ರಾವಣನಾಗಿ ನಟಿಸಿದ ಬಳಿಕ ಶಿವನಾಗಿ ಯಶ್ ನಟನೆ? ನಿಮಿತ್ ಮಲ್ಹೋತ್ರಾ ಸುಳಿವು
ಸದ್ಯ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾಗಳ ಟ್ರೆಂಡ್ ಶುರುವಾಗ್ತಿದೆ. ಹಾಲಿವುಡ್ ಸಿನಿಮಾಗಳ ಮಟ್ಟಕ್ಕೆ ಭಾರತೀಯ ಸಿನಿಮಾಗಳನ್ನು ಕಟ್ಟಿಕೊಡುವ ಪ್ರಯತ್ನ ಆರಂಭವಾಗಿದೆ. 4000 ಕೋಟಿ ರೂ. ಬಜೆಟ್‌ನಲ್ಲಿ 'ರಾಮಾಯಣ' ಚಿತ್ರ ನಿರ್ಮಾಣವಾಗ್ತಿದೆ. ಮುಂದಿನ ಇಂತಹ ಮತ್ತಷ್ಟು ಚಿತ್ರಗಳಿಗೆ ತಯಾರಿ ನಡೀತಿದೆ.
'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಕನ್ನಡ ನಟ ಯಶ್ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದ್ದು ಬಹಳ ಕುತೂಹಲ ಮೂಡಿಸಿದೆ. ನಿಮಿತ್ ಮಲ್ಹೋತ್ರಾ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ರಾಕಿಂಗ್ ಸ್ಟಾರ್ ಕೈಜೋಡಿಸಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಹಾಲಿವುಡ್ 'ಅವೆಂಜರ್ಸ್' ಸರಣಿ ಸಿನಿಮಾಗಳಿಗೆ ಸಮನಾಗಿ 'ರಾಮಾಯಣ' ಚಿತ್ರ ಕಟ್ಟಿಕೊಡುತ್ತಿರುವುದಾಗಿ ಚಿತ್ರತಂಡ ಹೇಳ್ತಿದೆ. ಆ ಮಟ್ಟಕ್ಕೆ ಮೇಕಿಂಗ್, ವಿಎಫ್‌ಎಕ್ಸ್ ಕೆಲಸಗಳು ನಡೀತಿದೆ. ಇದು ಭಾರತದಲ್ಲಿ ನಿರ್ಮಾಣವಾಗುತ್ತಿರುವ ಇಂಟರ್‌ನ್ಯಾಷನಲ್ ಸಿನಿಮಾ. ಇಂತಾದೊಂದು ಚಿತ್ರಕ್ಕೆ ರಾಮಾಯಣ ಕಾವ್ಯವನ್ನು ಆರಿಸಿಕೊಂಡಿರುವುದು ವಿಶೇಷ. ಮುಂದೆ ಶಿವನ ಕುರಿತು ಸಿನಿಮಾ ಮಾಡಲು ನಿಮಿತ್ ಮಲ್ಹೋತ್ರಾ ಮನಸ್ಸು ಮಾಡಿದ್ದಾರೆ, ಈಗಾಗಲೇ ಟೈಟಲ್ ಸಹ ರಿಜಿಸ್ಟರ್ ಮಾಡಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
'ರಾಮಾಯಣ' ಚಿತ್ರದ ಬೆನ್ನಲ್ಲೇ ಅಂಥದ್ದೆ ಮತ್ತಷ್ಟು ಸಿನಿಮಾ ಮಾಡುವ ಬಗ್ಗೆ ಮೊದಲಿನಿಂದಲೂ ಊಹಾಪೋಹ ಶುರುವಾಗಿದೆ. ಮುಖ್ಯವಾಗಿ ಹನುಮಂತನ ಪಾತ್ರವನ್ನು ಆಧರಿಸಿ ಒಂದಿಡೀ ಸಿನಿಮಾ ಮಾಡುವ ಲೆಕ್ಕಾಚಾರ ನಡೀತಿದೆಯಂತೆ. 'ರಾಮಾಯಣ' ಚಿತ್ರದಲ್ಲಿ ಸನ್ನಿ ಡಿಯೋಲ್ ಹನುಮಂತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮುಂದೆ ಮಾಡುವ ಚಿತ್ರದಲ್ಲಿ ಅವರು ನಟಿಸುತ್ತಾರೆ ಎನ್ನಲಾಗ್ತಿದೆ. ಇನ್ನು ಶಿವ ಕಥೆಯನ್ನು ಆಧರಿಸಿ ಮಾಡುವ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ಶಿವನ ಕುರಿತು ಸಿನಿಮಾ ಮಾಡುವ ಬಗ್ಗೆ ಸದ್ಗುರು ಜೊತೆಗಿನ ಸಂದರ್ಶನದಲ್ಲಿ ನಿಮಿತ್ ಮಲ್ಹೋತ್ರಾ ಸುಳಿವು ಕೊಟ್ಟಿದ್ದಾರೆ. ಅದನ್ನು ಕೇಳಿ ಶಿವನ ಕುರಿತು ಸಿನಿಮಾ ಮಾಡುವ ಪ್ರಯತ್ನಗಳು ನಡೀತಿದೆ, ಯಶ್ ಪರಮೇಶ್ವರನ ವೇಷದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಶಿವನ ಬಗ್ಗೆ ಯಾವಾಗ ಸಿನಿಮಾ ಮಾಡುತ್ತೀರಾ? ಎಂದು ಸದ್ಗುರು ಕೇಳಿದ್ದಾರೆ. ಅದಕ್ಕೆ ನಿಮಿತ್ ಉತ್ತರಿಸಿದ್ದಾರೆ.
"ಖಂಡಿತ ಶಿವನ ಬಗ್ಗೆ ಸಿನಿಮಾ ಮಾಡುವಾಗ ಆತನ ಬಗ್ಗೆ ನಿಮ್ಮ ಬಳಿ ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡುತ್ತೇವೆ" ಎಂದು ನಿಮಿತ್ ಹೇಳಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಶಿವನ ಕುರಿತು ಸಿನಿಮಾ ಮಾಡಲು ನಿರ್ಮಾಪಕರು ಚರ್ಚಿಸುತ್ತಿರುವಂತೆ ಕಾಣ್ತಿದೆ. ಶಿವನಾಗಿ ಯಶ್ ನಟಿಸುತ್ತಾರಾ? ಎನ್ನುವ ಕುತೂಹಲ ಮೂಡಿದೆ. ಸದ್ಯ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ 2ನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ.
'ಟಾಕ್ಸಿಕ್', 'ರಾಮಾಯಣ' ಸರಣಿ ಬಳಿಕ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಪ್ರಶಾಂತ್ ನೀಲ್ ಜೊತೆ 'ಕೆಜಿಎಫ್- 3' ಸಿನಿಮಾ ಕೂಡ ಮಾಡಬೇಕಿದೆ. ಅದಕ್ಕೆ ಇನ್ನು ಮುಹೂರ್ತ ಫಿಕ್ಸ್ ಆಗಿಲ್ಲ. ಆ ಚಿತ್ರವನ್ನು ಕೂಡ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸಲಿದೆ. ರಾಕಿಂಗ್ ಸ್ಟಾರ್ ಮುಂದೆ ಪ್ಯಾನ್ ವರ್ಲ್ಡ್ ಸಿನಿಮಾಗಳಲ್ಲೇ ನಟಿಸಬೇಕಾಗಬಹುದು. ಶಿವನ ಪಾತ್ರದಲ್ಲಿ ನಟಿಸಿದರೂ ಅಚ್ಚರಿಪಡಬೇಕಿಲ್ಲ. ಅದೇ ನಿಜವಾದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.


Click it and Unblock the Notifications











