ಪೂಜಾ ಹೆಗ್ಡೆ ಅಲ್ಲ, 'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಕನ್ನಡ ನಟಿ ನಾಯಕಿಯಾಗಿ ಆಯ್ಕೆ? ಇಲ್ಲಿದೆ ಸುಳಿವು
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಶುರುವಾಗಿದೆ. 4 ದಿನಗಳ ಹಿಂದೆ ಈ ಬಗ್ಗೆ ಚಿತ್ರತಂಡವೇ ಅಪ್ಡೇಟ್ ಕೊಟ್ಟಿತ್ತು. ಸದ್ಯ ಚಿತ್ರ ನಾಯಕಿ ಯಾರು ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.
'ಬಿಲ್ಲ ರಂಗ ಬಾಷ' ನಿರ್ದೇಶಕ ಅನೂಪ್ ಭಂಡಾರಿ ಕನಸಿನ ಸಿನಿಮಾ. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಚಿತ್ರದಲ್ಲಿ ಹೊಸ ಪ್ರಪಂಚವನ್ನು ಕಟ್ಟಿಕೊಡಲು ಚಿತ್ರತಂಡ ಮುಂದಾಗಿದೆ. ಇಂದಿನ ತಂತ್ರಜ್ಞಾನ ಬಳಸಿಕೊಂಡು ಪ್ರೇಕ್ಷಕರಿಗೆ ತೆರೆಮೇಲೆ ಅದ್ಭುತ ಅನುಭವ ನೀಡುವ ಪ್ರಯತ್ನ ನಡೀತಿದೆ.

ಖಡಕ್ ಪೋಸ್ಟರ್ ಜೊತೆಗೆ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಆರಂಭಿಸುವ ಬಗ್ಗೆ ಚಿತ್ರತಂಡ ಹೇಳಿತ್ತು. ಚಿತ್ರಕ್ಕಾಗಿ ದೇಹ ದಂಡಿಸಿ ಸುದೀಪ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಹನುಮಾನ್' ಸಿನಿಮಾ ನಿರ್ಮಿಸಿದ್ದ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ 'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಹಣ ಹೂಡುತ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಚಿತ್ರದಲ್ಲಿ ಭವಿಷ್ಯದ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆ. '2209 AD' ಅಂದರೆ ಇನ್ನು 180 ವರ್ಷಗಳ ಬಳಿಕ ಪ್ರಪಂಚ ಹೇಗಿರುತ್ತದೆ. ಆ ಪ್ರಪಂಚದಲ್ಲಿ ನಡೆಯುವ 'ಬಿಲ್ಲ ರಂಗ ಬಾಷ' ಕಥೆ ಏನು? ಎನ್ನುವುದನ್ನು ತೋರಿಸುವ ಪ್ರಯತ್ನ ನಡೀತಿದೆ. ಹೊಸ ಫ್ಯಾಂಟಸಿ ಪ್ರಪಂಚವೇ ತೆರೆಮೇಲೆ ಬರಲಿದೆ. ಅಂದಹಾಗೆ ಚಿತ್ರಕ್ಕೆ ನಾಯಕಿ ಯಾರು ಎಂಬ ಚರ್ಚೆ ಶುರುವಾಗಿದೆ. ಸುದೀಪ್ ಜೊತೆಗೆ ಈಗಾಗಲೇ ನಟಿಯೊಬ್ಬರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
ಈಗಾಗಲೇ ಮುಂಬೈ ಬೆಡಗಿ ದಕ್ಷಾ ನಗರ್‌ಕರ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಬಾಲಿವುಡ್ ನಟಿ ಪೂಜಾ ಹೆಗ್ಡೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗುತ್ತಾರೆ ಎನ್ನುವ ಊಹಾಪೋಹ ಸಹ ಶುರುವಾಗಿದೆ. ಇತ್ತೀಚೆಗೆ ಆಕೆ ಕನ್ನಡ ಸಿನಿಮಾದಲ್ಲಿ ನಟಿಸೋ ಇಂಗಿತ ವ್ಯಕ್ತಪಡಿಸಿದ್ದರು. ಚಿತ್ರತಂಡ ಆಕೆಯ ಜೊತೆ ಚರ್ಚಿಸುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಪೂಜಾ ನಾಯಕಿಯಾಗಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ.

ಇದೆಲ್ಲದರ ನಡುವೆ ನಟಿ ರುಕ್ಮಿಣಿ ವಸಂತ್ ಮಾಡಿರುವ ಪೋಸ್ಟ್ ಭಾರೀ ಕುತೂಹಲ ಮೂಡಿಸಿದೆ. ರುಕ್ಮಿಣಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿ ಹಾಕಿದ್ದಾರೆ. ಹಸಿರು ಪ್ರಕೃತಿಯ ಫೋಟೊ ಹಾಕಿದ್ದು BRB ಎಂದು ಅದರಲ್ಲಿ ಬರೆದಿರುವುದನ್ನು ನೋಡಬಹುದು. ಈ ಇನ್‌ಸ್ಟಾ ಸ್ಟೋರಿ ನೋಡಿ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ರುಕ್ಮಿಣಿ ವಸಂರ್ ನಟಿಸುತ್ತಾರಾ? ಪರೋಕ್ಷವಾಗಿ ಈ ಬಗ್ಗೆ ಸುಳಿವು ಕೊಟ್ಟಿದ್ದಾರಾ? ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.
ಕನಕಪುರ ಬಳಿ ಭಾರೀ ಸೆಟ್ ನಿರ್ಮಾಣ ಮಾಡಿ 'ಬಿಲ್ಲ ರಂಗ ಬಾಷ' ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸೆಟ್ ನಿರ್ಮಾಣಕ್ಕೆ ಚಿತ್ರತಂಡ ಅನುಮತಿ ಪಡೆದುಕೊಂಡಿತ್ತು. 'ಮ್ಯಾಕ್ಸ್' ಸಿನಿಮಾ ಭರ್ಜರಿ ಸಕ್ಸಸ್ ಬಳಿಕ ಸುದೀಪ್ ಮತ್ತಷ್ಟು ಜೋಶ್‌ನಲ್ಲಿ 'ಬಿಲ್ಲ ರಂಗ ಬಾಷ' ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಮುಂದಿನ ವರ್ಷದ ಕೊನೆಗೆ 'ಬಿಲ್ಲ ರಂಗ ಬಾಷ' ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ಭಾರೀ ಗ್ರಾಫಿಕ್ಸ್ ವರ್ಕ್ ಕೂಡ ಚಿತ್ರಕ್ಕೆ ಮಾಡಲಾಗುತ್ತಿದೆ. 'ವಿಕ್ರಾಂತ್ ರೋಣ' ಬಳಿಕ ಸುದೀಪ್- ಅನೂಪ್ ಜೋಡಿ ಮತ್ತೊಂದು ಭರ್ಜರಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.


Click it and Unblock the Notifications











