ಯುವ ರಾಜ್‌ಕುಮಾರ್- ಶ್ರೀದೇವಿ ವಿಚ್ಛೇದನಕ್ಕೆ ಕಾರಣ ಜನಪ್ರಿಯ ನಟಿ? ಏನಿದು ಸುದ್ದಿ?
ಸ್ಯಾಂಡಲ್‌ವುಡ್‌ನಲ್ಲಿ ವಿಚ್ಛೇದನದ ಸುದ್ದಿಗಳು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಕ್ಯೂಟ್ ಪೇರ್ ಎನಿಸಿಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ವಿಚ್ಛೇದನ ಪಡೆದು ಶಾಕ್ ಕೊಟ್ಟಿದ್ದರು. ಸಿನಿ ಪ್ರಿಯರು ಅದನ್ನು ಅರಗಿಸಿಕೊಳ್ಳುವಾಗಲೇ ಮತ್ತೊಂದು ಜೋಡಿ ದಾಂಪತ್ಯ ಜೀವನವನ್ನು ಮುರಿದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.
ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸುದ್ದಿ ಬಂದಿದೆ. ಜೂನ್ 6ನೇ ತಾರೀಕು ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಯುವ ಹಾಗೂ ಶ್ರೀದೇವಿ ಬೈರಪ್ಪ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಚಿತ್ರರಂಗದ ಗಣ್ಯರು ಇವರ ಮದುವೆ ಬಂದು ಆಶೀರ್ವಾದ ಮಾಡಿದ್ದರು.

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ವೈವಾಹಿಕ ಜೀವನಕ್ಕೆ ಅಂತ್ಯ ಹಾಡುತ್ತಿರುವುದಕ್ಕೆ ಕಾರಣವೇನು? ಅಂತ ದೊಡ್ಮನೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿರುವಾಗಲೇ, ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟಿಯೊಬ್ಬರ ಹೆಸರು ಓಡಾಡುತ್ತಿದೆ. ಯುವ ರಾಜ್‌ಕುಮಾರ್ ಆ ನಟಿಯೊಂದಿಗೆ ಅನ್ಯೋನ್ಯವಾಗಿದ್ದಾರೆ. ಈ ಕಾರಣದಿಂದಲೇ ಯುವ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ಆ ನಟಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ಹೀಗಾಗಿ ಮನೆಯಲ್ಲಿ ಕಲಹ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಇಬ್ಬರು ಬೇರೆ ವಾಸಿಸುತ್ತಿದ್ದರು ಎಂದು ಗಾಂಧಿನಗರದ ಗಲ್ಲಿಯಲ್ಲಿ ಗುಲ್ಲೆದ್ದಿದೆ.

ದೊಡ್ಮನೆಯಲ್ಲಿ ವಿಚ್ಛೇದನದ ಪ್ರಕರಣಗಳು ಬೆಳಕಿಗೆ ಬಂದಿರೋದು ಇದೇ ಮೊದಲು. ಕುಟುಂಬ, ಸಂಸಾರ ತೂಗಿಸಿಕೊಂಡು ಹೋಗುವ ವಿಷಯದಲ್ಲಿ ದೊಡ್ಮನೆ ಮಾದರಿಯಾಗಿ ನಿಂತಿತ್ತು. ಈಗ ಯುವ ರಾಜ್‌ಕುಮಾರ್ ವಿಚ್ಛೇದನದ ಪ್ರಕರಣವನ್ನು ದೊಡ್ಮನೆ ಕುಟುಂಬದ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ವಿಚ್ಛೇದನದ ಬಗ್ಗೆ ಯುವರಾಜ್‌ಕುಮಾರ್ ಆಗಲಿ, ಅವರ ಕುಟುಂಬ ಆಗಲಿ, ಇದೂವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಯುವ ರಾಜ್‌ಕುಮಾರ್ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ಜುಲೈ 4ರಂದು ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ. ಈ ಮಧ್ಯೆ ಶ್ರೀದೇವಿ ಬೈರಪ್ಪ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಯುವ ರಾಜ್‌ಕುಮಾರ್ ವಿಚ್ಛೇದನದ ಪ್ರಕರಣ ಹೊರಬೀಳುತ್ತಿದ್ದಂತೆ ಗಾಂಧಿನಗರದಲ್ಲಿ ಗುಸು ಗುಸು ಅಂತೂ ಹಬ್ಬಿದೆ. ಯುವ ಸಂಸಾರದಲ್ಲಿ ಜನಪ್ರಿಯ ನಟಿಯೊಬ್ಬರು ಹುಳಿ ಹಿಂಡಿದ್ದಾರೆ. ಆಕೆಯಿಂದಲೇ ಇಷ್ಟೆ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಏನಕ್ಕೂ ಯುವ ರಾಜ್‌ಕುಮಾರ್ ಅಥವಾ ಶ್ರೀದೇವಿ ಇಬ್ಬರೂ ಈಗಾಗಲೇ ಗುಲ್ಲೆದ್ದಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.


Click it and Unblock the Notifications











