ಟಿ ಆರ್ ಪಿ ಕಳ್ಳಾಟ.. ಹೊಸ ವಾಹಿನಿ.. ಯಾವುದು ಸತ್ಯ ? ಯಾವುದು ಸುಳ್ಳು ?
ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಬಿಸಿ ಬಿಸಿ ಸುದ್ದಿಗಳು ಹದಿನೈದು ದಿನದಿಂದ ಸದ್ದು ಮಾಡುತ್ತಿದೆ. ಅದರಲ್ಲಿ ಸತ್ಯವೆಷ್ಟು-ಸುಳ್ಳೆಷ್ಟು ಎಂದು ವಿಚಾರಿಸುತ್ತಾ ಸಾಗಿದಾಗ ನಮಗೆ ಸಿಕ್ಕ ಒಂದಷ್ಟು ವಿವರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅದರಲ್ಲಿ ಮೊದಲನೆಯ ಸುದ್ದಿ- ಟಿ ಆರ್ ಪಿ ಕಳ್ಳಾಟದ ವಿರುದ್ಧ ನಿರ್ಮಾಪಕರೆಲ್ಲ ಒಂದಾಗಿದ್ದಾರಂತೆ ಎಂಬುದು.
ಹೌದು, ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ಕಳ್ಳರ ವಿರುದ್ದ ನಿರ್ಮಾಪಕರುಗಳೆಲ್ಲ ಒಂದಾಗಿ ಹೋರಾಟ ಮಾಡುತ್ತಾರಂತೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಹೀಗೆ ಒಗ್ಗಟ್ಟಾಗಿರುವ ನಿರ್ಮಾಪಕರುಗಳು ಯಾರು ? ಇವರೆಲ್ಲ ಒಂದಾಗಿ ಯಾವ ರೀತಿಯ ಹೋರಾಟ ಮಾಡುತ್ತಾರೆ ? ಇದಕ್ಕಿದ್ದಂತೆ ಇವರೆಲ್ಲ ಸೇರಿ - ಟಿ ಆರ್ ಪಿ ಕಳ್ಳರ ಬಣ್ಣ ಬಯಲು ಮಾಡುತ್ತೇವೆ ಎಂದು ಹೊರಡಲು ಕಾರಣವಾದ ಅಂಶವಾದರೂ ಯಾವುದು? ಈ ಪ್ರಶ್ನೆಗಳೊಂದಿಗೆ ಕಿರುತೆರೆಯ ಒಂದಷ್ಟು ಪ್ರಭಾವಿಗಳನ್ನು ಮಾತನಾಡಿಸಿದಾಗ ಅವರು ಕೆಲವು ಆಸಕ್ತಿಕರ ವಿಚಾರಗಳನ್ನು ತಿಳಿಸಿದ್ದಾರೆ.

ವಾಹಿನಿಯವರೆಲ್ಲ ಮಂತ್ರಾಲಯಕ್ಕೆ ಹರಕೆ ಕಟ್ಟಿಕೊಂಡರಂತೆ
ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ಕಳ್ಳಾಟ ಎಂಬುದು ಹೊಸದೇನಲ್ಲ. ಈ ಕಳ್ಳಾಟ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಆ ಹಳೆಯ ವಾಹಿನಿಗೆ ಇತ್ತೀಚೆಗೆಷ್ಟೆ ಪ್ರಾಮಾಣಿಕರೊಬ್ಬರು ತಮ್ಮದೊಂದು ಅತ್ಯುತ್ತಮ ಬರಹಗಾರರ ತಂಡದೊಂದಿಗೆ, ಮುಖ್ಯಸ್ಥರಾಗಿ ಹೋಗಿದ್ದು, ಇವರು ಅಲ್ಲಿನ ವಾತಾವರಣ ಬದಲಾಯಿಸುತ್ತಾರೆ ಮತ್ತು ಟಿ ಆರ್ ಪಿ ರಾಜರುಗಳನ್ನು ಖಂಡಿತಾ ದೂರವಿಡುತ್ತಾರೆ ಎಂಬ ನಿರೀಕ್ಷೆ ಕನ್ನಡ ಕಿರುತೆರೆಯಲ್ಲಿದೆ.
ಭಕ್ತಿ ಪ್ರಧಾನ ಧಾರಾವಾಹಿಗೆ ಏನಾಯ್ತು ?
ಇದೆಲ್ಲದರ ನಡುವೆ ಕನ್ನಡದ ನಂಬರ್ ಒನ್ ವಾಹಿನಿಯಲ್ಲಿ ಭಕ್ತಿ ಪ್ರಧಾನ ಧಾರಾವಾಹಿಯೊಂದು ಇತ್ತೀಚೆಗೆ ಪ್ರಸಾರ ಆರಂಭಿಸಿದ್ದು ಅದರ ಟಿ ಆರ್ ಪಿ ದೊಡ್ಡ ಮಟ್ಟದಲ್ಲಿ ಇರುತ್ತದೆ ಎಂದು ವಾಹಿನಿ ನಿರೀಕ್ಷೆ ಇಟ್ಟುಕೊಂಡಿತ್ತು. ಆಳವಾಗಿ ರಿಸರ್ಚ್ ಮಾಡಿ, ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಟ್ಟು, ಉತ್ತಮ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡು, ಈ ಭಕ್ತಿ ಪ್ರಧಾನ ಧಾರಾವಾಹಿಯನ್ನು ಕನ್ನಡಿಗರ ಮನೆಗಳಿಗೆ ಒಪ್ಪಿಸಿತ್ತು ವಾಹಿನಿಯ ತಂಡ. ಆದರೆ ಈ ಧಾರಾವಾಹಿಯ ಟಿ ಆರ್ ಪಿ ಎಷ್ಟು ಕಡಿಮೆ ಬಂದಿತ್ತು ಎಂದರೆ ವಾಹಿನಿಯ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದವರೆಲ್ಲ ಮಂತ್ರಾಲಯಕ್ಕೆ ಹರಕೆ ಕಟ್ಟಿಕೊಂಡು, ಈ ವಾರವಾದರೂ ಒಳ್ಳೆಯ ಟಿ ಆರ್ ಪಿ ಬರಲಿ ರಾಯರೇ ಎಂದು ಕಾಯುವ ಪರಿಸ್ಥಿತಿ ಎದುರಾಗಿದೆ.
ಟ್ಯಾಂಪರಿಂಗ್ ನಿಂದ ರೇಟಿಂಗ್ ಬರುತ್ತಿಲ್ಲ!
ಯಾವಾಗ ನಂಬರ್ ಒನ್ ವಾಹಿನಿಯ ಬಹು ನಿರೀಕ್ಷೆಯ ಧಾರಾವಾಹಿ ರೇಟಿಂಗ್ ಓಟದಲ್ಲಿ ನಿಲ್ಲದಾಯಿತೋ ವಾಹಿನಿಯವರು ಈ ಧಾರಾವಾಹಿಯನ್ನು ವಾರಾಂತ್ಯಕ್ಕೆ ಶಿಫ್ಟ್ ಮಾಡುವುದಾಗಿ ಚರ್ಚೆ ಮಾಡಿದ್ದಾರೆ. ಈ ಸುದ್ದಿ ಧಾರಾವಾಹಿಯ ನಿರ್ಮಾಪಕರ ಸುಖ ಕಸಿದುಕೊಂಡು ಬಿಪಿ ಜಾಸ್ತಿ ಮಾಡಿದೆ. ಜನರು ತಮ್ಮ ಧಾರಾವಾಹಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾತನಾಡುತ್ತಾರೆ. ಡಿಜಿಟಲ್ (OTT)ನಲ್ಲೂ ಧಾರಾವಾಹಿಗೆ ಹೆಚ್ಚು ನೋಡುಗರಿದ್ದಾರೆ. ಆದರೆ ಟಿ.ವಿಯಲ್ಲಿ ಮಾತ್ರ ಯಾಕೆ ಧಾರಾವಾಹಿಗೆ ರೇಟಿಂಗ್ ಬರುತ್ತಿಲ್ಲ ಎಂಬ ಪ್ರಶ್ನೆ ನಿರ್ಮಾಪಕರನ್ನು ಕಾಡಿದೆ. ಅವರು ವಾಹಿನಿಯವರ ಬಳಿ ಇದೇ ಪ್ರಶ್ನೆ ಕೇಳಿದ್ದಾರೆ. ಆಗ ಅವರಿಗೆ ಸಿಕ್ಕ ಉತ್ತರ - ಈ ಧಾರಾವಾಹಿಯ ಅಪೋಸಿಟ್ ಪ್ರಸಾರವಾಗುವ ಧಾರಾವಾಹಿಯವರು ಕಳ್ಳಾಟ ಮಾಡಿ ರೇಟಿಂಗ್ ತರುತ್ತಿದ್ದಾರೆ. ಅವರು ಹಾಗೇ ಮಾಡುತ್ತಿರುವುದರಿಂದಲೇ ತಮ್ಮ ನಿರ್ಮಾಣದ ಭಕ್ತಿ ಪ್ರಧಾನ ಧಾರಾವಾಹಿಗೆ ನೀರಿಕ್ಷೆಯ ಟಿ ಅರ್ ಪಿ ಬರುತ್ತಿಲ್ಲ ಎಂಬುದು.
ಮೊದಲು ಎಲ್ಲರೂ ಸೇರಿ ಪ್ರೆಸ್ ಮೀಟ್ ಮಾಡೋಣ!
ಟಿ ಆರ್ ಪಿ ಕಳ್ಳಾಟದಿಂದಾಗಿಯೇ ತಮ್ಮ ಧಾರಾವಾಹಿಗೆ ರೇಟಿಂಗ್ ಬರುತ್ತಿಲ್ಲ ಎಂಬ ವಿಚಾರ ಯಾವಾಗ ಮನದಟ್ಟಾಯಿತೋ ಆಗ ನಿರ್ಮಾಪಕರು ತಮ್ಮ ವಲಯದಲ್ಲಿರುವ ಇನ್ನೊಂದಿಷ್ಟು ನಿರ್ಮಾಪಕರನ್ನೆಲ್ಲ ಕರೆದು ಮಾತನಾಡಿದ್ದಾರೆ. ಹಾಗೇ ಸೇರಿರುವ ನಿರ್ಮಾಪಕರುಗಳು ಕೂಡಾ ಒಂದಲ್ಲಾ ಒಂದು ಹಂತದಲ್ಲಿ ಟಿ ಆರ್ ಪಿ ಕಳ್ಳಾಟದಿಂದ ನೊಂದವರೇ. ಅಂತಿಮವಾಗಿ ಅವರೆಲ್ಲ ಸೇರಿ ಒಂದು ಪ್ರೆಸ್ ಮೀಟ್ ಮಾಡಿ ಇದರ ಬಗ್ಗೆ ಮೊದಲು ಮಾತನಾಡೋಣ ಅದರ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸೋಣ. ಈ ಸಲ ಏನೇ ಆದರೂ ಕಳ್ಳರ ಚಳಿ ಬಿಡಿಸುವ ತನಕ ಸುಮ್ಮನಿರುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.
ಬಾರ್ಕ್ ಗೆ ಬಿಸಿ ಮುಟ್ಟಲಿ!
ಸಧ್ಯಕ್ಕೆ ನಿರ್ಮಾಪಕರೆಲ್ಲ ಸೇರಿ ಪ್ರೆಸ್ ಮೀಟ್ ಮಾಡಿ - ಹೀಗೆ ಕನ್ನಡದಲ್ಲಿ ಟಿ ಆರ್ ಪಿ ಕಳ್ಳಾಟ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಸಿದರೆ ಏನಾಗಬಹುದು ? ಈ ವಿಚಾರ ನ್ಯಾಶನಲ್ ಲೆವೆಲ್‌ನಲ್ಲಿ ಸದ್ದು ಮಾಡಬಹುದು. ಇದರಿಂದ ರೇಟಿಂಗ್ ಕೊಡುವ ಬಾರ್ಕ್ ಸಂಸ್ಥೆ ತನ್ನ ಇಮೇಜ್ ಕಾಪಾಡಿಕೊಳ್ಳಲು ಹೆಣಗಬೇಕಾಗುತ್ತದೆ.ನಂತರ ಅದು ತನಗೆ ಗೊತ್ತಿರುವ ಕಳ್ಳ ನಿರ್ಮಾಪಕರನ್ನು ತಕ್ಕ ಮಟ್ಟಿಗೆ ಬಡಿಯಬಹುದು. ಚಾನಲ್‌ಗಳಿಗೂ ಒಂದು ಮೇಯ್ಲ್ ಕಳಿಸಿ ನಾವು ಹೇಳುವ ಕಳ್ಳ ನಿರ್ಮಾಪಕರಿಗೆ ಧಾರಾವಾಹಿ ನಿರ್ಮಾಣದ ಅವಕಾಶ ನೀಡಬೇಡಿ ಎನ್ನಬಹುದು. ಒಟ್ಟಾರೆ ಕಳ್ಳ ದಾರಿಯಲ್ಲಿ ಒಂದಷ್ಟು ಗೊಂದಲಗಳು ಶುರುವಾಗಬಹುದು.
ಪ್ರಾಮಾಣಿಕರು ಯಾರು ?
ಇದೆಲ್ಲ ಸರಿ, ಈಗ ಪ್ರೆಸ್ ಮೀಟ್ ಮಾಡಲು ಬರುವ ಪ್ರಾಮಾಣಿಕ ನಿರ್ಮಾಪಕರುಗಳು ಯಾರು? ಅದರ ಬಗ್ಗೆ ಅಷ್ಟು ಮಾಹಿತಿ ಸಿಗುತ್ತಿಲ್ಲವಾದರೂ, ಕನ್ನಡ ಕಿರುತೆರೆಯ ಪ್ರಾಮಾಣಿಕ ನಿರ್ಮಾಪಕರುಗಳು ಯಾರು ಎಂದು ಪಟ್ಟಿ ಮಾಡಿದರೆ ಅದರಲ್ಲಿ - ರಾಮ್ ಜೀ , ಆರೂರು ಜಗದೀಶ್, ಸುಬ್ರಮಣ್ಯ (ಸುಬ್ಬು), ಶ್ರವಂತ್, ರವೀನ್, ಸ್ವಪ್ನ ಕೃಷ್ಣ, ದಿಲೀಪ್ ರಾಜ್, ಮಹೇಶ್ ರಾವ್, ಮಿಲನ ಪ್ರಕಾಶ್, ಕಾರ್ತಿಕ್ ಪರಾಡ್ಕರ್, ಭಾಸ್ಕರ್ ಮಂಗಾಡಹಳ್ಳಿ ಮತ್ತು ಮಹೇಶ್ ಸುಖಧರೆ ಹೆಸರುಗಳು ಮಾತ್ರ ಜೋರಾಗಿ ಕೇಳಿಬರುತ್ತದೆ. ಇವರಲ್ಲಿ ಕೆಲವರು ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ಎಲ್ಲೂ ಕೂಡಾ ಟಿ ಆರ್ ಪಿ ಕಳ್ಳಾಟದ ರಾಡಾರ್‌ನಲ್ಲಿ ಕಾಣಿಸಿಕೊಂಡಿಲ್ಲ ಮತ್ತು ತಾವಾಯಿತು ತಮ್ಮ ಕೆಲಸವಾಯಿತು ಅಂದುಕೊಂಡು ಹೋಗುತ್ತಿದ್ದಾರೆ. ಹಗಲೂ ರಾತ್ರಿ ಕಷ್ಟ ಪಟ್ಟು, ಕಥೆ ಮಾಡಿ, ಹಣ ಹಾಕಿ ಕನ್ನಡಿಗರಿಗೆ ಒಳ್ಳೆಯ ಧಾರಾವಾಹಿಗಳನ್ನು ನೀಡಿದವರು ಇವರುಗಳು. ಹಾಗಾದರೆ ಇವರುಗಳೇ ಸೇರಿಕೊಂಡು ಪ್ರೆಸ್ ಮೀಟ್ ಮಾಡುತ್ತಾರಾ? ಆಗ ಕೆಲವು ಕಳ್ಳ ನಿರ್ಮಾಪಕರುಗಳೂ ತಾವು ಕೂಡಾ ಪ್ರಾಮಾಣಿಕರು ಎಂದು ತೋರಿಸಿಕೊಳ್ಳುವುದಕ್ಕಾಗಿ ಇವರ ಪಕ್ಕ ಬಂದು ಪ್ರೆಸ್ ಮೀಟ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ? ಎಂಬುದು ಸಧ್ಯಕ್ಕೆ ದೊಡ್ಡ ಕುತೂಹಲದ ಪ್ರಶ್ನೆಯಾಗಿದೆ.
ಶ್ರದ್ಧೆಯಿಂದ ಕೆಲಸ ಮಾಡುವ ಟೀಮ್!
ಹಾಗೇ ನೋಡಿದರೆ ಈ ನಂಬರ್ ಒನ್ ವಾಹಿನಿಯಲ್ಲಿ ತುಂಬ ಶ್ರದ್ಧೆಯಿಂದ ಕೆಲಸ ಮಾಡುವ ಉತ್ತಮ ತಂಡವಿದೆ. ಇದೇ ವಾಹಿನಿಯಲ್ಲಿ ಹೆಡ್ ಆಗಿ ಕೆಲಸ ಮಾಡಿದವರೊಬ್ಬರು ಈಗ ಇಂಡಿಯಾ ಹೆಡ್ ಆಗಿ ಕೂಡಾ ಹೆಸರು ಮಾಡುತ್ತಿದ್ದಾರೆ. ಈ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥೆಗೆ ಕೂಡಾ ತುಂಬ ಒಳ್ಳೆಯ ಹೆಸರಿದೆ ಇದುವರೆಗೆ ಆಕೆ ಎಲ್ಲೂ ಕೂಡಾ ಕೈ ಬಾಯಿ ಕೆಡಿಸಿಕೊಂಡಿಲ್ಲ. ಅದರಲ್ಲೂ ಈಗ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿಗಾಗಿ ಇಡೀ ತಂಡ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು. ಇಂತಹ ಶ್ರದ್ಧೆಯಿರುವ ತಂಡಕ್ಕೆ ಟಿ ಅರ್ ಪಿ ಕಳ್ಳರ ಕಾಟ ಎಷ್ಟರ ಮಟ್ಟಿಗೆ ಹಿಂಸೆ ಕೊಟ್ಟಿದೆ ಅಂದರೆ, ಈಗ ವಾಹಿನಿಯವರೇ ನಿರ್ಮಾಪಕರ ಬೆನ್ನಿಗೆ ನಿಂತು - ಪ್ರೆಸ್ ಮೀಟ್ ಮಾಡಿ ಬಿಡಿ ಆಗಿದ್ದು ಆಗಲಿ ಎನ್ನುತ್ತಿದ್ದಾರಂತೆ. ಯಾವಾಗ ವಾಹಿನಿಯ ಬೆಂಬಲ ಇದೆ ಎಂದು ಮನವರಿಕೆ ಆಯ್ತೋ ನಿರ್ಮಾಪಕರುಗಳು ಒಗ್ಗಟ್ಟಾಗಿದ್ದಾರಂತೆ. ವಿಶೇಷ ಅಂದರೆ ಈ ಮಾತುಕತೆಯಲ್ಲಿ ಕೆಲ ಕಳ್ಳರನ್ನು ದೂರವಿಟ್ಟು ಚರ್ಚೆ ಮಾಡುತ್ತಿದ್ದಾರಂತೆ ನಿರ್ಮಾಪಕರುಗಳು. ಒಟ್ಟಾರೆ ಕಳ್ಳರಿಗೆ ಮುಂದೆ ಮಾರಿಹಬ್ಬ ಇದೆ ಎಂಬುದಂತೂ ಸತ್ಯ.
ಸೋನಿ ಕನ್ನಡ ವಾಹಿನಿ ಬರುವುದು ನಿಜವಾ ?
ಇದೆಲ್ಲದರ ನಡುವೆ ಕಳೆದ ಒಂದು ವಾರದಿಂದ ಜೋರಾಗಿ ಕೇಳಿಬರುತ್ತಿರುವ ಮತ್ತೊಂದು ಸುದ್ದಿ ಅಂದರೆ ಅದು ಸೋನಿ ನೆಟ್ ವರ್ಕ್ ನವರು ಕನ್ನಡದಲ್ಲಿ ಮನರಂಜನಾ ವಾಹಿನಿ ಮಾಡುತ್ತಾರಂತೆ ಮತ್ತು ಅದಕ್ಕೆ ಕನ್ನಡದ ಹಳೆಯ ಧಾರಾವಾಹಿ ನಿರ್ಮಾಪಕರೊಬ್ಬರು ಬಿಜಿನೆಸ್ ಹೆಡ್ ಅಂತೆ ಎಂಬುದು. ಈ ಬಗ್ಗೆ ಒಂದಷ್ಟು ಟ್ರೋಲ್ ಪೇಜಸ್ ನವರು ತಮ್ಮ ಪೇಜ್ ನಲ್ಲಿ ಬರೆದುಕೊಂಡಿದ್ದು ಇದು ಕಿರುತೆರೆಯಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಆದರೆ, ಸೋನಿ ಸಂಸ್ಥೆ ಕನ್ನಡದಲ್ಲಿ ಯಾವುದೇ ವಾಹಿನಿಯನ್ನು ಲಾಂಚ್ ಮಾಡುತ್ತಿಲ್ಲ ಎಂಬ ಸುದ್ದಿ ಕಿರುತೆರೆಯ ಉನ್ನತವಲಯದಿಂದ ಮಾಹಿತಿ ಸಿಕ್ಕಿದೆ.
ಚಾನಲ್ ಹೆಡ್ ಓಕೆ! ಅಷ್ಟೊಂದು ಬಿಲ್ಡಪ್ ಯಾಕೆ ?
ಹಾಗಾದರೆ ಈ ಸುದ್ದಿ ಇಷ್ಟು ದೊಡ್ಡ ಮಟ್ಟದಲ್ಲಿ ಹೇಗೆ ಹಬ್ಬಿದೆ ಅಂತ ಹುಡುಕಿದಾಗ ಗೊತ್ತಾಗಿದ್ದು ಇಷ್ಟು. ಕಿರುತೆರೆಯ ಹಳೆಯ ನಿರ್ಮಾಪಕರೊಬ್ಬರು ತಾವೇ ಒಂದು ವಾಹಿನಿ ಮಾಡಲು ಹೊರಟಿದ್ದು ಸತ್ಯ. ಈಗಾಗಲೇ ಚಾಲ್ತಿಯಲ್ಲಿದ್ದು ಅಷ್ಟೇನೂ ʼಸಿರಿʼವಂತವಲ್ಲದ ಕನ್ನಡದ ವಾಹಿನಿಯೊಂದನ್ನು ಒಂದಷ್ಟು ಇನ್ವೆಸ್ಟರ್‌ಗಳನ್ನು ಸೇರಿಸಿಕೊಂಡು ಖರೀದಿಸಿದ್ದಾರಂತೆ ಈ ಹಳೆಯ ನಿರ್ಮಾಪಕರು. ಇದರ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು ಈ 'ಸಿರಿ'ವಂತಿಕೆ ಇಲ್ಲದ ವಾಹಿನಿಗೆ ಧಾರಾವಾಹಿಯ ನಿರ್ಮಾಪಕರೇ ಬಿಜಿನೆಸ್ ಹೆಡ್ ಎಂಬುದು ಕೂಡಾ ಸತ್ಯಕ್ಕೆ ಹತ್ತಿರವಾದ ಸುದ್ದಿ. ಆದರೆ, ಇವರೊಂದಿಗೆ ಸೋನಿ ಕನ್ನಡ ಎಂಬ ಕಲ್ಪಿತ ಹೆಸರು ಯಾಕೆ ತಗುಲಿಕೊಂಡಿತು? ಸೋನಿಯವರು ಈ ಆಟದಲ್ಲೇ ಇಲ್ಲವಲ್ಲ ಎಂದು ವಿಚಾರಿಸಿದರೆ, ಅದು ಆರಂಭದಲ್ಲಿ ಬಿಲ್ಡ್ ಅಪ್ ತೆಗೆದುಕೊಳ್ಳಲಿಕ್ಕಾಗಿ ಈ ನಿರ್ಮಾಪಕರೇ ಹರಿದು ಬಿಟ್ಟಿರುವ ಸುಳ್ಳು ಸುದ್ದಿ ಎಂದು ಕಿರುತೆರೆ ಲೋಕ ಮಾತಾಡಿಕೊಳ್ಳುತ್ತಿದೆ.


Click it and Unblock the Notifications











