ಹೀಗೊಂದು ಸುದ್ದಿ: ತೆಲುಗು, ತಮಿಳು ಆಯ್ತು.. ಈಗ ಮಲಯಾಳಂಗೆ ಶಿವಣ್ಣ ಎಂಟ್ರಿ? ಸೂಪರ್‌ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸ್ತಾರಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅನಾರೋಗ್ಯದ ಬಳಿಕ ಮತ್ತೆ ಆಕ್ಟಿವ್ ಆಗಿದ್ದಾರೆ. ಒಂದೊಂದು ಸಿನಿಮಾಗಳನ್ನು ಟೇಕಾಫ್ ಮಾಡುತ್ತಿದ್ದಾರೆ. ಜೊತೆಗೆ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಮತ್ತೆ ಎಂದಿನಂತೆ ಶಿವಣ್ಣ ಚಿರಯುವಕನಂತೆ ಓಡಾಡಿಕೊಂಡಿದ್ದಾರೆ. ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಪರ ಭಾಷೆಯಿಂದಲೂ ಹ್ಯಾಟ್ರಿಕ್ ಹೀರೋಗೆ ಬೇಡಿಕೆ ಹೆಚ್ಚಾಗಿದೆ. ಈಗ ಗಾಂಧಿನಗರದ ಗಲ್ಲಿಯಲ್ಲೊಂದು ಸುದ್ದಿ ಹರಿದಾಡುತ್ತಿದೆ.
ಶಿವಣ್ಣನ 63ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿರುವ ನಿರ್ಮಾಪಕರು ಭರ್ಜರಿಯಾಗಿ ಅನೌನ್ಸ್ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಇದೇ ಜುಲೈ 12ರಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 63ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆ ದಿನ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಕಾದಿದೆ ಅಂತ ಸ್ಯಾಂಡಲ್‌ವುಡ್ ಮಂದಿ ಪಿಸುಗುಡುತ್ತಿದ್ದಾರೆ.

ಇನ್ನೊಂದು ಕಡೆ ಶಿವಣ್ಣ ಮಲಯಾಳಂ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆಂಬ ಮಾತುಗಳು ಕೂಡ ಹರಿದಾಡುತ್ತಿವೆ. ಮಲಯಾಳಂ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸುವುದಕ್ಕೆ ಶಿವಣ್ಣಗೆ ಆಹ್ವಾನ ಬಂದಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಗಾಂಧಿನಗರದ ಮಂದಿಯಲ್ಲಿ ಚರ್ಚೆಯಾಗುತ್ತಿರುವ ಆ ಸಿನಿಮಾ ಯಾವುದು? ತಿಳಿಯುವುದಕ್ಕೆ ಮುಂದೆ ಓದಿ.
ತಮಿಳಿನ 'ಜೈಲರ್' ಸಿನಿಮಾ ಶಿವಣ್ಣನಿಗೆ ಬೇರೊಂದು ಇಮೇಜ್ ಕೊಟ್ಟಿತ್ತು. ಶಿವಣ್ಣನ ಎಂಟ್ರಿಗೆ, ಖದರ್‌ಗೆ, ಖಡಕ್ ಲುಕ್‌ಗೆ ಸಿನಿಪ್ರಿಯರ ಥ್ರಿಲ್ ಆಗಿದ್ದರು. ಅದರಲ್ಲೂ ತಮಿಳು ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ಶಿಳ್ಳೆಗಳನ್ನು ಹಾಕಿ ಸಂಭ್ರಮಿಸಿದ್ದರು. ಸೆಂಚುರಿ ಸ್ಟಾರ್‌ಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇಲ್ಲಿಂದ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿರೋದು ಹೊಸ ವಿಷಯವೇನಲ್ಲ. ಆದರೆ, ಮಲಯಾಳಂ ಚಿತ್ರರಂಗ ಕೂಡ ಶಿವಣ್ಣನ ಹಿಂದೆ ಬಿದ್ದಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ಮಲಯಾಳಂ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ಇಬ್ಬರೂ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾಗೆ MMMN ಎಂದು ಹೆಸರಿಡಲಾಗಿದೆ ಎಂಬ ವರದಿಗಳಿವೆ. ಈ ಸಿನಿಮಾದಲ್ಲಿ ನಟಿಸುವಂತೆ ಶಿವರಾಜ್‌ಕುಮಾರ್‌ಗೆ ಆಫರ್ ಬಂದಿದೆ ಎಂಬ ಮಾತಿದೆ. ಈ ಸಿನಿಮಾದ ತಂಡ ಈಗಾಗಲೇ ಶಿವಣ್ಣನೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಶಿವಣ್ಣ ಗ್ರೀನ್ ಸಿಗ್ನಲ್ ಕೊಡುವುದೊಂದೇ ಬಾಕಿ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ಇಬ್ಬರೂ 2008ರಲ್ಲಿ 'ಟ್ವಿಂಟಿ:20' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಮತ್ತೆ ಒಟ್ಟಿಗೆ ನಟಿಸಿರಲಿಲ್ಲ. ಈಗ ಮತ್ತೆ ಈ ಇಬ್ಬರೂ ಸೂಪರ್‌ಸ್ಟಾರ್‌ಗಳು ಮತ್ತೆ ಒಂದಾಗಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂನ ಮತ್ತೊಬ್ಬ ಸ್ಟಾರ್ ನಟ ಫಹಾದ್ ಫಾಸಿಲ್ ಹಾಗೂ ನಟಿ ನಯನತಾರಾ ಕೂಡ ನಟಿಸುತ್ತಿದ್ದು, ಇದೊಂದು ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಮಹೇಶ್ ನಾರಾಯಣನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಶಿವಣ್ಣನನ್ನು ವಿಶೇಷ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ನಿಜಕ್ಕೂ ಮಲಯಾಳಂ ಟೀಮ್ ಶಿವಣ್ಣನನ್ನು ಸಂಪರ್ಕ ಮಾಡಿದೆಯೇ? ಮಲಯಾಳಂ ಸೂಪರ್‌ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸುವಂತೆ ಶಿವಣ್ಣನನ್ನು ಕೇಳಿಕೊಳ್ಳಲಾಗಿದೆಯೇ? ಇಲ್ಲ ಇದು ಬರೀ ಗಾಂಧಿನಗರದ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ಶಿವಣ್ಣ ಆಗಲಿ, MMMN ಟೀಮ್ ಆಗಿಲಿ ಅಧಿಕೃತವಾಗಿ ಎಲ್ಲೂ ಈ ಬಗ್ಗೆ ಹೇಳಿಕೆಗಳನ್ನು ಕೊಟ್ಟಿಲ್ಲ.


Click it and Unblock the Notifications











