ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ; ವಿಕ್ರಮ್ ಮಾಡಬೇಕಿದ್ದ ಪಾತ್ರ ಕಿಚ್ಚ ಸುದೀಪ್ ಪಾಲಾಯ್ತಾ?
ಭಾರತೀಯ ಚಿತ್ರರಂಗದಲ್ಲಿ ನಿಧಾನವಾಗಿ ಪ್ಯಾನ್ ವರ್ಲ್ಡ್ ಸಿನಿಮಾಗಳ ಕ್ರೇಜ್ ಶುರುವಾಗಿದೆ. 'ರಾಮಾಯಣ' ಸರಣಿ, 'ಟಾಕ್ಸಿಕ್', ಅಲ್ಲು ಅರ್ಜುನ್- ಅಟ್ಲಿ ಸಿನಿಮಾ, ರಾಜಮೌಳಿ ನಿರ್ದೇಶನದ 'ವಾರಣಾಸಿ' ಹೀಗೆ ಫಿಲ್ಮ್ ಮೇಕರ್ಸ್ ದೊಡ್ಡದಾಗಿ ಕನಸು ಕಾಣಲು ಆರಂಭಿಸಿದ್ದಾರೆ. ನೂರಾರು ಕೋಟಿ ಅಲ್ಲ, ಸಾವಿರಾರು ಕೋಟಿ ಬಂಡವಾಳ ಸುರಿಯುವ ಲೆಕ್ಕಾಚಾರ ಶುರುವಾಗಿದೆ. ದೊಡ್ಡ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರನ್ನು ಒಟ್ಟು ಸೇರಿಸುವ ಪ್ರಯತ್ನವೂ ಜೋರಾಗಿದೆ.
ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಾರೆ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಎರಡು ತಿಂಗಳ ಹಿಂದೆ ಖುದ್ದು ಸುದೀಪ್ ಅವರ ಬಳಿ ಈ ಪ್ರಶ್ನೆ ಕೇಳಿದಾಗ ಎಲ್ಲಾ ಬರೀ ವದಂತಿ ಎಂದು ಹೇಳಿದ್ದರು. ಇಂತಹ ಸುದ್ದಿ ಹೇಗೆ ಹುಟ್ಟಿಕೊಳ್ಳುತ್ತದೆ ಎಂದು ಗೊತ್ತಿಲ್ಲ ಎಂದಿದ್ದರು. ನನಗ ಪರಭಾಷೆಯ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ 'ವಾರಣಾಸಿ' ಚಿತ್ರದಲ್ಲಿ ಕಿಚ್ಚ ಬಣ್ಣ ಹಚ್ಚುವುದು ಖಚಿತ ಎನ್ನುವ ಚರ್ಚೆ ಫಿಲ್ಮ್ ನಗರ್‌ನಲ್ಲಿ ಮತ್ತೆ ಶುರುವಾಗಿದೆ.

1300 ಕೋಟಿ ರೂ. ಬಜೆಟ್‌ನಲ್ಲಿ 'ವಾರಣಾಸಿ' ಚಿತ್ರ ನಿರ್ಮಾಣವಾಗ್ತಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿ ಶಿವಭಕ್ತನಾಗಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಚಿಯಾನ್ ವಿಕ್ರಂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಅದೇ ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ.
ಕಿಚ್ಚನಿಗೆ ತೆಲುಗು ಚಿತ್ರರಂಗ ಆಗಲಿ, ರಾಜಮೌಳಿ ನಿರ್ದೇಶನ ಆಗಲಿ ಹೊಸದಲ್ಲ. 'ಈಗ' ಚಿತ್ರದ ಲೀಡ್ ರೋಲ್‌ನಲ್ಲಿ ಕಿಚ್ಚನನ್ನು ಇವತ್ತಿಗೂ ಮರೆಯೋಕೆ ಸಾಧ್ಯವಿಲ್ಲ. ರಾಜಮೌಳಿಗೆ ಬಹಳ ಇಷ್ಟವಾದ ನಟ ಸುದೀಪ್. 'ಈಗ' ಚಿತ್ರದಲ್ಲಿ ಆ ಪಾತ್ರವನ್ನು ಸುದೀಪ್ ಬಿಟ್ಟು ಬೇರೆ ಯಾರೂ ಮಾಡೋಕೆ ಸಾಧ್ಯವಿಲ್ಲ ಎಂದು ಜಕ್ಕಣ್ಣ ಹೇಳಿದ್ದರು. ತಮ್ಮ ಸಿನಿಮಾಗಳಲ್ಲೇ ಬಹಳ ಇಷ್ಟವಾದ ಖಳನಟ ಸುದೀಪ್ ಎಂದು ವಿದೇಶದ ವೇದಿಕೆಯಲ್ಲಿ ಮೌಳಿ ಹೇಳಿದ್ದರು.

'ಈಗ' ಬಳಿಕ 'ಬಾಹುಬಲಿ; ದಿ ಬಿಗಿನಿಂಗ್" ಚಿತ್ರದಲ್ಲಿ ಅಸ್ಲಾಂ ಖಾನ್ ಆಗಿ ಸುದೀಪ್ ಮಿಂಚಿದ್ದರು. ಇಡೀ 'ಬಾಹುಬಲಿ' ಸರಣಿ ಸಿನಿಮಾ ಶುರುವಾಗುವುದೇ ಕಟ್ಟಪ್ಪ ಹಾಗೂ ಅಸ್ಲಾಂ ಖಾನ್ ಭೇಟಿ ಸನ್ನಿವೇಶದಿಂದ. ಪಾರ್ಟ್-2 ಚಿತ್ರದಲ್ಲೂ ಸುದೀಪ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. 'RRR' ಚಿತ್ರದಲ್ಲಿ ಕೂಡ ಸುದೀಪ್ ನಟಿಸುತ್ತಾರೆ ಎನ್ನುವ ಊಹಾಪೋಹ ಸದ್ದು ಮಾಡಿತ್ತು. ಆದರೆ ಅದು ನಿಜವಾಗಲಿಲ್ಲ.
ಸ್ವತಃ ಸುದೀಪ್ ಟಿವಿ9 ಸಂದರ್ಶನದಲ್ಲಿ ಮಾತನಾಡಿ 'ವಾರಣಾಸಿ' ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದ್ದರು. ಆದರೂ ಮತ್ತೆ ಮತ್ತೆ ಅದೇ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಇದಕ್ಕೆ ಸ್ಪಷ್ಟನೆ ಸಿಗಲಿದೆ. ಅಂದಹಾಗೆ ಮುಂದಿನ ವರ್ಷ ಏಪ್ರಿಲ್ 7ರಂದು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
'ವಾರಣಾಸಿ' ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಪಿ. ಎಸ್ ವಿನೋದ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಕಲಿಯುಗದಿಂದ ತ್ರೇತಾಯುಗದವರೆಗೆ ಹೋಗಿ ಬರುವಂತಹ ಕಾಲ್ಪನಿಕ ಕಥೆ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಆಫ್ರಿಕಾದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಹೇಶ್ ಬಾಬು ಚಿತ್ರದಲ್ಲಿ ರುದ್ರ ಎನ್ನುವ ಪಾತ್ರ ಮಾಡಿದ್ದು 20 ನಿಮಿಷಗಳ ಕಾಲ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











