ಇಬ್ಬರು ನಿರ್ಮಾಪಕರಿಗೆ ಅಡ್ವಾನ್ಸ್ ಹಿಂತಿರುಗಿಸಿದರೇ ದರ್ಶನ್? ದಾಸನ ಈ ನಿರ್ಧಾರಕ್ಕೆ ಏನು ಕಾರಣ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಗ್ಯೂಲರ್ ಜಾಮೀನು ಪಡೆದು ಹೊರ ಬಂದ್ಮೇಲೆ ಸಿನಿಮಾಗಳು ವೇಗವಾಗಿ ಆರಂಭ ಆಗುಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅಂದುಕೊಂಡಿದ್ದೇ ಒಂದು, ಆಗ್ತಿರೋದೇ ಇನ್ನೊಂದು. ಜೈಲಿನಿಂದ ಹೊರಬಂದ್ಮೇಲೂ ಇನ್ನೂ 'ಡೆವಿಲ್' ಶೂಟಿಂಗ್ ಶುರುವಾಗಿಲ್ಲ. ಈ ಕಾರಣಕ್ಕೆ ಅಭಿಮಾನಿಗಳು ಬೇಸರದಲ್ಲಿ ಇದ್ದಾರೆ.
ಇನ್ನು ದರ್ಶನ್ 'ಡೆವಿಲ್' ಸಿನಿಮಾದ ಶೂಟಿಂಗ್ ಆರಂಭ ಮಾಡದೇ ಇರುವುದಕ್ಕೆ ಕಾರಣ ಆರೋಗ್ಯ ಸಮಸ್ಯೆ ಎನ್ನಲಾಗಿದೆ. ಹಾಗೇ ಕಾನೂನು ಸಮಸ್ಯೆಗಳು ಇನ್ನೂ ಸರಿ ಹೋಗಿಲ್ಲ. ಈ ಕಾರಣಕ್ಕೆ ದರ್ಶನ್ ಶೂಟಿಂಗ್ ತಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಮೊದಲೇ ಒಪ್ಪಿಕೊಂಡಿದ್ದ ಎರಡು ಸಿನಿಮಾಗಳಿಂದ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ರೆಗ್ಯೂಲರ್ ಜಾಮೀನು ಪಡೆದು ಹೊರ ಬಂದ ಮೇಲೆ ದರ್ಶನ್ ಎಂದಿನಂತೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಾರೆ. ಆದಷ್ಟು ಬೇಗೆ ರಿಲೀಸ್ ಆಗುತ್ತೆ ಎನ್ನಲಾಗಿತ್ತು. 'ಡೆವಿಲ್' ಶುರುವಾಗುವುದಿರಲಿ, ದರ್ಶನ್ ಇಬ್ಬರು ನಿರ್ಮಾಪಕರಿಗೆ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟಿದ್ದಾರಂತೆ. ಹಾಗಿದ್ದರೆ, ಅಡ್ವಾನ್ಸ್ ಅಮೌಂಟ್ ಅನ್ನು ವಾಪಸ್ ಮಾಡಿದ್ದು ನಿಜವೇ? ಹಣ ಹಿಂತಿರುಗಿಸಿದ ಆ ಇಬ್ಬರು ನಿರ್ಮಾಪಕರು ಯಾರು? ಯಾಕೀ ನಿರ್ಧಾರ? ಈ ಬಗ್ಗೆ ಏನಂತಿದೆ ಗಾಂಧಿನಗರ? ಅಂತ ನೋಡುವುದಾದರೇ..
ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದರು. ಅವರಲ್ಲಿ ಕೆಲವರಿಗೆ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದರು. ಅವರಲ್ಲಿ 'ಕೋಟಿಗೊಬ್ಬ- 3' ನಿರ್ಮಾಪಕ ಸೂರಪ್ಪ ಬಾಬು ಹಾಗೂ 'ಟಾಕ್ಸಿಕ್' ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕೂಡ ಇದ್ದರು. ಇವರಿಬ್ಬರೂ ದರ್ಶನ್ ಜೊತೆ ಸಿನಿಮಾ ಮಾಡುವುದು ಅಂತಾಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಪ್ರೇಮ್ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿತ್ತು. ಆದರೆ, ಸೂರಪ್ಪ ಬಾಬು ನಿರ್ಮಾಣದ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈಗ ದರ್ಶನ್ ಇವರಿಬ್ಬರಿಗೆ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿದ್ದಾರೆ ಅನ್ನುವ ಸುದ್ದಿ ಓಡಾಡುತ್ತಿದೆ.
ಸೂರಪ್ಪ ಬಾಬು ಹಾಗೂ ಕೆವಿಎನ್‌ಗೆ ಅಡ್ವಾನ್ಸ್ ಹಣ ಹಿಂತಿರುಗಿಸಿರುವ ಸುದ್ದಿ ಇಷ್ಟೊಂದು ವೈರಲ್ ಆಗುವುದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್. ದರ್ಶನ್ ಅಭಿಮಾನಿ ವಿಜಯ್ ತೂಗುದೀಪ್ ಎಂಬುವವರ ಖಾತೆಯಲ್ಲಿ ಇಂತಹದ್ದೊಂದು ಸುದ್ದಿ ಪೋಸ್ಟ್ ಆಗಿತ್ತು. ಹೀಗಾಗಿ ದರ್ಶನ್ ಇವರಿಬ್ಬರಿಗೂ ಅಡ್ವಾನ್ಸ್ ವಾಸ್ ಕೊಟ್ಟಿದ್ದು ನಿಜವಿರಬಹುದೇನೋ ಅನ್ನೋ ಅನುಮಾನ ಶುರುವಾಗಿದೆ. ಆದರೆ, ಈ ಬಗ್ಗೆ ಇಬ್ಬರೂ ನಿರ್ಮಾಪಕರು ಎಲ್ಲೂ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಗಾಂಧಿನಗರದ ಮಂದಿಯ ಬಾಯಲ್ಲಿ ಇನ್ನೊಂದು ಹೆಸರು ಓಡಾಡುತ್ತಿದೆ. ಜಗ್ಗುದಾದ ನಿರ್ಮಾಪಕ ಕಮ್ ನಿರ್ದೇಶಕ ರಾಘವೇಂದ್ರ ಹೆಗ್ಡೆಗೂ ಅಡ್ವಾನ್ಸ್ ವಾಪಸ್ ಮಾಡಿದ್ದರಂತೆ ಅಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಸುದ್ದಿಗಳಲ್ಲಿ ಎಷ್ಟು ಸತ್ಯವಿದೆಯೋ ಅವರೇ ಹೇಳಬೇಕು. ಇದರ ಜೊತೆ ಇದೇ ಫೆಬ್ರವರಿ 20ರ ನಂತರ 'ಡೆವಿಲ್' ಶೂಟಿಂಗ್ ಶುರು ಮಾಡುತ್ತಾರೆ ಅಂತ ಇದೇ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಒಂದು ವೇಳೆ ಮೂರು ಸಿನಿಮಾಗಳನ್ನು ಕೈ ಬಿಟ್ಟಿದ್ದೇ ಆದರೆ, ಮುಂದೇನು? ಅನ್ನೋ ಪ್ರಶ್ನೆಗೂ ಇವರಿಗೆ ಉತ್ತರ ಸಿಕ್ಕಿದೆ. ದರ್ಶನ್ 'ಡೆವಿಲ್' ಬಳಿಕ ಎರಡು ಸಿನಿಮಾಗಳ ಕಡೆಗೆ ಗಮನ ಹರಿಸಲಿದ್ದಾರೆ. ಅದರಲ್ಲಿ ಮೊದಲಿಗೆ ತರುಣ್ ಸುಧೀರ್ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ. ಆ ಬಳಿಕ ವಿ. ಹರಿಕೃಷ್ಣ ಇನ್ನೊಂದು ಸಿನಿಮಾವನ್ನು ದರ್ಶನ್‌ಗಾಗಿಯೇ ನಿರ್ದೇಶನ ಮಾಡುತ್ತಾರೆ ಎನ್ನಲಾಗಿದೆ. ಈ ಎರಡು ಸಿನಿಮಾ ಬಳಿಕ ಹೊಸ ಸಿನಿಮಾಗಳನ್ನು ಕಡೆಗೆ ಗಮನ ಹರಿಸುತ್ತಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ. ಅಸಲಿಗೆ ಇದು ಒಂದು ಪೋಸ್ಟ್ ವೈರಲ್ ಆದ ಬಳಿಕ ಹರಿದಾಡುತ್ತಿರುವ ಸುದ್ದಿ. ಅಸಲಿ ಸತ್ಯ ಇನ್ನೂ ಹೊರ ಬೀಳಬೇಕಿದೆ.


Click it and Unblock the Notifications











