5 ವರ್ಷಗಳಲ್ಲಿ 3 ಪಟ್ಟು ಹೆಚ್ಚಾಯ್ತಾ ದರ್ಶನ್ ಸಂಭಾವನೆ? ಅಬ್ಬಬ್ಬಾ 'ಡೆವಿಲ್' ಚಿತ್ರಕ್ಕೆ ಎಷ್ಟು ಕೇಳ್ತಿದ್ದಾರೆ ಗೊತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಅಂತೆಲ್ಲಾ ಅವರ ಸಿನಿಮಾಗಳು ಭರ್ಜರಿ ಬ್ಯುಸಿನೆಸ್ ಮಾಡ್ತಿವೆ. ಅದಕ್ಕೆ ತಕ್ಕಂತೆ ದರ್ಶನ್ ಸಂಭಾವನೆ ಕೂಡ ಚಿತ್ರದಿಂದ ಚಿತ್ರಕ್ಕೆ ಹೆಚ್ಚಾಗುತ್ತಿದೆ.
'ರಾಬರ್ಟ್' ಚಿತ್ರಕ್ಕೆ ದಿಢೀರನೆ ದರ್ಶನ್ ಸಂಭಾವನೆ ಹೆಚ್ಚಾಗಿತ್ತು ಎನ್ನಲಾಗುತ್ತಿದೆ. ಗಾಂಧಿನಗರದ ಗುಸುಗುಸು ಪ್ರಕಾರ ಸದ್ಯ ದರ್ಶನ್ ಕಾಲ್‌ಶೀಟ್ ಬೇಕು ಅಂದ್ರೆ ನಿರ್ಮಾಪಕರ ಗುಂಡಿಗೆ ಗಟ್ಟಿ ಇರಬೇಕು. ಹೀರೊಗೆ ಅಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟು ಬಹಳ ಗ್ರ್ಯಾಂಡ್ ಆಗಿ ಸಿನಿಮಾ ನಿರ್ಮಿಸಿ, ಪ್ರಮೋಷನ್ ಮಾಡಿ ರಿಲೀಸ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ದರ್ಶನ್‌ಗಿರುವ ಸ್ಟಾರ್‌ಡಮ್‌ಗೆ ಎಷ್ಟೇ ಬಂಡವಾಳ ಹಾಕಿದರೂ ಮರಳಿ ಬರುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ.

'ಯಜಮಾನ', 'ಕುರುಕ್ಷೇತ್ರ', 'ರಾಬರ್ಟ್', 'ಕ್ರಾಂತಿ', 'ಕಾಟೇರ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಅದಕ್ಕೆ ತಕ್ಕಂತೆ ಸಂಭಾವನೆ ಕೂಡ ಹೆಚ್ಚಿಕೊಂಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಕೆಲವರ ಪ್ರಕಾರ ಕಳೆದ 5 ವರ್ಷಗಳಲ್ಲಿ ದರ್ಶನ್ ಸಂಭಾವನೆ 3 ಪಟ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಸದ್ಯ 'ಡೆವಿಲ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿರುವ ಬಗ್ಗೆ ಚರ್ಚೆ ನಡೀತಿದೆ.
ಸದ್ಯ ಕನ್ನಡ ಚಿತ್ರರಂಗದ ಓಡುವ ಕುದುರೆ ದರ್ಶನ್. ಸಿನಿಮಾ ಚೆನ್ನಾಗಿದ್ಯೋ ಚೆನ್ನಾಗಿಲ್ವೋ ಗೊತ್ತಾಗುವ ಮುನ್ನ ಭರ್ಜರಿ ಓಪನಿಂಗ್ ಅಂತೂ ಸಿಕ್ಕಿ ಬಿಡುತ್ತದೆ. ಇನ್ನು ಸಿನಿಮಾ ಚೆನ್ನಾಗಿದ್ದರೆ ಮುಗಿದೇ ಹೋಯ್ತು. 'ಕಾಟೇರ' ಸಿನಿಮಾ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆ ಲೆಕ್ಕದಲ್ಲಿ ಸಹಜವಾಗಿಯೇ ಬಾಕ್ಸಾಫೀಸ್ ಸುಲ್ತಾನ್ ಸಂಭಾವನೆ ಹೆಚ್ಚಾಗುತ್ತದೆ. 'ಒಡೆಯ' ಸಿನಿಮಾವರೆಗೂ ದರ್ಶನ್ ಸಂಭಾವನೆ ಐದೂವರೆ ಕೋಟಿ ರೂ. ಇತ್ತಂತೆ. ಆದರೆ 'ರಾಬರ್ಟ್' ಚಿತ್ರಕ್ಕೆ ಅದು ಹೆಚ್ಚು ಕಡಿಮೆ ಡಬಲ್ ಆಗಿತ್ತು.
ಉಮಾಪತಿ ಶ್ರೀನಿವಾಸ್ ದೊಡ್ಡಮಟ್ಟದಲ್ಲಿ 'ರಾಬರ್ಟ್' ಸಿನಿಮಾ ಮಾಡಿದ್ದರು. ಅದಕ್ಕೆ ತಕ್ಕಂತೆ ಕಲಾವಿದರು, ತಂತ್ರಜ್ಞರಿಗೆ ಸಂಭಾವನೆ ಕೊಟ್ಟಿದ್ದರು. ಆ ಚಿತ್ರದಲ್ಲಿ ದರ್ಶನ್ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಸೊಗಸಾಗಿ ನಟಿಸಿ ಗೆದ್ದಿದ್ದರು. ಕೊರೊನಾ ಲಾಕ್‌ಡೌನ್ ಬಳಿಕ ಬಂದ ದೊಡ್ಡ ಸಿನಿಮಾಗಳಲ್ಲಿ ಇದು ಒಂದು. ಹಾಗಾಗಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗಳಿಗೆ ನುಗ್ಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. 'ರಾಬರ್ಟ್' ಚಿತ್ರಕ್ಕಾಗಿ ದರ್ಶನ್ 9 ಕೋಟಿ ರೂ. ರೆಮ್ಯೂನರೇಷನ್ ಪಡೆದುಕೊಂಡಿದ್ದರು ಎನ್ನಲಾಗುತ್ತದೆ.

'ರಾಬರ್ಟ್' ಬಳಿಕ 'ಕ್ರಾಂತಿ' ಸಿನಿಮಾ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಒಳ್ಳೆ ಬ್ಯುಸಿನೆಸ್ ಮಾಡಿದ್ದಾಗಿ ನಿರ್ಮಾಪಕರೇ ಘೋಷಣೆ ಮಾಡಿದ್ದರು. ಆ ಚಿತ್ರಕ್ಕೂ ದರ್ಶನ್‌ಗೆ ಒಳ್ಳೆ ಸಂಭಾವನೆ ಸಿಕ್ಕಿತ್ತು. ಸದ್ಯ 'ಕಾಟೇರ' ಚಿತ್ರದಲ್ಲಿ 12 ಕೋಟಿ ರೂ.ವರೆಗೂ ದರ್ಶನ್ ಪಡೆದಿರುವುದಾಗಿ ಹೇಳಲಾಗುತ್ತಿದೆ. 'ಕಾಟೇರ' ಆರ್ಭಟ ಹೇಗಿತ್ತು? ಎನ್ನುವುದೇ ಗೊತ್ತೇಯಿದೆ. ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡಿ ಭರ್ಜರಿ ಸಕ್ಸಸ್ ಕಂಡಿದ್ದಾರೆ.
ಶ್ರೀ ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋ ಬ್ಯಾನರ್‌ಗಳ ಅಡಿಯಲ್ಲಿ 'ಡೆವಿಲ್' ಸಿನಿಮಾ ನಿರ್ಮಾಣವಾಗುತ್ತಿದೆ. ದುಷ್ಯಂತ್ ಜೊತೆ ಸೇರಿ ನಿರ್ದೇಶಕ ಪ್ರಕಾಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ದರ್ಶನ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದಾರೆ. ಸದ್ಯ ಈ ಚಿತ್ರಕ್ಕೆ ದರ್ಶನ ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವುದು ಹಾಟ್ ಟಾಪಿಕ್ ಆಗಿದೆ.
'ಡೆವಿಲ್' ಚಿತ್ರಕ್ಕೆ ದರ್ಶನ್ ಬರೋಬ್ಬರಿ 22 ಕೋಟಿ ರೂ. ಸಂಭಾವನೆ ಪಡುತ್ತಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದ ವಲಯದಲ್ಲಿ ಕೇಳಿಬರ್ತಿದೆ. 'ಕಾಟೇರ' ಬ್ಲಾಕ್‌ಬಸ್ಟರ್ ಹಿಟ್ ಬಳಿಕ 'ಡೆವಿಲ್' ಲೆಕ್ಕಾಚಾರ ಬದಲಾಗಿದೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ದರ್ಶನ್ ಮುಂದಿನ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಕಾಂಬಿನೇಷನ್ ಭಾರೀ ಹೈಪ್ ಕ್ರಿಯೇಟ್ ಮಾಡಿರುವುದು ಸುಳ್ಳಲ್ಲ. ಅದಕ್ಕೆ ತಕ್ಕಂತೆ ಈ ಚಿತ್ರಕ್ಕೂ ದರ್ಶನ್ ದೊಡ್ಡ ಮೊತ್ತದ ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.


Click it and Unblock the Notifications










