ಭಾರೀ ಡೀಲ್.. 'ಬಾಹುಬಲಿ', 'KGF- 2', 'RRR' ದಾಖಲೆಗಳು ಉಡೀಸ್? 'ಪುಷ್ಪ'- 2 ತಗ್ಗೋದೇ ಇಲ್ಲ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಸಿನಿಮಾ ಶೂಟಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ. ಈಗಾಗಲೇ ಸಿನಿಮಾ ಪ್ರೀರಿಲೀಸ್ ಬ್ಯುಸಿನೆಸ್ ಆರಂಭವಾಗಿದೆ. ಎರಡು ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ ಸರಣಿಯ ಮೊದಲ ಸಿನಿಮಾ ಸೆನ್ಸೇಷನಲ್ ಹಿಟ್ ಎನಿಸಿಕೊಂಡಿತ್ತು. ಹಾಗಾಗಿ ಸೀಕ್ವೆಲ್ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಸದ್ಯ ಸಿನಿಮಾ ಚಿತ್ರೀಕರಣ ಭರದಿಂದ ಸಾಗ್ತಿದೆ.
ಆಕ್ಷನ್ ಮಸಾಲಾ ಎಂಟರ್‌ಟೈನರ್ 'ಪುಷ್ಪ' ಸಿನಿಮಾ ಎಲ್ಲಾ ವಿಭಾಗದಲ್ಲೂ ಸೂಪರ್ ಎನಿಸಿಕೊಂಡಿತ್ತು. ಸುಕುಮಾರ್ ನಿರ್ದೇಶನ, ಅಲ್ಲುಅರ್ಜುನ್ ಅಭಿನಯ ಬೊಂಬಾಟ್ ಆಗಿತ್ತು. ಇನ್ನು ಟೆಕ್ನಿಕಲಿ ಕೂಡ ಸಿನಿಮಾ ಸದ್ದು ಮಾಡಿತ್ತು. ದೇವಿಶ್ರೀ ಪ್ರಸಾಸ್ ಮ್ಯೂಸಿಕ್‌ನಲ್ಲಿ ಸಿನಿಮಾ ಆಲ್ಬಮ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಹೀರೊ ಇಂಟ್ರೊಡಕ್ಷನ್ ಸಾಂಗ್, ರೊಮ್ಯಾಂಟಿಕ್ ಸಾಂಗ್, ಟಪ್ಪಾಂಗುಚ್ಚಿ ಸಾಂಗ್, ಐಟಂ ಸಾಂಗ್ ಎಲ್ಲವೂ ಸಿನಿರಸಿಕರ ಮನ ಗೆದ್ದಿತ್ತು. ಇದೀಗ 'ಪುಷ್ಪ'-2 ಆಡಿಯೋ ರೈಟ್ಸ್ ಭಾರೀ ಬೆಲೆಗೆ ಬಿಕರಿಯಾಗಿದೆ ಎನ್ನಲಾಗ್ತಿದೆ.

ಭಾರತೀಯ ಚಿತ್ರರಂಗದಲ್ಲೇ 'ಪುಷ್ಪ'-2 ಸಿನಿಮಾ ಆಡಿಯೋ ರೈಟ್ಸ್ ವಿಚಾರದಲ್ಲಿ ದಾಖಲೆ ಬರೆದಿದೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಸದ್ದು ಮಾಡ್ತಿದೆ. ಇದನ್ನು ಕೇಳಿ ಒಂದು ಕ್ಷಣ ಟಾಲಿವುಡ್ ದಂಗಾಗಿದೆ. ಬರೋಬ್ಬರಿ 65 ಕೋಟಿ ರೂ.ಗೆ ಚಿತ್ರದ ಎಲ್ಲಾ ಭಾಷೆಗಳ ಆಡಿಯೋ ರೈಟ್ಸ್‌ನ ಟೀ- ಸೀರಿಸ್ ಸಂಸ್ಥೆ ಕೊಂಡುಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದೇ ನಿಜವಾಗಿದ್ದರೆ ಇದು ನಿಜಕ್ಕೂ ದಾಖಲೆಯೇ ಸರಿ.
ರಾಜಮೌಳಿ ನಿರ್ದೇಶನದ 'RRR' ಆಡಿಯೋ 26 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈವರೆಗೆ ಅದೇ ದೊಡ್ಡ ಮೊತ್ತ ಎನ್ನಲಾಗುತ್ತಿತ್ತು. ಆದರೆ ಅದಕ್ಕಿಂತ 2 ಪಟ್ಟು ಹೆಚ್ಚು ಮೊತ್ತಕ್ಕೆ 'ಪುಷ್ಪ' ದಿ ರೂಲ್ ಆಡಿಯೋ ರೈಟ್ಸ್ ಸೇಲಾಗಿದೆ ಅನ್ನುವ ವಿಚಾರ ಎಲ್ಲರ ಗಮನ ಸೆಳೆದಿದೆ. ಇನ್ನು 'ಪೊನ್ನಿಯಿನ್ ಸೆಲ್ವನ್' ಆಡಿಯೋ 24 ಕೋಟಿ ರೂ, 'ಸಾಹೋ' 22 ಕೋಟಿ ರೂ, 'ಲಿಯೋ' 16 ಕೋಟಿ ರೂ.ಗೆ ಬಿಕರಿಯಾಗಿದ್ದು ಈವರೆಗೆ ದಾಖಲೆಯಾಗಿತ್ತು. ಆದರೆ 'ಪುಷ್ಪ' -2 ಕ್ರೇಜ್ ನೋಡಿ ಇಂತಾದೊಂದು ಡೀಲ್ ಕುದುರಿಸಿಕೊಂಡಿರುವಂತೆ ಕಾಣುತ್ತಿದೆ.

ಕ್ಯಾಚಿ ಟ್ಯೂನ್‌ಗಳಿಂದ ದೇವಿಶ್ರೀಪ್ರಸಾದ್ ಸದಾ ಸಿನಿರಸಿಕರ ಮನಗೆಲ್ಲುತ್ತಾರೆ. ಇನ್ನು ಸುಕ್ಕು- ಬನ್ನಿ ಕಾಂಬಿನೇಷನ್ ಚಿತ್ರಕ್ಕೆ ಬೊಂಬಾಟ್ ಆಗಿರೋ ಮ್ಯೂಸಿಕ್ ಕಂಪೋಸ್ ಮಾಡೋದು ಗ್ಯಾರೆಂಟಿ. ಪ್ರೀಕ್ವೆಲ್ ಆಡಿಯೋ ಯಾವ ಪಾಟಿ ಸದ್ದು ಮಾಡಿದೆ ಅನ್ನೋದು ಗೊತ್ತೇಯಿದೆ. ಹಾಗಾಗಿ ಮೇಕಿಂಗ್ ಹಂತದಲ್ಲೇ 'ಪುಷ್ಪ' ಆರ್ಭಟ ಮತ್ತೆ ಶುರುವಾಗಿದೆ. ಇತ್ತೀಚೆಗೆ ಚಿತ್ರದ ನಿರ್ಮಾಪಕರು, ನಿರ್ದೇಶಕ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಹಾಗಾಗಿ ಸಿನಿಮಾ ಶೂಟಿಂಗ್‌ಗೆ ಕೊಂಚ ಬ್ರೇಕ್ ಬಿದ್ದಿದೆ.
ಸರಣಿಯ ಮೊದಲ ಚಿತ್ರಕ್ಕಿಂತ ಹಲವು ಪಟ್ಟು ದೊಡ್ಡದಾಗಿ 2ನೇ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಶೂಟಿಂಗ್, ಪ್ರಮೋಷನ್, ರಿಲೀಸ್ ಪ್ಲಾನ್ ನಡೀತಿದೆ. ಹಿಂದಿ ಬೆಲ್ಟ್‌ನಲ್ಲೂ 'ಪುಷ್ಪ' -2 ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಹಾಗಾಗಿ ಟೀ ಸೀರಿಸ್ ಸಂಸ್ಥೆ ಈ ರಿಸ್ಕ್ ತೆಗೆದುಕೊಂಡಿದೆ.

'ಪುಷ್ಪ' ದಿ ರೈಸ್ ಚಿತ್ರದ 350 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಶ್ರೀವಲ್ಲಿ ಆಗಿ ಗಮನ ಸೆಳೆದಿದ್ದರು. ಇದೀಗ ಸೀಕ್ವೆಲ್‌ನಲ್ಲಿ ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ನಡುವಿನ ಫೈಟ್ ನೋಡೋಕೆ ಸಿನಿರಸಿಕರು ಕಾಯುತ್ತಿದ್ದಾರೆ. ಬನ್ನಿ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸೂಪರ್ ಹಿಟ್ ಆಗಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications











