ಪ್ಯಾನ್ ಇಂಡಿಯಾ ಚಿತ್ರದಲ್ಲಿ ಎಂ. ಎಸ್ ಧೋನಿ; ಕ್ರಿಕೆಟ್ ಕೋಚ್ ಪಾತ್ರದಲ್ಲಿ ನಟನೆ?
ಖ್ಯಾತನಾಮರನ್ನು ಸಿನಿಮಾಗಳಲ್ಲಿ ತೋರಿಸಿದರೆ ಸಕ್ಸಸ್ ಸಿಗುತ್ತದೆ ಎನ್ನುವ ನಂಬಿಕೆ ಚಿತ್ರರಂಗದಲ್ಲಿದೆ. ಕ್ರೀಡಾಪಟುಗಳನ್ನು, ಉದ್ಯಮಿಗಳನ್ನು ಸಿನಿಮಾಗಳಲ್ಲಿ ತೋರಿಸುವ ಪ್ರಯತ್ನ ಆಗಾಗ್ಗೆ ನಡೆಯುತ್ತಿರುತ್ತದೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈಗಾಗಲೇ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮದೇ ಬಯೋಪಿಕ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ. ಎಸ್ ಧೋನಿ ಬೆಳ್ಳಿಪರದೆಗೆ ಬರ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈಗಾಗಲೇ ನಿರ್ಮಾಪಕರಾಗಿ ತಮಿಳು ಚಿತ್ರರಂಗದಲ್ಲಿ ಧೋನಿ ಗುರ್ತಿಸಿಕೊಂಡಿದ್ದಾರೆ. ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ 'ಲೆಟ್ಸ್ ಗೆಟ್ ಮ್ಯಾರೀಡ್'(LGM) e ಎಂಬ ಸಿನಿಮಾ ನಿರ್ಮಿಸಿದ್ದರು. ಇದೀಗ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಊಹಾಪೋಹ ಶುರುವಾಗಿದೆ. ಅದು ಕೂಡ ರಾಜ್‌ಚರಣ್ ಜೊತೆ ಎನ್ನುವ ಚರ್ಚೆ ನಡೀತಿದೆ.

'RRR' ಬಳಿಕ ರಾಮ್‌ಚರಣ್ ನಟಿಸಿದ 'ಆಚಾರ್ಯ' ಹಾಗೂ 'ಗೇಮ್ ಚೇಂಜರ್' ಚಿತ್ರಗಳು ಸೋತಿವೆ. ಸದ್ಯ ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಮೆಗಾಪವರ್ ಸ್ಟಾರ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆ ಆಗಿದ್ದಾರೆ. ಇದೇ ಚಿತ್ರದಲ್ಲಿ ಕ್ರಿಕೆಟಿಗ ಧೋನಿ ನಟಿಸುತ್ತಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕ್ರೀಡೆ ಆಧರಿತ ಸಿನಿಮಾ ಇದು ಎನ್ನಲಾಗ್ತಿದೆ. ಚಿತ್ರದಲ್ಲಿ ರಾಮ್‌ಚರಣ್ ಕ್ರಿಕೆಟಿಗನಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆತನ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಎಂ. ಎಸ್ ಧೋನಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಹಿಂದೆ ತಮಿಳು ಚಿತ್ರದಲ್ಲಿ ಧೋನಿ ಅತಿಥಿ ಪಾತ್ರದಲ್ಲಿ ನಟಿಸ್ತಾರೆ ಎಂದು ಗುಲ್ಲಾಗಿತ್ತು. ದಳಪತಿ ವಿಜಯ್ ನಟನೆಯ 'GOAT' ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಅದು ನಿಜವಾಗಿರಲಿಲ್ಲ.

'ಉಪ್ಪೆನ' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಬುಚ್ಚಿಬಾಬು ಮುಂದಿನ ಪ್ರಾಜೆಕ್ಟ್ ಮೇಲೆ ಬಹಳ ನಿರೀಕ್ಷೆಯಿದೆ. ಚಿತ್ರಕ್ಕೆ ರತ್ನವೇಲು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಟದ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗ್ತಿದೆ. ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ 'RC16' ಎಂದು ಕರೆಯಲಾಗುತ್ತಿದೆ.
ಬುಚ್ಚಿಬಾಬು ಹೇಳಿದ ಕಥೆ ಕೇಳಿ ಶಿವಣ್ಣ ಕೂಡ ಬಹಳ ಮೆಚ್ಚಿದ್ದರು. ಕೂಡಲೇ ನಟಿಸುವುದಾಗಿ ಒಪ್ಪಿದ್ದರು. ಇತ್ತೀಚೆಗೆ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಶ್ರೀಮುತ್ತು ನಿವಾಸದಲ್ಲೇ ಶಿವಣ್ಣನ ಲುಕ್ ಟೆಸ್ಟ್ ಸಹ ನಡೆದಿತ್ತು. ಶೀಘ್ರದಲ್ಲೇ ಸೆಂಚುರಿ ಸ್ಟಾರ್ 'RC16' ತಂಡ ಸೇರಿಕೊಳ್ಳಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ.
ಜಗಪತಿ ಬಾಬು, ದಿವೇಂದು ಶರ್ಮಾ ಸೇರಿ ದೊಡ್ಡ ತಾರಾಗಣ 'RC16' ಚಿತ್ರದಲ್ಲಿದೆ. ವೃದ್ದಿ ಸಿನಿಮಾಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ. 'ಪೆದ್ದಿ' ಎಂಬ ಟೈಟಲ್ ಫಿಕ್ಸ್ ಮಾಡಲು ಚಿತ್ರತಂಡ ಪರಿಶೀಲನೆ ನಡೆಸುತ್ತಿದೆ. ಇನ್ನು ಎ. ಆರ್ ರಹಮಾನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
'RC16' ಬಳಿಕ ಸುಕುಮಾರ್ ನಿರ್ದೇಶನದ ಚಿತ್ರದಲ್ಲಿ ರಾಮ್‌ಚರಣ್ ನಟಿಸೋಕೆ ಒಪ್ಪಿದ್ದಾರೆ. ಇವರಿಬ್ಬ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ರಂಗಸ್ಥಳಂ' ಸಿನಿಮಾ ಮೂಡಿ ಬಂದಿತ್ತು. ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮತ್ತೆ ಅದೇ ಮ್ಯಾಜಿಕ್ ರಿಪೀಟ್ ಮಾಡುವ ಲೆಕ್ಕಾಚಾರ ನಡೀತಿದೆ.


Click it and Unblock the Notifications











