ಪದೇ ಪದೆ ಅನುಷ್ಕಾ ಶೆಟ್ಟಿ 'ಘಾಟಿ' ಸೆಟ್ಟಿಗೆ ಪ್ರಭಾಸ್ ಭೇಟಿ ಕೊಡುತ್ತಿರೋದು ನಿಜವೇ? ದಿಢೀರನೇ ಯಾಕೆ ಹೀಗೆ?
ದಕ್ಷಿಣ ಭಾರತದ ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತೆ ಚಿತ್ರರಂಗದಲ್ಲಿ ಸದ್ದು ಮಾಡುವುದಕ್ಕೆ ಹೊರಟಿದ್ದಾರೆ. ತಮ್ಮ ಖಡಕ್ ಲುಕ್ ಮೂಲಕ ಈಗಾಗಲೇ ತಮ್ಮ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ಕಿಕ್ ಕೊಟ್ಟಿದ್ದಾರೆ. ಸ್ವೀಟಿಯ ಹೊಸ ಸಿನಿಮಾ 'ಘಾಟಿ'ಯ ಲುಕ್ ನೋಡಿ ಸಿನಿಮಾ ಮಂದಿನೇ ಫಿದಾ ಆಗಿದ್ದಾರೆ. ಟಾಲಿವುಡ್ ತುಂಬೆಲ್ಲ ಇದೇ ಲುಕ್ ಬಗ್ಗೆನೇ ಚರ್ಚೆ.
'ಬಾಹುಬಲಿ' ಬಳಿಕ ಖಡಕ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳದ ಅನುಷ್ಕಾ ಶೆಟ್ಟಿ ದಿಢೀರನೇ 'ಘಾಟಿ' ಅವತಾರವೆತ್ತಿದ್ದಾರೆ. 'ಅರುಂಧತಿ'ಯನ್ನು ಮತ್ತೆ ಮಾಸ್ ಅವತಾರದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ತಕ್ಕಂತೆ 'ಘಾಟಿ' ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದ್ದು, ಅನುಷ್ಕಾ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಈ ಮಧ್ಯೆ ಮತ್ತೊಂದು ಸುದ್ದಿ ಅವರ ಅಭಿಮಾನಿಗಳನ್ನು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ಇದು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ವಿಷಯಕ್ಕೆ ಸಂಬಂಧ ಪಟ್ಟ ವಿಷಯ. 'ಬಾಹುಬಲಿ' ಸಿನಿಮಾ ಬಳಿಕ ತೆರೆಮೇಲೆ ಇಬ್ಬರ ಕೆಮಿಸ್ಟ್ರಿಯನ್ನು ಕಣ್ತುಂಬಿಕೊಂಡ ಅಭಿಮಾನಿಗಳಿಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಅನುಮಾನ ಮಾಡಿತ್ತು. ಇಬ್ಬರೂ ಮದುವೆ ಆಗಬೇಕು ಅಂತ ಅಭಿಮಾನಿಗಳೇ ಬಯಸಿದ್ದರು. ಆದರೆ, ಆ ಜೋಡಿ ತಮ್ಮ ನಡುವೆ ಏನೇನೂ ಇಲ್ಲ ಎನ್ನುವ ಮೂಲಕ ತಣ್ಣೀರು ಎರಚಿತ್ತು. ಆದ್ರೀಗ ಅನುಷ್ಕಾ ಸಿನಿಮಾದ ಸೆಟ್ಟಿಗೆ ಪ್ರಭಾಸ್ ಆಗಾಗ ಭೇಟಿಯಾಗುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.
ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ದಿನದಂದು 'ಘಾಟಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಕ್ರಿಶ್ ಜಗರ್ಲಮುಡಿ ನಿರ್ದೇಶಿಸುತ್ತಿರುವ ಈ ಸಿನಿಮಾ ಮೊದಲ ಲುಕ್‌ನಲ್ಲಿಯೇ ಗೆದ್ದು ಬಿಟ್ಟಿದೆ. ಈ ಮಧ್ಯೆ ಮತ್ತೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಮ್ಯಾಟರ್ ಮುನ್ನೆಲೆಗೆ ಬಂದಿದೆ. 'ಘಾಟಿ' ಸಿನಿಮಾ ಸೆಟ್ಟಿಗೆ ಪ್ರಭಾಸ್ ಈಗಾಗಲೇ ಹಲವು ವಿಸಿಟ್ ಮಾಡಿದ್ದಾರೆ. ಅಲ್ಲಿ ಅನುಷ್ಕಾ ಶೆಟ್ಟಿ ಜೊತೆ ಹೆಚ್ಚು ಸಮಯ ಕಳೆದಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲೀಗ ಹೆಚ್ಚಾಗಿ ಸುದ್ದಿ ಮಾಡುತ್ತಿದೆ.

ಅನುಷ್ಕಾ ಶೆಟ್ಟಿ ಸೆಟ್ಟಿಗೆ ಪ್ರಭಾಸ್ ಭೇಟಿ ಕೊಡುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅನುಷ್ಕಾ ಶೆಟ್ಟಿ ನಟಿಸಿದ 'ಭಾಗಮತಿ' ಸಿನಿಮಾದ ಸೆಟ್ಟಿಗೂ ಪ್ರಭಾಸ್ ಹಲವು ಬಾರಿ ಭೇಟಿ ಕೊಟ್ಟಿದ್ದರು ಎಂಬ ಸುದ್ದಿಯಿದೆ. ಅಷ್ಟಕ್ಕೂ ಪ್ರಭಾಸ್ ಇಷ್ಟೊಂದು ಬಾರಿ ಸಿನಿಮಾ ಸೆಟ್ಟಿಗೆ ಭೇಟಿ ಕೊಟ್ಟಿದು ಯಾಕೆ? ಇಬ್ಬರ ನಡುವೆ ಏನಾದರೂ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆಯೇ? ಅನ್ನೋ ಪ್ರಶ್ನೆಗಳು ಮೂಡಿವೆ. ಆದರೆ, ಅಧಿಕೃತವಾದ ಮಾಹಿತಿ ಇನ್ನೂ ಸಿಕ್ಕಿಲ್ಲ.
ಅನುಷ್ಕಾ ಶೆಟ್ಟಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅತ್ತ ಪ್ರಭಾಸ್ ಕೂಡ ಸಿನಿಮಾಗಳನ್ನು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇಬ್ಬರಿಗೂ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಜೋಡಿ ಒಟ್ಟಿಗೆ ನಟಿಸಿದರೆ, ಮತ್ತೊಂದು ಸಿನಿಮಾ ಮೆಗಾ ಬ್ಲಾಕ್ ಬಸ್ಟರ್ ಆಗಲಿದೆ ಅನ್ನೋದು ಇಬ್ಬರು ಅಭಿಮಾನಿಗಳ ಆಸೆ.
ಇನ್ನೊಂದು ಕಡೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಇಬ್ಬರ ನಡುವೆ ಮತ್ತೆ ಪ್ರೀತಿ ಏನಾದರೂ ಚಿಗುರಿದೆಯೇ? ಅಭಿಮಾನಿಗಳ ಆಸೆಯನ್ನು ಈ ಜೋಡಿ ಈಡೇರಿಸಬಹುದೇ? ಇಲ್ಲಾ ಸಿನಿಮಾದಲ್ಲಿ ಪ್ರಭಾಸ್ ಏನಾದರೂ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಇಬ್ಬರ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ. ಏನಕ್ಕೂ ಪ್ರಭಾಸ್ ಪದೇ ಪದೆ ಅನುಷ್ಕಾ ಶೆಟ್ಟಿ ಸಿನಿಮಾ ಸೆಟ್ಟಿಗೆ ಭೇಟಿ ಕೊಟ್ಟಿದ್ದು ನಿಜವೇ ಆಗಿದ್ದರೆ, ಹೊಸ ಸುದ್ದಿಯನ್ನು ನಿರೀಕ್ಷೆಯನ್ನು ನಿರೀಕ್ಷೆ ಮಾಡಬಹುದೇನೋ?


Click it and Unblock the Notifications











