ಕ್ರೇಜಿ ನ್ಯೂಸ್: ಧ್ರುವ ಸರ್ಜಾ ಎದುರು 2 ಚಿತ್ರಗಳಲ್ಲಿ ವಿಜಯ್ ಸೇತುಪತಿ ಆರ್ಭಟ?
ಕನ್ನಡ ಕಲಾವಿದರು ಪರಭಾಷೆಗಳಲ್ಲಿ ನಟಿಸೋದು ಪರಭಾಷಾ ಕಲಾವಿದರು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚುವುದು ಈಗ ಸರ್ವೇ ಸಾಧಾರಣ ಎನ್ನುವಂತರಾಗಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ಸ್ಟಾರ್ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲಿ ನಟಿಸೋಕೆ ಉತ್ಸುಕರಾಗಿದ್ದಾರೆ. ಇದೀಗ ತಮಿಳು ನಟ ವಿಜಯ್ ಸೇತುಪತಿ ಕನ್ನಡ ಚಿತ್ರದಲ್ಲಿ ನಟಿಸೋ ಬಗ್ಗೆ ಚರ್ಚೆ ನಡೀತಿದೆ.
ತಮ್ಮ ವಿಭಿನ್ನ ನಟನೆಯಿಂದ ವಿಜಯ್ ಸೇತುಪತಿ ತಮಿಳು ಬಿಟ್ಟು ಬೇರೆ ಭಾಷಿಕರಿಗೆ ಇಷ್ಟವಾಗಿದ್ದಾರೆ. ಈಗಾಗಲೇ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ದಶಕಗಳ ಹಿಂದೆ ಸೇತುಪತಿ ಕನ್ನಡದ 'ಅಖಾಡ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಕಾಲಿವುಡ್‌ನಲ್ಲಿ ಬ್ಯುಸಿಯಾದರು. ಡೇಟ್ಸ್ ಪ್ರಾಬ್ಲಂನಿಂದ ಬಳಿಕ ಸಿಕ್ಕ ಕನ್ನಡ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಈಗ ಧ್ರುವ ಸರ್ಜಾ ಎದುರು ವಿಜಯ್ ನಟಿಸೋ ಬಗ್ಗೆ ಗುಸುಗುಸುರ ಶುರುವಾಗಿದೆ.

ಧ್ರುವ ಸರ್ಜಾ ಸದ್ಯ 'ಮಾರ್ಟಿನ್' ಹಾಗೂ 'KD' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿವೆ. ಪ್ರೇಮ್ ನಿರ್ದೇಶನದ 'KD' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಪೀರಿಯಡ್ ಕಥೆ ಹೇಳೊಕೆ ಜೋಗಿ ಪ್ರೇಮ್ ಹೊರಟಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಮಾಡಿ ಗಮನ ಸೆಳೆಸಿದ್ದಾರೆ. ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ.
ಇದೇ ಮೊದಲ ಬಾರಿಗೆ ಪ್ರೇಮ್- ಧ್ರುವ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. 'KD' ಚಿತ್ರದಲ್ಲಿ ಧ್ರುವ ಎದುರು ವಿಜಯ್ ಸೇತುಪತಿ ಅಬ್ಬರಿಸುತ್ತಾರೆ ಎನ್ನುವ ಮಾತುಗಳು ಈಗ ಕೇಳಿಬರ್ತಿದೆ. ಈಗಾಗಲೇ ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಮೇಶ್ ಅರವಿಂದ್ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಕೂಡ ಚಿತ್ರದ ಭಾಗವಾಗಿದ್ದಾರೆ. ಈ ಲಿಸ್ಟ್‌ಗೆ ಸೇತುಪತಿ ಸೇರುತ್ತಾರೆ ಎನ್ನಲಾಗ್ತಿದೆ.
ಪ್ರೇಮ್ 'KD' ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ವಿಜಯ್ ಸೇತುಪತಿ ಎಂಟ್ರಿ ಕೊಡಲಿದ್ದು ಸೀಕ್ವೆಲ್‌ನಲ್ಲಿ ಆ ಪಾತ್ರ ದೊಡ್ಡದಾಗಿ ಮುಂದುವರೆಯುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಸೆನ್ಸೇಷನ್ ವಿಚಾರಗಳಿಗೆ ಕೇರ್ ಆಫ್ ಅಡ್ರೆಸ್ ಪ್ರೇಮ್. ಇತ್ತೀಚೆಗೆ ತೆಲುಗು ನಟ ಚಿರಂಜೀವಿ ಅವರನ್ನು ಪ್ರೇಮ್ ಮತ್ತೆ ಕನ್ನಡಕ್ಕೆ ಕರೆದುಕೊಂಡು ಬರುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ದರ್ಶನ್ ನಟನೆಯ ಮುಂದಿನ ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ. ಇದೇ ಚಿತ್ರದಲ್ಲಿ ದರ್ಶನ್ ಜೊತೆ ಚಿರು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಇದೀಗ ವಿಜಯ್ ಸೇತುಪತಿ 'KD' ಚಿತ್ರದಲ್ಲಿ ನಟಿಸುವ ಬಗ್ಗೆ ಊಹಾಪೋಹ ಶುರುವಾಗಿದೆ. ಇದು ಎಷ್ಟು ನಿಜ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 'KD' ಚಿತ್ರವನ್ನು ನಿರ್ಮಾಣ ಮಾಡಲಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಸಂಜಯ್ ದತ್ ಮಡದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಜಿಸ್ಸು ಸೆಂಗುಪ್ತಾ ಸಹ ತಾರಾಗಣದಲ್ಲಿದ್ದಾರೆ.
ಅರ್ಜುನ್ ಜನ್ಯಾ 'KD' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಇತ್ತೀಚೆಗೆ ಪ್ರೇಮ್ ಕ್ರೇಜ್ ಕಮ್ಮಿ ಆಯಿತು ಎನ್ನುವ ಚರ್ಚೆ ಶುರುವಾಗಿದೆ. 'KD' ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಲು ನಿರ್ದೇಶಕರು ಪ್ರಯತ್ನ ನಡೆಸಿದ್ದಾರೆ.


Click it and Unblock the Notifications











