»   » ದಂಡ ಹಾಕಲು ಚಲಚ್ಚಿತ್ರ ವಾಣಿಜ್ಯ ಮಂಡಳಿನ್ಯಾಯಾಲಯವೇ - ಅನಂತ್‌ನಾಗ್‌ ಪ್ರಶ್ನೆ

ದಂಡ ಹಾಕಲು ಚಲಚ್ಚಿತ್ರ ವಾಣಿಜ್ಯ ಮಂಡಳಿನ್ಯಾಯಾಲಯವೇ - ಅನಂತ್‌ನಾಗ್‌ ಪ್ರಶ್ನೆ

Subscribe to Filmibeat Kannada

ಚಲನ ಚಿತ್ರ ನಿರ್ದೇಶಕ ದಿನೇಶ್‌ಬಾಬು ಅವರಿಗೆ 6 ತಿಂಗಳ ನಿಷೇಧ ಹಾಗೂ 40 ಸಾವಿರ ರುಪಾಯಿ ದಂಡ ಹಾಕಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕ್ರಮವನ್ನು ಚಿತ್ರನಟ ಹಾಗೂ ಮಾಜಿ ಸಚಿವ ಅನಂತ್‌ನಾಗ್‌ ತೀವ್ರವಾಗಿ ಖಂಡಿಸಿದ್ದಾರೆ.

‘ಹಲೋ ನಾರದ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಔಪಚಾರಿಕವಾಗಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರನ್ನು ವಾಣಿಜ್ಯ ಮಂಡಳಿ - ದಿನೇಶ್‌ ಬಾಬುಗೆ ದಂಡ ಹಾಕಿರುವ ಬಗ್ಗೆ ಪ್ರಶ್ನಿಸಿದಾಗ ಸಿಟ್ಟಾದರು. ‘ಮತ್ಸರಕ್ಕೆ ಮದ್ದಿಲ್ಲ’ ಎಂಬುದು ಇದರಿಂದ ವೇದ್ಯವಾಗುತ್ತದೆ ಎಂದರು.

ದಿನೇಶ್‌ ಬಾಬುಗೆ ದಂಡ ಹಾಕಲು ಮತ್ತು ನಿಷೇಧ ವಿಧಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯೇನು ನ್ಯಾಯಾಲಯವೇ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮಂಡಳಿಗೆ ಸಾಧ್ಯವಾದರೆ, ಚಿತ್ರೋದ್ಯಮಕ್ಕೆ ಹಾಗೂ ಚಿತ್ರೋದ್ಯಮಿಗಳಿಗೆ ತನ್ನ ಕೈಲಾದ ಸಹಾಯ ಮಾಡಲಿ, ಇಲ್ಲವೇ ತೆಪ್ಪಗಿರಲಿ ಎಂದು ಗುಡುಗಿದರು.

ಸಂಕೇತ್‌ ಸ್ಟುಡಿಯೋ ನಾಮವಶೇಷವಾಗಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಕಾರಣ ಎಂದು ಆರೋಪಿಸಿದರು. ನನ್ನ ಸೋದರ ಶಂಕರ್‌ನಾಗ್‌ ಕನಸನ್ನು ನುಚ್ಚು ನೂರು ಮಾಡಿದ ಮಂಡಳಿಯಲ್ಲಿ ಆತನ ಶವ ಇಡಲೂ ನನಗೆ ಇಷ್ಟ ಇರಲಿಲ್ಲ. ಆದರೆ, ಒತ್ತಾಯಕ್ಕೆ ಕಟ್ಟು ಬಿದ್ದೆ ಎಂದು ಅನಂತ್‌ ನೊಂದು ನುಡಿದರು.

ಶವ ಇಡಬೇಡಿ : ನಾನು ಸತ್ತಾಗ, ನನ್ನ ಶವವನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಮಂಡಳಿಯಲ್ಲಿ ಇಡಕೂಡದು ಎಂದು ತಮ್ಮ ಪತ್ನಿ ಹಾಗೂ ಚಿತ್ರನಟಿ ಗಾಯತ್ರಿ ಅವರಿಗೆ ತಿಳಿಸಿರುವುದಾಗಿ ಅನಂತ್‌ ಹೇಳಿದರು.

ದಿನೇಶ್‌ಬಾಬು ಮೇಲೆ ಕ್ರಮ ಕೈಗೊಳ್ಳಲು ವಾಣಿಜ್ಯ ಮಂಡಳಿಗೆ ಅಧಿಕಾರ ನೀಡಿದವರು ಯಾರು? ಮಂಡಳಿಯ ಅಧಿಕಾರವನ್ನು ಪ್ರಶ್ನಿಸಿ ದಿನೇಶ್‌ ಬಾಬು ನ್ಯಾಯಾಲಯದ ಮೊರೆ ಹೋಗಬೇಕು ಎಂದು ಅನಂತ್‌ನಾಗ್‌ ಸಲಹೆ ಮಾಡಿದರು.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada