ಕಲರ್ಸ್ ಕನ್ನಡ ಹೊಸ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಸೂರಜ್; ಪ್ರೋಮೊ ವೈರಲ್
ಬಿಗ್‌ಬಾಸ್ ಸೀಸನ್ 12ರ ಮನೆಯಲ್ಲೀಗ 8 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಹಲವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಸೂರಜ್ ಸಿಂಗ್ ವಾರದ ಹಿಂದೆ ಬಿಗ್‌ಬಾಸ್ ಜರ್ನಿ ಮುಗಿಸಿದ್ದರು. ಇದೀಗ ಹೊಸ ಧಾರಾವಾಹಿಯಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಪ್ರೋಮೊ ಸಹ ಬಿಡುಗಡೆ ಆಗಿದೆ.
ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮಗಳಲ್ಲಿ ನಟಿಸುವವರೇ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗೋದು, ಅದೇ ರೀತಿ ಬಿಗ್‌ಬಾಸ್ ಮನೆಯಲ್ಲಿ ಮಿಂಚಿದವರು ವಾಹಿನಿ ಕಾರ್ಯಕ್ರಮದಲ್ಲಿ ಬಣ್ಣ ಹಚ್ಚುವುದು ಹೊಸದೇನು ಅಲ್ಲ. ಬಣ್ಣದ ಲೋಕದ ಯಾವುದೇ ಹಿನ್ನೆಲೆ ಇಲ್ಲದ ಸೂರಜ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಅವರು 68 ದಿನಗಳ ಕಾಲ ಮನೆಯಲ್ಲಿ ಇದ್ದರು. ತಮ್ಮ ವ್ಯಕ್ತಿತ್ವ ಹಾಗೂ ಆಟದಿಂದ ಗಮನ ಸೆಳೆದಿದ್ದರು. ಇನ್ನು ಸ್ವಲ್ಪ ದಿನ ಅವರು ಮನೆಯಲ್ಲಿ ಇರಬೇಕಿತ್ತು. ಫಿನಾಲೆವರೆಗೂ ಹೋಗಬೇಕಿತ್ತು ಎಂದು ಅಭಿಮಾನಿಗಳು ಭಾವಿಸಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಮೊದಲ ದಿನವೇ ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬಂದು ಹೆಣ್ಮಕ್ಕಳ ದಿಲ್ ಕದ್ದಿದ್ದರು. ಎಲಿಮಿನೇಟ್ ಆಗುವ ವೇಳೆಗೆ ಮತ್ತಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದಾಗ ಬಿಗ್‌ಬಾಸ್ ಮೆನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅದನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು. ಇದೇ ಜನಪ್ರಿಯತೆ ಬಳಸಿಕೊಂಡು ಮುಂದೆ ಬಣ್ಣದಲೋಕದಲ್ಲಿ ಸೂರಜ್ ಮಿಂಚುವ ಸುಳಿವು ಸಿಕ್ತಿದೆ.
ಕಲರ್ಸ್ ಕನ್ನಡ ವಾಹಿನಿಯ 'ಪವಿತ್ರ ಬಂಧನ' ಎಂಬ ಧಾರಾವಾಹಿಯಲ್ಲಿ ಸೂರಜ್ ಹೀರೋ ಆಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಅಮೂಲ್ಯ ಭಾರಧ್ವಜ್ ನಟಿಸಿದ್ದಾರೆ. ಇದು ಸೂರಜ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ದೇವದತ್ ದೇಶ್‌ಮುಖ್ ಎಂಬ ಪಾತ್ರದಲ್ಲಿ ಸೂರಜ್ ಬಣ್ಣ ಹಚ್ಚಿದ್ದಾರೆ.

'ದಾಸ ಪುರಂದರ' ಎಂಬ ಧಾರಾವಾಹಿಯಲ್ಲಿ ಮೊದಲಿಗೆ ಅಮೂಲ್ಯ ಭಾರಧ್ವಜ್ ನಟಿಸಿದ್ದರು. ಬಳಿಕ 'ಬೃಂದಾವನ' ಧಾರಾವಾಹಿ ನಾಯಕಿ ಪಾತ್ರ ಸಿಕ್ಕಿತ್ತು. ನಂತರ ಒಂದು ತೆಲುಗು ಧಾರಾವಾಹಿಯಲ್ಲಿ ಕೂಡ ಮಿಂಚಿದ್ದಾರೆ. ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೂರಜ್ ಸಿಂಗ್ ಜೊತೆ ಒಟ್ಟಿಗೆ ಹೊಸ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಶ್ರೀಮಂತ ಮನೆತನ ಅಣ್ಣ-ತಮ್ಮನ ಬಾಂಧವ್ಯ.. ತಮ್ಮನನ್ನು ಪ್ರೀತಿಸುವ ಯುವತಿ. ಆದರೆ ಸಂದಿಗ್ಧ ಪರಿಸ್ಥಿತಿ ಆತನ ಅಣ್ಣನನ್ನು ಮದುವೆ ಆಗುವಂತಾಗುತ್ತದೆ. ಮುಂದೇನು ಎನ್ನುವುದು 'ಪವಿತ್ರ ಬಂಧನ' ಧಾರಾವಾಹಿ ಕಥೆ.
ಕೆಲಸ ಬಿಟ್ಟು ಮನೆಯಲ್ಲಿ ಕೂತಿದ್ದ ಸೂರಜ್‌ಗೆ ಬಿಗ್‌ಬಾಸ್ ಅದೃಷ್ಟ ಬದಲಿಸಿತ್ತು. ಮುಂದೆ ಮತ್ತಷ್ಟು ನೇಮು ಫೇಮು ತಂದು ಕೊಡುವ ಸುಳಿವು ಸಿಗುತ್ತಿದೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ 18 ಸಾವಿರ ಮಂದಿ ಸೂರಜ್ ಅಕೌಂಟ್ ಫಾಲೋ ಮಾಡುತ್ತಿದ್ದರು. ಆದರೆ ಎಲಿಮಿನೇಟ್ ಆಗಿ ಹೊರ ಬರುವ ವೇಳೆಗೆ ಫಾಲೋವರ್ಸ್ ಸಂಖ್ಯೆ 3 ಲಕ್ಷದವರೆಗೆ ತಲುಪಿದೆ. ಇದನ್ನು ಸೂರಜ್ ಕೂಡ ನಿರೀಕ್ಷಿಸಿರಲಿಲ್ಲ. ಅಷ್ಟರಮಟ್ಟಿಗೆ ಸೂರಜ್ ಬಗ್ಗೆ ಅಭಿಮಾನಿಗಳಲ್ಲಿ ಆಸಕ್ತಿ ಮೂಡಿದೆ.
ಕಲರ್ಸ್ ಕನ್ನಡದಲ್ಲಿ ಹೊಸ ಹೊಸ ಕಥೆಗಳು ಧಾರಾವಾಹಿ ರೂಪ ಪಡೆಯುತ್ತಲೇ ಇರುತ್ತವೆ. ಸಾಕಷ್ಟು ಅದ್ಧೂರಿ ಧಾರಾವಾಹಿಗಳನ್ನು ವಾಹಿನಿ ವೀಕ್ಷಕರ ಮುಂದೆ ತರ್ತಿದೆ. ಬಿಗ್‌ಬಾಸ್-12 ಬಳಿಕ 'ಗಿಚ್ಚಿ ಗಿಲಿಗಿಲಿ' ಹೊಸ ಸೀಸನ್ ಶುರುವಾಗ್ತಿದೆ. ಕಾಮಿಡಿ ಕಿಲಾಡಿಗಳ ಜೊತೆ ಪಟಾಣಿ ಮಕ್ಕಳು ಈ ಬಾರಿ ನಗಿಸೋಕೆ ಬರ್ತಿದ್ದಾರೆ. ಸೃಜನ್ ಲೋಕೇಶ್, ಶ್ರುತಿ, ಸಾಧು ಕೋಕಿಲ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಪ್ರೋಮೋ ಕೂಡ ಬಂದಿದೆ.


Click it and Unblock the Notifications











