ಯುವ ರಾಜ್‌ಕುಮಾರ್ 2ನೇ ಸಿನಿಮಾ ಬಗ್ಗೆ ಏನಿದು ಸುದ್ದಿ? 'ಯುವ' ಬಳಿಕ ಮುಂದೇನು?
ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾಗಿದೆ. ಹೊಂಬಾಳೆ ಫಿಲ್ಮ್ಸ್ ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ಸಂಸ್ಥೆ ಯುವನನ್ನು ಪರಿಚಯ ಮಾಡಿತ್ತು. ಸಂತೋಷ್ ಆನಂದ್‌ರಾಮ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಅಣ್ಣಾವ್ರ ಕುಟುಂಬದಿಂದ ಯಾರೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಅವರ ಮೇಲೆ ನಿರೀಕ್ಷೆ ಬೆಟ್ಟದಷ್ಟು ಇರುತ್ತೆ. ಹಾಗೇ ಯುವ ರಾಜ್‌ಕುಮಾರ್ ಮೇಲೂ ಇತ್ತು.
ಯುವ ರಾಜ್‌ಕುಮಾರ್ ಮೊದಲ ಸಿನಿಮಾಗೆ ನಿರ್ದೇಶಕರು, ನಿರ್ಮಾಣ ಸಂಸ್ಥೆ ಎಲ್ಲವೂ ಕೈ ಹಿಡಿದಿದ್ದವು. ಅದನ್ನು ಯುವ ಹೇಗೆ ಉಪಯೋಸಿಕೊಳ್ಳಬಹುದು ಎಂಬ ನಿರೀಕ್ಷೆಗೀಗ ಉತ್ತರ ಸಿಕ್ಕಿದೆ. ಸ್ಯಾಂಡಲ್‌ವುಡ್ ಮಂದಿ ನಿರೀಕ್ಷೆ ಮಾಡಿದಂತೆ ಪುನೀತ್ ರಾಜ್‌ಕುಮಾರ್ ಅವರಂತೆಯೇ ಪ್ರೇಕ್ಷಕರನ್ನು ಅವರ ಅಭಿಮಾನಿಗಳನ್ನು ರಂಜಿಸಬಲ್ಲೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

'ಯುವ' ಸಿನಿಮಾ ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ ಅನ್ನೋದು ನಿಜ. ಆದರೆ, ಒಬ್ಬ ಯುವ ನಟನ ಸಿನಿಮಾಗೆ ಈ ಮಟ್ಟಗೆ ಓಪನಿಂಗ್ ಸಿಕ್ಕಿದ್ದು ಉತ್ತಮ ಬೆಳವಣಿಗೆ ಎಂದೇ ಸ್ಯಾಂಡಲ್‌ವುಡ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಯುವ ರಾಜ್‌ಕುಮಾರ್ ಡಿಸೆಂಟ್ ಎಂಟ್ರಿ ಸಿಕ್ಕಿದೆ ಅಂತಲೇ ಚಿತ್ರರಂಗದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೀಗಾಗಿ 'ಯುವ' ಬಳಿಕ ಯುವ ರಾಜ್‌ಕುಮಾರ್ ಸಿನಿಮಾ ಯಾವುದು? ಅನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಯುವ ರಾಜ್‌ಕುಮಾರ್ ಅಭಿಮಾನಿಗಳ ಕುತೂಹಲ ಕೂಡ ಇದೇ ಇದೆ. 'ಯುವ' ರಿಲೀಸ್ ಮಾಡಿದ್ದೇನೋ ಆಗಿದೆ. ಮುಂದೇನು? ಮುಂದಿನ ಸಿನಿಮಾ ಯಾರೊಂದಿಗೆ ಮಾಡಬಹುದು ಎಂದು ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಸರಿಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಎರಡನೇ ಸಿನಿಮಾ ಬಗ್ಗೆ ಚರ್ಚೆ ಆರಂಭ ಆಗಿದೆ.
ಸದ್ಯ ಯುವ ರಾಜ್‌ಕುಮಾರ್ ಥಿಯೇಟರ್‌ಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ಇಂದು (ಏಪ್ರಿಲ್ 3) ಯುವ ರಾಜ್‌ಕುಮಾರ್ ದಾವಣಗೆರೆಗೆ ಭೇಟಿ ನೀಡಿದ್ದು, ಅಲ್ಲಿ ಅವರಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ಯುವನನ್ನು ನೋಡುವುದಕ್ಕೆ ಮುಗಿಬಿದ್ದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಯುವ ಉತ್ತಮ ಫ್ಯಾನ್ ಬೇಸ್ ಅಂತೂ ಸೃಷ್ಟಿಯಾಗಿರೋದು ಪಕ್ಕಾ.

ಸೋಶಿಯಲ್ ಮೀಡಿಯಾಗಳಲ್ಲಿ 'ಯುವ' ಪಾರ್ಟ್ 2 ಮಾಡಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಸಂತೋಷ್ ಆನಂದ್‌ರಾಮ್ ಕೊಟ್ಟ ಕ್ಲೈಮ್ಯಾಕ್ಸ್. 'ಯುವ' ಸಿನಿಮಾ ಕೊನೆಯಲ್ಲಿ ಹೋರಾಟ ನಿರಂತರ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಹೀಗಾಗಿ ಪಾರ್ಟ್ 2 ಶುರುವಾಗಬಹುದೇನೋ ಎಂದು ಅಭಿಮಾನಿಗಳೇ ಗೆಸ್ ಮಾಡುತ್ತಿದ್ದಾರೆ.
ಆದರೆ, ಯುವ ರಾಜ್‌ಕುಮಾರ್ ಸದ್ಯಕ್ಕೆ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಎರಡನೇ ಸಿನಿಮಾ ಯಾವುದು? ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಕೆಲವು ಮೂಲಗಳ ಪ್ರಕಾರ, ಯುವ ರಾಜ್‌ಕುಮಾರ್ ಮೊದಲ ಸಿನಿಮಾ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. 'ಯುವ' ಥಿಯೇಟರ್ ವಿಸಿಟ್ ಎಲ್ಲಾ ಮುಗಿದ ಬಳಿಕ ಇನ್ನೊಂದು ಸಿನಿಮಾ ಅನೌನ್ಸ್ ಮಾಡಬಹುದು ಎಂದು ಹೇಳುತ್ತಿದ್ದಾರೆ.
ಅಂದ್ಹಾಗೆ, ಇದೇ ತಿಂಗಳು ಅಂದರೆ, ಏಪ್ರಿಲ್ 23ರಂದು ಯುವ ರಾಜ್‌ಕುಮಾರ್ ಹುಟ್ಟುಹಬ್ಬವಿದೆ. ಅಂದು ಯುವ ಹೊಸ ಸಿನಿಮಾ ಬಗ್ಗೆ ಮಾಹಿತಿ ಹೊರಬೀಳಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಅದೇ ಎರಡನೇ ಸಿನಿಮಾ ಅನೌನ್ಸ್ ಆಗುತ್ತಾ? ಇಲ್ಲ ಇನ್ನೊಂದಿಷ್ಟು ಸಮಯ ತೆಗೆದುಕೊಂಡು ಮತ್ತಷ್ಟು ಪವರ್‌ಫುಲ್ ಆಗಿ ಎಂಟ್ರಿ ಕೊಡುತ್ತಾರಾ? ಪ್ರಶ್ನೆ ಅಭಿಮಾನಿಗಳ ಮುಂದಿದೆ.


Click it and Unblock the Notifications











