ಆಶಿಕಾಗೆ ಭರ್ಜರಿ ಆಫರ್; ಸ್ಟಾರ್ ನಟನ ಜೊತೆ ನಾಯಕಿಯಾಗಿ ಆಯ್ಕೆ!
ತುಮಕೂರಿನಲ್ಲಿ ಹುಟ್ಟಿ ಬೆಳೆದ ಚೆಲುವೆ ಆಶಿಕಾ ರಂಗನಾಥ್ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಅವಕಾಶಗಳನ್ನು ಬಾಚಿಕೊಂಡಿರುವ ಚೆಲುವೆ ಈಗಾಗಲೇ ತೆಲುಗು, ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಚಿರಂಜೀವಿ ನಟನೆಯ 'ವಿಶ್ವಂಭರ' ಚಿತ್ರದಲ್ಲಿ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕನ್ನಡದಲ್ಲಿ ಕೂಡ ಆಶಿಕಾ ರಂಗನಾಥ್ ಬಹಳ ಬ್ಯುಸಿಯಾಗಿದ್ದಾರೆ. ಸಿಂಪಲ್ ಸುನಿ ನಟನೆಯ 'ಗತವೈಭವ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ಸರ್ದಾರ್- 2' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ ಜೋಡಿಯಾಗುವ ಅವಕಾಶ ಹುಡುಕಿ ಬಂದಿದೆ.

ಎರಡು ವರ್ಷಗಳ ಹಿಂದೆಯೇ ಆಶಿಕಾ ಟಾಲಿವುಡ್ ಪ್ರವೇಶಿಸಿದ್ದರು. ಕಲ್ಯಾಣ್ ರಾಮ್ ಜೋಡಿಯಾಗಿ 'ಅಮಿಗೊಸ್' ಚಿತ್ರದಲ್ಲಿ ಮಿಂಚಿದ್ದರು. ಬಳಿಕ 'ನಾ ಸಾಮಿ ರಂಗ' ಚಿತ್ರದಲ್ಲಿ ನಾಗಾರ್ಜುನ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. 'ಪಟ್ಟಾಟು ಅರಸನ್' ಎಂಬ ಚಿತ್ರದ ಮೂಲಕ ಕಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಇತ್ತೀಚೆಗೆ 'ಮಿಸ್ ಯು' ಎಂಬ ಮತ್ತೊಂದು ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಆಶಿಕಾ ರಂಗನಾಥ್.
ಸದ್ಯ ತೆಲುಗಿನಲ್ಲಿ ರವಿತೇಜಾ ಜೋಡಿಯಾಗಿ ಆಶಿಕಾ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ತೆಲುಗು ವೆಬ್‌ಸೈಟ್‌ಗಳಲ್ಲಿ ಕೂಡ ಇದೇ ವಿಚಾರ ಸದ್ದು ಮಾಡ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಟ ರವಿತೇಜ ಸದ್ಯ 'ಜಾತರ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಿರುಮಲ ಕಿಶೋರ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರದ ಬಗ್ಗೆ ಚರ್ಚೆ ನಡೀತಿದೆ. ಇದೇ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. 'ಅನಾರ್ಕಲಿ' ಎಂಬ ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿದೆ.
9 ವರ್ಷಗಳ ಹಿಂದೆ 'ಕ್ರೇಜಿ ಬಾಯ್' ಚಿತ್ರದ ಮೂಲಕ ಆಶಿಕಾ ಚಿತ್ರರಂಗ ಪ್ರವೇಶಿಸಿದ್ದರು. ಆದರೆ ದೊಡ್ಡ ಅವಕಾಶಗಳು ಮಾತ್ರ ಸಿಗಲಿಲ್ಲ. 'ರಾಜು ಕನ್ನಡ ಮೀಡಿಯಂ', 'ರ್ಯಾಂಬೊ-2', 'ಮದಗಜ', 'ಅವತಾರ ಪುರುಷ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. 'ಕೋಟಿಗೊಬ್ಬ- 3' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕೂಡ ಬಿಂದಾಸ್ ಹೆಜ್ಜೆ ಹಾಕಿದ್ದರು.

ಅಂದ ಅಭಿನಯ ಇದ್ದರೂ ಆಶಿಕಾಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಸದ್ಯ ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟಿಯರು ಒಬ್ಬರ ಹಿಂದೆ ಒಬ್ಬರನ್ನು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ತೆಲುಗಿನಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಸಪ್ತಮಿ ಗೌಡ, ಸಂಜನಾ ಆನಂದ್ ಸೇರಿದಂತೆ ಕೆಲವರು ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ಆಶಿಕಾ ರಂಗನಾಥ್ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಕ್ರೇಜ್ ಶುರುವಾಗಿದೆ. 'ನಾ ಸಾಮಿ ರಂಗ' ಸಿನಿಮಾ ಬಳಿಕ ಮತ್ತಷ್ಟು ಅವಕಾಶಗಳು ಆಕೆಯನ್ನು ಅರಸಿ ಬರುತ್ತಿವೆ. ರವಿತೇಜಾ ಜೊತೆ ನಟಿಸೋ ಅವಕಾಶ ಕೂ ಸಿಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











