Salaar Re-Shoot: ಪ್ರಶಾಂತ್ ನೀಲ್ 'ಸಲಾರ್' ರಿಲೀಸ್ ಮುಂದೂಡಿದ್ದೇಕೆ? ಎಡಿಟಿಂಗ್ ವೇಳೆ ಅಂತಹದ್ದೇನಾಯ್ತು?
'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ 'ಸಲಾರ್'. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳಿರೋ ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಇದೇ ತಿಂಗಳ ಕೊನೆಯಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೀಗ ಸಿನಿಮಾ ಬಿಡುಗಡೆ ದಿನವನ್ನು ಮುಂದೂಡಲಾಗಿದೆ.
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನ ಮೊದಲ ಸಿನಿಮಾವಿದು. ಜೊತೆ 'ಕೆಜಿಎಫ್ 2' ಅಂತಹ ಮೆಗಾ ಹಿಟ್ ಕೊಟ್ಟ ನಿರ್ದೇಶಕನ ಸಿನಿಮಾ. ಹೀಗಾಗಿ 'ಸಲಾರ್' ರಿಲೀಸ್‌ಗಾಗಿ ಇಡೀ ವಿಶ್ವವೇ ಕಾದು ಕೂತಿದೆ. ಇನ್ನೇ ಸಿನಿಮಾ ರಿಲೀಸ್ ಆಗೇ ಬಿಡುತ್ತೆ ಅನ್ನುವಾಗಲೇ ದಿಢೀರನೇ ಪೋಸ್ಟ್ ಪೋನ್ ಆಗಿದೆ.

ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್ ಆಗಬೇಕಿತ್ತು. ಆದ್ರೀಗ ಡಿಸೆಂಬರ್‌ಗೆ ರಿಲೀಸ್ ಮಾಡಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಪ್ರಶಾಂತ್ ನೀಲ್ ಸಿನಿಮಾ ಮುಂದಕ್ಕೆ ಹೋಗಿದ್ದೇಕೆ? ಚಿತ್ರರಂಗದಲ್ಲಿ ಹರಿದಾಡುತ್ತಿರೋ ಸುದ್ದಿಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಸಲಾರ್' ಸಿನಿಮಾ ಪೋಸ್ಟ್‌ಪೋನ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ 'ಸಲಾರ್' ಇದೇ ಸೆಪ್ಟೆಂಬರ್ 28ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತೆ ಎಂದು ಕಾದಿದ್ದಷ್ಟೇ ಬಂತು. ಆದ್ರೀಗ ಸೆಪ್ಟೆಂಬರ್ ಕೊನೆವಾರದಲ್ಲಿ ಈ ಸಿನಿಮಾ ರಿಲೀಸ್ ಆಗೋದಿಲ್ಲ ಅನ್ನೋದು ಗೊತ್ತಾಗಿದೆ. ಈ ಮಧ್ಯೆ 'ಸಲಾರ್' ಯಾಕೆ ಪೋಸ್ಟ್‌ಪೋನ್ ಆಯ್ತು? ಯಾವಾಗ ರಿಲೀಸ್ ಆಗುತ್ತೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ ಅನ್ನೋ ಕಾರಣ ಕೊಡಲಾಗುತ್ತಿದೆ. ಅಸಲಿಗೆ ಮ್ಯಾಟರ್ ಬೇರೆನೇ ಇದೆ ಎನ್ನಲಾಗುತ್ತಿದೆ.

ರೀ-ಶೂಟ್ ಆಗ್ತಿದೆಯಾ ಸಲಾರ್?
'ಸಲಾರ್' ಸಿನಿಮಾ ಶೂಟಿಂಗ್ ಬಹಳ ಹಿಂದೆನೇ ಮುಗಿದಿತ್ತು. ಆ ಬಳಿಕ ಪ್ರಶಾಂತ್ ನೀಲ್ ಪೋಸ್ಟ್‌ಪ್ರೊಡಕ್ಷನ್ ಕಡೆ ಗಮನ ಹರಿಸಿದ್ದರು. ಹೀಗಾಗಿ ಮೊದಲೇ ನಿಗಧಿ ಪಡಿಸಿದ ದಿನದಂದೇ ರಿಲೀಸ್ ಆಗುತ್ತೆ ಅನ್ನೋ ಬಲವಾದ ನಂಬಿಕೆಯಲ್ಲಿ ಪ್ರಭಾಸ್ ಫ್ಯಾನ್ಸ್ ಇದ್ದರು. ಆದ್ರೀಗ ಸಿನಿಮಾ ಕೆಲವು ಭಾಗವನ್ನು ಪ್ರಶಾಂತ್ ನೀಲ್ ಮತ್ತೆ ರೀ ಶೂಟ್ ಮಾಡುತ್ತಿದ್ದಾರೆ ಅನ್ನೋ ಮಾತು ಸಿನಿಮಾ ಮಂದಿ ಸರ್ಕಲ್‌ನಲ್ಲಿ ಕೇಳಿ ಬರುತ್ತಿದೆ.
ಮತ್ತೆ ಒಟ್ಟಿಗೆ ಸೇರಿದ 'ಸಲಾರ್' ಟೀಂ
'ಸಲಾರ್' ಸಿನಿಮಾ ಬಳಿಕ ಚಿತ್ರತಂಡ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿತ್ತು. ಆದ್ರೀಗ ಪ್ರಶಾಂತ್ ನೀಲ್ ಅವರೆಲ್ಲರನ್ನೂ ಮತ್ತೆ ಇದೇ ಸಿನಿಮಾಗಾಗಿ ಕರೆದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಸಲಾರ್ ಎಡಿಟಿಂಗ್ ಮಾಡುವಾಗ ಪ್ರಶಾಂತ್ ನೀಲ್‌ಗೆ ಕೆಲವು ದೃಶ್ಯಗಳು ಇಷ್ಟ ಆಗಿಲ್ಲ. ಹೀಗಾಗಿ ಸಿನಿಮಾದ ಕೆಲವು ದೃಶ್ಯಗಳನ್ನು ಮತ್ತೆ ಶೂಟ್ ಮಾಡುತ್ತಿದ್ದಾರೆ ಅಂತ ಸಿನಿಮಾ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಗ್ಗೆ ಸಲಾರ್ ಸಿನಿಮಾತಂಡ ಅಧಿಕೃತ ಮಾಹಿತಿ ನೀಡಿಲ್ಲ.
ಈ ವರ್ಷದ ಕೊನೆ ಸಿನಿಮಾ
'ಸಾಹೋ','ರಾಧೆ ಶ್ಯಾಮ್', 'ಆದಿಪುರುಷ್' ಸಿನಿಮಾದಂತಹ ಮೆಗಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಹೀಗಾಗಿ ಸತತ ಸೋಲುಗಳನ್ನು ಕಾಣುತ್ತಿರುವ ಪ್ರಭಾಸ್ ವೃತ್ತಿ ಬದುಕಿಗೆ 'ಸಲಾರ್' ರಿಲೀಫ್ ಕೊಡಬಹುದು ಅನ್ನೋ ನಿರೀಕ್ಷೆ ಇದೆ. ಒಂದ್ವೇಳೆ ಪ್ರಶಾಂತ್ ನೀಲ್ ಸಿನಿಮಾವನ್ನು ರೀ ಶೂಟ್ ಮಾಡುತ್ತಿರುವುದು ನಿಜವೇ ಆಗಿದ್ದರೆ, ಈ ವರ್ಷವೇ ಸಿನಿಮಾ ಬಿಡುಗಡೆಯಾಗುತ್ತಾ? ಅನ್ನೋ ಅನುಮಾನವಿದೆ. ಒಂದ್ವೇಳೆ 'ಸಲಾರ್' ಇದೇ ವರ್ಷ ರಿಲೀಸ್ ಆದರೆ, ಈ ವರ್ಷ ತೆರೆಕಾಣುವ ಕೊನೆಯ ಸಿನಿಮಾ ಆಗಲಿದೆ.


Click it and Unblock the Notifications











