವಾಮಿ ಅವರು, ಉಸ್ತುವಾರಿ ಕಾರ್ಯನಿರ್ವಾಹಕರಾಗಿ ಮುಂದಿನ ಚುನಾವಣೆ ನಡೆಯುವವರೆಗೆ ಮುಂದುವರಿಯುತ್ತಿದ್ದು, ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳುವಾಗ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯಬೇಕೆಂದು ತಿಳಿಸಿಲಾಗಿತ್ತು.

ಆದರೆ, ಎಚ್‌.ಎಸ್‌. ಜಯಸ್ವಾಮಿ ಅವರು, ಮಂಡಳಿಗೆ ಈ ಸಂಬಂಧ ಯಾವುದೇ ಮಾಹಿತಿ ನೀಡದೆ, ಸ್ವತಂತ್ರ ನಿರ್ಧಾರ ಕೈಗೊಂಡು ಸಿ. ಅಶ್ವತ್‌ ಅವರಿಗೆ ಆಗಲೇ ನೀಡಲಾಗಿದ್ದ ಚೆಕ್‌ ಹಣ ಪಾವತಿಗೆ ತಡೆ ಮನವಿ ಸಲ್ಲಿಸಿದ್ದರು. ಆದರೆ ಅಕ್ಕಾ ಆಡಳಿತ ಮಂಡಳಿ ಚೆಕ್‌ ಹಣ ಪಾವತಿಸದಂತೆ ಯಾವುದೇ ಆದೇಶ ನೀಡಿರಲಿಲ್ಲ ಎಂಬುದು ಗಮನಾರ್ಹ. ಈ ಎಲ್ಲ ಅಂಶಗಳು ಅಕ್ಕಾದ ಖಜಾಂಚಿ ಹಾಗೂ ನಿರ್ದೇಶಕರಾದ ವಿ.ಎಂ. ಕುಮಾರಸ್ವಾಮಿ ಅವರು ನೀಡಿರುವ ಪತ್ರಿಕೆ ಹೇಳಿಕೆಯಲ್ಲಿ ಅಡಕವಾಗಿವೆ.

ಅಶ್ವತ್‌ ಸೇವೆಯ ಶ್ಲಾಘನೆ : ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಮನುಜ ಮತ ವಿಶ್ವಪಥ ಯೋಜನಾ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಿ. ಅಶ್ವತ್‌ ಅವರು ಸಲ್ಲಿಸಿರುವ ಸೇವೆಯನ್ನು ಅಕ್ಕಾ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಈ ಸಂದರ್ಭದಲ್ಲಿ ಹಲವಾರು ನಗರಗಳಲ್ಲಿ ಸಿ. ಅಶ್ವತ್‌ ಅವರ ಕಾರ್ಯಕ್ರಮಗಳನ್ನೂ ರೂಪಿಸಲಾಗಿತ್ತು. ಸಿ. ಅಶ್ವತ್‌ ಅವರಿಗೆ ಹೋದ ಕಡೆಗಳಲ್ಲೆಲ್ಲಾ ಅಭೂತಪೂರ್ವ ಸ್ವಾಗತ ನೀಡಲಾಗಿದೆ. ಅವರೊಂದಿಗೆ ಸದ್ಭಾವನೆಯಿಂದ ನಡೆದುಕೊಂಡಿದೆ. ಕಡಲಾಚೆಯ ಕನ್ನಡಿಗರು, ಶ್ರೇಷ್ಠ ಕಲಾವಿದನಿಗೆ ಮನ್ನಣೆ ನೀಡಿ ಗೌರವ ಧನದೊಂದಿಗೆ ಗೌರವಿಸಿದ್ದಾರೆ.

ಪತ್ರಿಕೆಗೆ ಹೋಗುವ ಅಗತ್ಯ ಇರಲಿಲ್ಲ : ಈ ವಿಷಯವನ್ನು ಸಿ. ಅಶ್ವತ್‌ ಅವರು ಅಕ್ಕಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲವೇ ಜಯಸ್ವಾಮಿ ಅವರ ಮೇಲೆ ಒತ್ತಡ ತಂದು ಬಗೆಹರಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ಸಿ. ಅಶ್ವತ್‌ ಅವರು ಹೀಗೇಕೆ ಮಾಡಿದರೆಂಬುದು ಮಂಡಳಿಗೆ ಅರ್ಥವಾಗದಾಗಿದೆ ಎಂದೂ ಹೇಳಿಕೆ ನೊಂದ ನುಡಿಗಳಲ್ಲಿ ವರ್ಣಿಸಿದೆ. ಅಕ್ಕಾ ಆಡಳಿತ ಮಂಡಳಿಯ ಪರವಾಗಿ ವಿ.ಎಂ. ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada