Nelson: ಆ ಪ್ಯಾನ್ ಇಂಡಿಯಾ ಸ್ಟಾರ್, ನೆಲ್ಸನ್ ಭೇಟಿ: 'ಜೈಲರ್' ಸಾರಥಿಯ ಮುಂದಿನ ಸಿನಿಮಾ ಫಿಕ್ಸ್?
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಓಟಿಟಿಗೆ ಬಂದರೂ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. 'ಜೈಲರ್' ಸಕ್ಸಸ್ ಸೆಲೆಬ್ರೇಷನ್ ಇನ್ನು ನಿಂತಿಲ್ಲ.
ಕೇವಲ 3 ಸಿನಿಮಾ ಮಾಡಿದ್ದ ನಿರ್ದೇಶಕ ನೆಲ್ಸನ್ ದಿಢೀರನೆ ರಜನಿಕಾಂತ್ ಜೊತೆ ಸಿನಿಮಾ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು. 'ಬೀಸ್ಟ್' ಸಿನಿಮಾ ಸೋತರೂ ಕುಗ್ಗದೇ 'ಜೈಲರ್' ಕಥೆ ಕಟ್ಟಿಕೊಟ್ಟು ಸಕ್ಸಸ್ ಕಂಡರು. ಸೂಪರ್ ಸ್ಟಾರ್‌ನ ಬಹಳ ವಿಭಿನ್ನವಾಗಿ ತೋರಿಸಿ ಗಮನ ಸೆಳೆದರು. ರಾತ್ರೋರಾತ್ರಿ ಸ್ಟಾರ್ ಡೈರೆಕ್ಟರ್ ಪಟ್ಟ ಅಲಂಕರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಲೈವಾ ಸಿನಿಮಾ ಅಷ್ಟಾಗಿ ಸೌಂಡ್ ಮಾಡುತ್ತಿರಲಿಲ್ಲ. ಇಂತಹ ಸಮಯದಲ್ಲೇ 'ಜೈಲರ್' ಸಿನಿಮಾ ಮಾಡಿ ನೆಲ್ಸನ್ ದೊಡ್ಡ ಬ್ರೇಕ್ ಕೊಟ್ಟಿದ್ದಾರೆ.

ಸಿಂಪಲ್ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದು ನೆಲ್ಸನ್ ಜಾಣ್ಮೆ. ಇನ್ನು ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಯಿತು. ರಜನಿಕಾಂತ್ ಹೆಸರು ಹೇಳಿಗೆ ಶಿವಣ್ಣ, ಮೋಹನ್ ಲಾಲ್‌ನ ಒಪ್ಪಿಸುವಲ್ಲಿ ನಿರ್ದೇಶಕರು ಸಕ್ಸಸ್ ಕಂಡಿದ್ದರು. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನಿಸಿಕೊಂಡ ಸಿನಿಮಾ ಇನ್ನು ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಲೇಯಿದೆ.
'ಜೈಲರ್' ಬಳಿಕ ವಾಟ್ ನೆಕ್ಟ್ಸ್? ಎನ್ನುವ ಪ್ರಶ್ನೆಗೆ ನಿರ್ದೇಶಕ ನೆಲ್ಸನ್ ಇನ್ನು ಉತ್ತರ ಕೊಟ್ಟಿಲ್ಲ. ಆದರೆ ತೆರೆಮರೆಯಲ್ಲಿ ತಮ್ಮ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಒಂದಷ್ಟು ಕತೆಗಳನ್ನು ಸ್ಟಾರ್ ನಟರಿಗೆ ಹೇಳಿ ಒಪ್ಪಿಸುವ ಕೆಲಸ ಆರಂಭಿಸಿದ್ದಾರೆ. ಇತ್ತೀಚೆಗೆ ತೆಲುಗು ನಟ ಅಲ್ಲು ಅರ್ಜುನ್ ಭೇಟಿ ಮಾಡಿ ಸಿನಿಮಾ ಬಗ್ಗೆ 'ಜೈಲರ್' ನಿರ್ದೇಶಕ ಚರ್ಚೆ ಮಾಡಿದ್ದಾರಂತೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ.
ಸ್ಟೈಲಿಶ್ ಸ್ಟಾರ್ ಸದ್ಯ 'ಪುಷ್ಪ'-2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸ್ವಾತಂತ್ರ್ಯ ದಿನೋತ್ಸವ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ಸದ್ದು ಮಾಡ್ತಿದೆ. 2 ವರ್ಷಗಳ ಹಿಂದೆ ಬಂದಿದ್ದ ಚಿತ್ರದ ಪ್ರೀಕ್ವೆಲ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ 'ಪುಷ್ಪ'ರಾಜ್ ಆಗಿ ಅಲ್ಲು ಅರ್ಜುನ್ ನಟನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಇದೀಗ ಸ್ಟೈಲಿಶ್ ಸ್ಟಾರ್ ಹಾಗೂ ನೆಲ್ಸನ್ ಭೇಟಿ ವಿಚಾರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಕ್ರೇಜಿ ಪ್ರಾಜೆಕ್ಟ್ ಪ್ಲ್ಯಾನ್ ನಡೀತಿದೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ ಕೂಡ ಥ್ರಿಲ್ಲಾಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಕಲಾವಿದರು, ತಂತ್ರಜ್ಞರು ಭಾಷೆಯ ಗಡಿ ಮೀರಿ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ ತಮಿಳು ನಿರ್ದೇಶಕರು ತೆಲುಗು ಸಿನಿಮಾ ಮಾಡೋದು, ತೆಲುಗು ನಿರ್ದೇಶಕರು ತಮಿಳು ಚಿತ್ರಕ್ಕೆ ಕೆಲಸ ಮಾಡೋದು ನಡೀತಾನೇ ಇದೆ. ನೆಲ್ಸನ್ ಕುಡ ಇದೇ ಹಾದಿಯಲ್ಲಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಕೆಲವರ ಪ್ರಕಾರ ನೆಲ್ಸನ್ ತಮ್ಮ ಮುಂದಿನ ಚಿತ್ರದ ಅತಿಥಿ ಪಾತ್ರವೊಂದಕ್ಕೆ ಅಲ್ಲು ಅರ್ಜುನ್‌ನ ಸಂಪರ್ಕಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಅಲ್ಲು ಅರ್ಜುನ್ 'ಪುಷ್ಪ'-2 ಬಳಿಕ ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ. 'ಜೈಲರ್' ಸಾರಥಿಗೆ ಆ ಅವಕಾಶ ಸಿಕ್ಕರೂ ಸಿಗಬಹುದು. ಇನ್ನು ಈ ಹಿಂದೆ 'ಪುಷ್ಪ' ಸಿನಿಮಾ ನೋಡಿ ನೆಲ್ಸನ್ ಟ್ವೀಟ್ ಮಾಡಿ ಅಲ್ಲು ಅರ್ಜುನ್ ನಟನೆಗೆ ಮೆಚ್ಚುಗೆ ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸ್ಟೈಲಿಶ್ ಸ್ಟಾರ್, ನೆಲ್ಸನ್ ನಿರ್ದೇಶನದ 'ಡಾಕ್ಟರ್' ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. 'ಜವಾನ್' ಬಳಿಕ ಅಲ್ಲು ಅರ್ಜುನ್ ನಟನೆಯ ಚಿತ್ರಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ.


Click it and Unblock the Notifications











