Toxic: 'ಟಾಕ್ಸಿಕ್' ಬಿಗ್ ಅಪ್‌ಡೇಟ್.. ಕೆವಿಎನ್ ಜೊತೆ ವಿತರಣೆಗೆ ಇಳಿದ ಇನ್ನೊಂದು ಸಂಸ್ಥೆ; ಯಶ್ ಏನಿದು ಲೆಕ್ಕಾಚಾರ?
'ಕೆಜಿಎಫ್ 2' ಆದ್ಮೇಲೆ ಯಶ್ ಸಿನಿಮಾ ಬಗ್ಗೆ ಒಂದು ಕುತೂಹಲವಿದೆ. ಮತ್ತೊಂದು ಕನ್ನಡ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುತ್ತಾ? ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ರಾಕಿ ಭಾಯ್ ಈ ಬಾರಿ ಬೇರೆಯದ್ದೇ ಅವತಾರವೆತ್ತಿ ತೆರೆಮೇಲೆ ಬರುತ್ತಿದ್ದಾರೆ. ಈ ಕಾರಣಕ್ಕೆ 'ಟಾಕ್ಸಿಕ್' ಯಶ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ಮಂದಿಯಲ್ಲೂ ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ಇನ್ನೇನು ಸಿನಿಮಾ ಈ ತಿಂಗಳು (ಮಾರ್ಚ್ 9) ರಿಲೀಸ್ ಆಗಿಯೇ ಬಿಡುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಯಶ್ ಅಂಡ್ ಟೀಮ್ ಮತ್ತೆ ಸಿನಿಮಾ ರಿಲೀಸ್ ಅನ್ನು ಮುಂದೂಡಿದ್ದಾರೆ. ಹೀಗಾಗಿ ವಿಧಿಯಿಲ್ಲದೇ 'ಟಾಕ್ಸಿಕ್' ನೋಡುವುದಕ್ಕೆ ಜೂನ್ 4ರವರೆಗೂ ಕಾಯಲೇಬೇಕು. ಈ ಮಧ್ಯೆ 'ಟಾಕ್ಸಿಕ್' ಟೀಮ್ ರಿಲೀಸ್‌ಗೆ ಮತ್ತಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಯಶ್ 'ಟಾಕ್ಸಿಕ್' ಸಿನಿಮಾವನ್ನು ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ. ಗ್ಲೋಬಲ್ ಲೆವೆಲ್‌ಗೆ ರಿಲೀಸ್ ಮಾಡೋದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರನ್ನು ಸೆಳೆದಿದೆ. ಈ ಬೆನ್ನಲೇ ದೊಡ್ಡ ಮಟ್ಟದಲ್ಲಿ ಸಿನಿಮಾದ ಬ್ಯುಸಿನೆಸ್ ಆಗಿದೆ. ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಸಿನಿಮಾದ ಬ್ಯುಸಿನೆಸ್ ಆಗಿದೆ. ಆದರೆ, ಕರ್ನಾಟಕದ ಬ್ಯುಸಿನೆಸ್ ಬಗ್ಗೆ ಸಿನಿಮಾ ಮಂದಿ ಫ್ರೆಶ್ ಅಪ್‌ಡೇ ಕೊಡುತ್ತಿದ್ದಾರೆ. ಅದೇನು ಅಂತ ನೋಡುವುದಾರೇ,
'ಟಾಕ್ಸಿಕ್' ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಹೀಗಾಗಿ ಸಿನಿಮಾ ಬ್ಯುಸಿನೆಸ್‌ನಲ್ಲಿ ಯಶ್ ಕೂಡ ಮಾತುಕತೆಗೆ ಕೂತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ವಿತರಣೆ ಮಾಡುವ ವಿಚಾರದಲ್ಲಿ ಯಶ್ ಹೊಸ ಸ್ಟ್ರಾಟಜಿ ಮಾಡಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಓಡಾಡುತ್ತಿದೆ.
ಹೌದು, ಕೆವಿಎನ್ ಪ್ರೊಡಕ್ಷನ್ 'ಟಾಕ್ಸಿಕ್'ನ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಕರ್ನಾಟಕದಾದ್ಯಂತ ಅವರೇ ವಿತರಣೆ ಮಾಡುತ್ತಾರೆಂಬ ಸುದ್ದಿ ಹಬ್ಬಿತ್ತು. ಆದ್ರೀಗ ಇನ್ನೊಂದು ವಿತರಣಾ ಸಂಸ್ಥೆ 'ಟಾಕ್ಸಿಕ್' ರಿಲೀಸ್‌ಗೆ ಮುಂದಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಸಲಿಗೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ವಿಷಯ ಏನಂದ್ರೆ, ಇತ್ತೀಚೆಗೆ ಯಶ್ ಕರ್ನಾಟಕದ ವಿತರಣೆ ವಿಷಯದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಕೆವಿಎನ್ ಜೊತೆ ಕೆಆರ್‌ಜಿ ಸ್ಟುಡಿಯೋ ಕೂಡ ಜಂಟಿಯಾಗಿ ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದೆ ಎನ್ನಲಾಗಿದೆ.

ಯಶ್ ಇತ್ತೀಚೆಗೆ ಮುಂಬೈನಲ್ಲಿಯೇ ಹೆಚ್ಚಾಗಿ ನೆಲೆಸುತ್ತಿದ್ದಾರೆ. ಹೀಗಾಗಿ ಕೆವಿಎನ್ ಸಂಸ್ಥೆಯ ಪ್ರಮುಖರು ಯಶ್‌ರನ್ನು ಭೇಟಿ ಮಾಡಿದ್ದರಂತೆ. ಕರ್ನಾಟಕದ ವಿತರಣೆಯನ್ನು ಸಂಪೂರ್ಣವಾಗಿ ನಾವೇ ಮಾಡುತ್ತೇವೆ ಎಂದು ಕೇಳಿಕೊಂಡಿದ್ದರಂತೆ. ಅದಕ್ಕೆ ಯಶ್ ಕರ್ನಾಟಕ ಪ್ರಮುಖ ಏರಿಯಾಗಳನ್ನು ಕೆವಿಎನ್‌ಗೆ ಬಿಟ್ಟು ಕೊಟ್ಟಿದ್ದು, ಉಳಿದ ಏರಿಯಾಗಳನ್ನು ಕೆಆರ್‌ಜಿ ಸ್ಟುಡಿಯೋಗೆ ಕೊಟ್ಟಿದ್ದಾರೆಂಬ ಸುದ್ದಿ ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕೆಜಿಎಫ್ 2' ಪ್ರೀ-ರಿಲೀಸ್ ಬ್ಯುಸಿನೆಸ್ ಅನ್ನು ಕಾರ್ತಿಕ್ ಗೌಡ ನೋಡಿಕೊಂಡಿದ್ದರು. ಹೀಗಾಗಿ ಯಶ್ 'ಟಾಕ್ಸಿಕ್' ಬ್ಯುಸಿನೆಸ್ ಮಾಡಿಕೊಡುವುದಕ್ಕೆ ಕಾರ್ತಿಕ್ ಗೌಡರನ್ನು ಕರೆದುಕೊಂಡು ಬಂದಿದ್ದರು. ಈಗಾಗಲೇ ಸುಮಾರು 650 ರಿಂದ 700 ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಯಶ್ ಕರ್ನಾಟಕದ ವಿತರಣೆಯನ್ನು ಎರಡು ಸಂಸ್ಥೆಗಳಿಗೆ ಹಂಚಿದ್ದಾರೆ. ಬೆಂಗಳೂರು, ಕೋಲಾರ, ತುಮಕೂರು (BKT) ಹಾಗೇ ಮಂಡ್ಯ, ಮೈಸೂರು, ಕೊಡಗು ಹಾಗೂ ಹಾಸನ (MMCH) ಏರಿಯಾವನ್ನು ಕೆವಿಎನ್ ಸಂಸ್ಥೆ ಬಿಟ್ಟು ಕೊಟ್ಟಿದೆ. ಇದನ್ನು ಉಳಿದ ಏರಿಯಾಗಳಲ್ಲಿ ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ 'ಟಾಕ್ಸಿಕ್' ಟೀಮ್‌ನಿಂದ ಅಧಿಕೃತ ಹೇಳಿಕೆ ಕಂಡು ಬಂದಿಲ್ಲ.


Click it and Unblock the Notifications















