»   » ಸಕಲ ಕಲಾ ವಲ್ಲಭ ಸುದ್ದಿಬಾಕ ಬಾಬು

ಸಕಲ ಕಲಾ ವಲ್ಲಭ ಸುದ್ದಿಬಾಕ ಬಾಬು

Subscribe to Filmibeat Kannada

ಜೀವನದುದ್ದಕ್ಕೂ ದ್ವಂದ್ವ ನೀತಿಯನ್ನೇ ಅನುಸರಿಸಿಕೊಂಡು ಬಂದಿರೋದು ಬಾಬು ವೈಶಿಷ್ಟ್ಯ. ಬಾಬುವಂಥಾ ಮನುಷ್ಯ ಕನ್ನಡ ಚಿತ್ರರಂಗಕ್ಕೆ ಅಸೆಟ್‌ ಆಗಬೇಕಿತ್ತು , ಆದರೆ ತನ್ನ ಸಣ್ಣತನದಿಂದಾಗಿ, ಕ್ರಿಮಿನಲ್‌ ಮೆಂಟಾಲಿಟಿಯಿಂದಾಗಿ ಹಾಳಾಗುತ್ತಿದ್ದಾರೆ ಎಂದು ಅವರ ಆತ್ಮೀಯರೇ ಹೇಳುವುದುಂಟು. ಪರಭಾಷಾ ನಿರ್ದೇಶಕರು, ನಿರ್ಮಾಪಕರು ಕನ್ನಡಕ್ಕೆ ಬಂದರೆ ತಮ್ಮ ಗಂಟೇ ಹೋಯ್ತು ಅನ್ನುವ ಥರ ಕೂಗಾಡುವ ಬಾಬು, ತಾವು ಮಾತ್ರ ಬಾಂಬೆ ಪ್ರವಾಸ ಮಾಡ್ತಾನೇ ಇರ್ತಾರೆ. ಅಲ್ಲಿ ಹಿಂದಿ ಚಿತ್ರಗಳನ್ನು ನಿರ್ದೇಶಿಸುತ್ತಾರೆ.

ಬಾಬು ಅವರು ಇತ್ತೀಚೆಗೆ ಸುದ್ದಿ ಮಾಡಿದ್ದು ಸೆನ್ಸಾರ್‌ ವಿರುದ್ಧ ಮಾಡಿದ ಆರೋಪಗಳಿಂದ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಇದ್ದರೂ ಬಾಬು ಸೆನ್ಸಾರ್‌ ಸದಸ್ಯರನ್ನು ಲಂಚಕೋರರು ಎಂದು ಜರೆದರು. ಕುರಿಗಳು ಸಾರ್‌ ಕುರಿಗಳು ಚಿತ್ರದ ಕೆಲವು ದೃಶ್ಯಗಳಿಗೆ ಸೆನ್ಸಾರ್‌ ಕತ್ತರಿ ಆಡಿಸಿದ್ದೇ ಬಾಬು ಸಿಟ್ಟಿಗೆ ಕಾರಣ. ಈ ಮೂಲಕ ತಮ್ಮ ಖಾಸಗಿ ಸಮಸ್ಯೆಯನ್ನು ಜನರಲೈಸ್‌ ಮಾಡಿದರು. ಅದೃಷ್ಟವಶಾತ್‌ ಈ ವಿವಾದದಿಂದ ಕುರಿಗಳಿಗೆ ಲಾಭವಾಯಿತು. ಚಿತ್ರ ಹಿಟ್‌ ಆಗಿದ್ದೇ ತಡ, ಅದನ್ನು ಸದಭಿರುಚಿಯ ಚಿತ್ರ ಎಂದು ಘೋಷಿಸಿಕೊಂಡ ಬಾಬು, ನಿರ್ದೇಶಕರ ಸಂಘದ ವತಿಯಿಂದ ಚಿತ್ರದ ಬಗ್ಗೆ ಒಂದು ಸೆಮಿನಾರ್‌ ಏರ್ಪಡಿಸಿದರು. ಸಂಘದ ಸದಸ್ಯರು ಕುರಿಗಳ ಥರ ಈ ಸಂವಾದದಲ್ಲಿ ಭಾಗವಹಿಸಿದರು.

ಸುದ್ದಿಯಲ್ಲಿರುವುದೆಂದರೆ ಬಾಬುಗೆ ಇನ್ನಿಲ್ಲದ ಖುಷಿ. ಸೆನ್ಸಾರನ್ನು ಬೈಯೋ ನೆಪದಲ್ಲಿ ಪತ್ರಿಕೆಗಳ ಕಾಲಂನಲ್ಲಿ ರಾರಾಜಿಸಿದ ಬಾಬು, ಈಗ ಅದನ್ನು ಮುಂದುವರೆಸಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದಾರೆ. ಮೂರು ವಾರದ ಹಿಂದೆ ಇದ್ದಕ್ಕಿದ್ದಂತೆ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಬೇಕು ಎಂದು ಫರ್ಮಾನು ಹೊರಡಿಸಿದರು. ಈಗ ಅವರ ಲೇಟೆಸ್ಟ್‌ ಸಾಹಸ ಚಿತ್ರ ತಂತ್ರಜ್ಞರ ಮಹಾಸಂಸ್ಥೆ. ಬಾಬು ಹೇಳುವ ಪ್ರಕಾರ ಇದರಲ್ಲಿ ಈಗಾಗಲೇ ಕನ್ನಡ ಚಿತ್ರರಂಗದ 10 ಅಂಗ ಸಂಸ್ಥೆಗಳು ಸೇರಿಕೊಂಡಿವೆ. ಅವರೆಲ್ಲರೂ ಅಶೋಕ್‌ ನೇತೃತ್ವದ ಒಕ್ಕೂಟವನ್ನು ಬಿಟ್ಟು ಬಂದಿದ್ದಾರೆ. ಸದಸ್ಯರಿಗೆ ಸಿಗುವ ಹತ್ತಾರು ಸೌಲಭ್ಯಗಳ ಪಟ್ಟಿಯನ್ನೇ ಬಾಬು ನೀಡಿದ್ದಾರೆ.

ಅಶೋಕ್‌ ವಿರುದ್ಧ ಆಪಾದನೆಗೆ ಬಾಬು ಬಳಿ ಸಾಕಷ್ಟು ಸರಕುಗಳಿವೆ

ಈ ಸಂಸ್ಥೆಯ ಉದಯದಿಂದಾಗಿ ತಂತ್ರಜ್ಞರು ಮತ್ತು ಕಾರ್ಮಿಕರ ನಡುವೆ ದೊಡ್ಡ ಸಂಘರ್ಷವೇ ನಿರ್ಮಾಣವಾಗಲಿದೆ ಅನ್ನುವ ನಿರೀಕ್ಷೆಯಿದೆ. ಕಾರ್ಮಿಕರು ಈಗಾಗಲೇ ಅಶೋಕ್‌ ಬೆಂಬಲಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಇನ್ನೊ ಂದೆಡೆ ನಿರ್ಮಾಪಕರ ಸಂಘ ಬಾಬು ಸಂಸ್ಥೆಗೆ ಬೆಂಬಲ ಘೋಷಿಸಿದೆ. ಭಾರತ್‌ -2000 ಚಿತ್ರವನ್ನು ಬಹಿಷ್ಕರಿಸಿದ ಪ್ರಸಂಗವನ್ನು ನೆನಪಲ್ಲಿರಿಸಿಕೊಂಡು ಬಾಬು ಸೇಡು ತೀರಿಸೋದಕ್ಕೆ ಹೊರಟಿದ್ದಾರೆ ಅನ್ನೋದು ಅಶೋಕ್‌ ಆಪಾದನೆ. ಆದರೆ ಅಶೋಕ್‌ ವಿರುದ್ಧ ಆಪಾದನೆಗೆ ಬಾಬು ಕೈಯಲ್ಲಿ ಸಾಕಷ್ಟು ಸರಕುಗಳಿವೆ. ಅದರಲ್ಲಿ ಒಕ್ಕೂಟದಲ್ಲಿ ನಡೆದ ಆರ್ಥಿಕ ವ್ಯವಹಾರವೂ ಇದೆ.

ಇದೇ ಮೇ. 30ಕ್ಕೆ ಮಹಾಸಂಸ್ಥೆಯ ಉದ್ಘಾಟನೆ . ಅದಕ್ಕೆ ಎರಡು ದಿನ ಮೊದಲು ಒಕ್ಕೂಟ ಫಿಲಂ ಚೇಂಬರ್‌ ಮುಂದೆ ಪ್ರತಿಭಟನಾ ಧರಣಿ ನಡೆಸಲಿದೆ. ಸಂಸ್ಥೆಯ ಸ್ಥಾಪನೆಯನ್ನು ಕೈಬಿಡದಿದ್ದರೆ ಚಿತ್ರೋದ್ಯಮ ಬಂದ್‌ ಆಚರಿಸುವುದಾಗಿಯೂ ಅಶೋಕ್‌ ಬೆದರಿಕೆ ಹಾಕಿದ್ದಾರೆ. ಇವೆಲ್ಲದರಿಂದಲೂ ಬಾಬುಗೆ ಅನುಕೂಲವೇ ಆಗಲಿದೆ.

ಬಾಬು ಒಬ್ಬ ಪ್ರತಿಭಾವಂತ ನಿರ್ದೇಶಕ, ನಿರ್ದೇಶಕ ಸಂಘವನ್ನು ಹೊರನಾಡಿನಲ್ಲಿ ಪ್ರತಿನಿಧಿಸಲು ಇವರಿಗಿಂತ ಯೋಗ್ಯ ಅಭ್ಯರ್ಥಿಯೇ ಇಲ್ಲ , ಬಾಬು ಸಕಲ ಕಲಾ ಪ್ರವೀಣ, ಅವರಲ್ಲೊೂಬ್ಬ ಒಳ್ಳೇ ನಾಯಕ, ಕನ್ನಡ ಚಿತ್ರರಂಗಕ್ಕೊಂದು ರೂಪ ಕೊಡುವುದಕ್ಕೆ ಅವರಿಗೆ ಸಾಮರ್ಥ್ಯ ಇದೆ. ಆದರೆ ಇವೆಲ್ಲ ಗುಣಗಳೂ ಅವರ ಚಾಣಕ್ಯ ಗುಣದಿಂದ ತೊಳೆದುಹೋಗುತ್ತಿದೆ. ಮಹಾಸಂಸ್ಥೆಯಿಂದಾಗಿ ಬಾಬು ಮತ್ತೊಮ್ಮೆ ಮಹಾನಾಯಕರಾಗಿ ಮಿಂಚುತ್ತಾರೆಯೇ ಅನ್ನುವುದಷ್ಟೇ ಸದ್ಯದ ಕುತೂಹಲ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada