ತಂದೆ, ಮಗ, ಮೊಮ್ಮೊಕ್ಕಳು; ಅಲ್ಲು ಅರ್ಜುನ್ ಹೊಸ ಸಾಹಸ
ತೆಲುಗು ನಟ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. 'ಪುಷ್ಪ' ಸರಣಿ ಸಿನಿಮಾಗಳಿಂದ ಬಾಕ್ಸಾಫೀಸ್ ಸುಲ್ತಾನ್ ಎನಿಸಿಕೊಂಡಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ಬನ್ನಿ ಪುಷ್ಪರಾಜ್ ಆಗಿ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ.
'ಪುಷ್ಪ'-2 ಬ್ಲಾಕ್‌ಬಸ್ಟರ್ ಹಿಟ್ ಅಲೆಯಲ್ಲೇ ತೇಲುತ್ತಿರುವ ಸ್ಟೈಲಿಶ್ ಸ್ಟಾರ್ ಇದೀಗ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ನಡೀತಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಟ್ಲಿ ನಿರ್ದೇಶನದ ಈ ಸೈಫೈ ಸೂಪರ್ ಹೀರೋ ಚಿತ್ರದಲ್ಲಿ 4 ಜನ ನಾಯಕಿಯರು ಎನ್ನಲಾಗ್ತಿದೆ. ರಶ್ಮಿಕಾ ಮಂದಣ್ಣ ಕೂಡ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮೃಣಾಲ್ ಠಾಕೂರ್ ಹಾಗೂ ಜಾನ್ವಿ ಕಪೂರ್ ಕೂಡ ಚಿತ್ರದಲ್ಲಿ ಇರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.
AA22xA6 ಎಂಬ ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಪಾತ್ರದ ಬಗ್ಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಸ್ಟೈಲಿಶ್ ಸ್ಟಾರ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಆದರೆ ದ್ವಿಪಾತ್ರ ಅಲ್ಲ ನಾಲ್ಕು ಪಾತ್ರಗಳಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನುವ ಊಹಾಪೋಹ ಈಗ ಶುರುವಾಗಿದೆ. ತಂದೆ, ಮಗ ಹಾಗೂ ಇಬ್ಬರು ಮೊಮ್ಮಕ್ಕಳಾಗಿ ಒಟ್ಟು 4 ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ.
ಸ್ಟಾರ್ ನಟರು ದ್ವಿಪಾತ್ರ, ತ್ರಿಪಾತ್ರ ಅಥವಾ ಅದಕ್ಕಿಂತ ಹೆಚ್ಚು ಪಾತ್ರಗಳಲ್ಲಿ ನಟಿಸಿರೋದು ಹೊಸದೇನು ಅಲ್ಲ. ಆದರೆ 3 ಪಾತ್ರಗಳು ಇದ್ದಾಗ ಎಲ್ಲದ್ದಕ್ಕೂ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಸಿಗುತ್ತದೆ. ಅದಕ್ಕಿಂತ ಹೆಚ್ಚು ಅಂದಾಗ ಕೇವಲ ಅತಿಥಿ ಪಾತ್ರದಂತೆ ಆಗಿಬಿಡುತ್ತದೆ. 'ದಶಾವತಾರಂ' ಚಿತ್ರದಲ್ಲಿ ಕಮಲ್ ಹಾಸನ್ 10 ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಒಂದೆರಡು ಪಾತ್ರ ಬಿಟ್ಟರೆ ಬಹುತೇಕ ಅತಿಥಿ ಪಾತ್ರಗಳಂತೆ ಭಾಸವಾಗಿತ್ತು.

ತಮಿಳು ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿದವರು ಅಟ್ಲಿ. ಶಂಕರ್ ಕೂಡ ತಮ್ಮ ಸಿನಿಮಾಗಳಲ್ಲಿ ನಾಯಕ ನಟನನ್ನು ದ್ವಿಪಾತ್ರಗಳಲ್ಲಿ ತೋರಿಸಿರುವ ಉದಾಹರಣೆಗಳಿವೆ. ಅಥವಾ ಒಂದೇ ಪಾತ್ರವನ್ನು ಟ್ವಿಸ್ಟ್ ಬೇರೆ ಬೇರೆ ಶೇಡ್‌ಗಳಲ್ಲಿ ತೆರೆಗೆ ತಂದಿರುವುದು ಇದೆ. ಅಟ್ಲಿ ಕೂಡ ತಮ್ಮ ಸಿನಿಮಾಗಳಲ್ಲಿ ಇದೇ ಪ್ರಯತ್ನ ಮಾಡುತ್ತಾ ಬರ್ತಿದ್ದಾರೆ.
'ಮೆರ್ಸಲ್' ಚಿತ್ರದಲ್ಲಿ ದಳಪತಿ ವಿಜಯ್ ತ್ರಿಪಾತ್ರದಲ್ಲಿ ಮಿಂಚಿದ್ದರು. 'ಬಿಗಿಲ್' ಚಿತ್ರದಲ್ಲೂ ತಂದೆ, ಮಗನಾಗಿ ಡಬಲ್ ರೋಲ್ ಇತ್ತು. 'ತೇರಿ' ಚಿತ್ರದಲ್ಲೂ ಇದೇ ಲೆಕ್ಕಾಚಾರ ಮಾಡಿದ್ದರು. ಅಷ್ಟೆಲ್ಲ ಯಾಕೆ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಕೂಡ ದ್ವಿಪಾತ್ರದಲ್ಲಿ ಮಿಂಚಿದ್ದು ಗೊತ್ತೇಯಿದೆ. ಅದೇ ರೀತಿ ಮುಂದಿನ ಸಿನಿಮಾ 4 ಪಾತ್ರಗಳಲ್ಲಿ ಅಲ್ಲು ಅರ್ಜುನ್ ಅವರನ್ನು ತೋರಿಸುವ ಸಾಹಸಕ್ಕೆ ಕೈಹಾಕಿದ್ದಾರೆ.
ಸೆಟ್ಟೇರುವ ಮುನ್ನ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾ ಸದ್ದು ಮಾಡ್ತಿದೆ. ಬರೋಬ್ಬರಿ 800 ಕೋಟಿ ರೂ. ಬಜೆಟ್‌ನಲ್ಲಿ ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಸಿಜಿ ವರ್ಕ್‌ಗಾಗಿ ಹಾಲಿವುಡ್ ಸ್ಟುಡಿಯೋ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತೆರೆಮೇಲೆ ಅದ್ಭುತ ಪ್ರಪಂಚವನ್ನು ಕಟ್ಟಿಕೊಡಲು ಅಟ್ಲಿ ಮತ್ತವರ ತಂಡ ಶ್ರಮಿಸುತ್ತಿದೆ.


Click it and Unblock the Notifications











