Prabhas vs Rana: ಮತ್ತೆ ಹೀರೊ, ವಿಲನ್ ಆಗಿ ಪ್ರಭಾಸ್- ರಾಣಾ ಕದನ?
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ. ಇವತ್ತಿಗೂ ಜಕ್ಕಣ್ಣ ಬೆಸ್ಟ್ ಸಿನಿಮಾ ಇದೇ. ಚಿತ್ರದಲ್ಲಿ ಪ್ರಭಾಸ್ ಎದುರು ರಾಣಾ ದಗ್ಗುಬಾಟಿ ವಿಲನ್ ಆಗಿ ಅಬ್ಬರಿಸಿದ್ದರು. ಸೋದರರೇ ಆಗಿದ್ದರೂ ಸಿಂಹಾಸನಕ್ಕಾಗಿ ಇಬ್ಬರು ಕಾದಾಡುವ ಕಥೆ ಚಿತ್ರದಲ್ಲಿತ್ತು.
ಮೊದಲ ಭಾಗದಲ್ಲಿ ರಾಣಾ ನಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಎರಡನೇ ಭಾಗದಲ್ಲಿ ಅವರ ನಟನೆ ಪ್ರೇಕ್ಷಕರ ಮನಗೆದ್ದಿತ್ತು. ಸಿಂಹಾಸನಕ್ಕಾಗಿ ಏನೇ ಮಾಡಲು ಸಿದ್ಧ ಎನ್ನುವ ಕ್ರೂರಿಯ ಪಾತ್ರದಲ್ಲಿ ರಾಣಾ ಅಬ್ಬರಿಸಿ ಬೊಬ್ಬಿರಿದಿದ್ದರು. ಇದೀಗ ಮತ್ತೆ ಪ್ರಭಾಸ್ ಹಾಗೂ ರಾಣಾ ಕಾಂಬಿನೇಷನ್ ಸಿನಿಮಾ ಪ್ಲ್ಯಾನ್ ಆಗ್ತಿದೆ ಎನ್ನುವ ಗುಸುಗುಸು ಶುರುವಾಗಿದೆ.

ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ರಾಣಾ ಕ್ರೇಜ್ ಕಮ್ಮಿ ಆಗಿದೆ. ದೊಡ್ಡದಾಗಿ ಯಾವುದೇ ಸಿನಿಮಾ ಕೈಯಲ್ಲಿ ಇಲ್ಲ. ಇಂತಹ ಸಮಯದಲ್ಲೇ ಮತ್ತೆ ಪ್ರಭಾಸ್ ಎದುರು ನಟಿಸುತ್ತಾರೆ ಎನ್ನುವ ವಿಚಾರ ಅಭಿಮಾನಿಗಳ ಗಮನ ಸೆಳೆದಿದೆ. ರಾಣಾ ಹೀರೊ ಆಗಿ ಮಾತ್ರವಲ್ಲ ವಿಲನ್ ಆಗಿಯೇ ಕೆಲ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.
ಕಳೆದ ವರ್ಷ ಬಂದಿದ್ದ 'ವೆಟ್ಟೆಯಾನ್' ಚಿತ್ರದಲ್ಲಿ ರಜನಿಕಾಂತ್ ಎದುರು ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದರು. ವೈಟ್ ಕಾಲರ್ ಕ್ರಿಮಿನಲ್ ಆಗಿ ಹುಬ್ಬೇರಿಸಿದ್ದರು. ಬಳಿಕ ಎರಡ್ಮೂರು ಸಿನಿಮಾಗಳು ಘೋಷಣೆ ಆಗಿದ್ದರೂ ಯಾವುದೇ ಸದ್ಯಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದೆಲ್ಲದರ ನಡುವೆ 'ರಾನಾ ನಾಯುಡು' ಎಂಬ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.
'ಹನುಮಾನ್' ಎಂಬ ಸಿನಿಮಾ ನಿರ್ಮಿಸಿ ಗೆದ್ದಿದ್ದ ಪ್ರಶಾಂತ್ ವರ್ಮಾ ಇದೀಗ ಪ್ರಭಾಸ್ ಜೊತೆ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇದೇ ಚಿತ್ರದಲ್ಲಿ ರಾಣಾ ಕೂಡ ನಟಿಸುತ್ತಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. 'ಬ್ರಹ್ಮರಾಕ್ಷಸ' ಎಂಬ ಹೆಸರಿನಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ವರ್ಮಾ ಸಿನಿಮಾ ಬರುತ್ತದೆ ಎಂದು ಹೇಳಲಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಬ್ರಹ್ಮರಾಕ್ಷಸ' ಸಿನಿಮಾ ನಿರ್ಮಾಣವಾಗುತ್ತದೆ ಎಂಬ ಊಹಾಪೋಹ ಕೂಡ ಇದೆ. ಈಗಾಗಲೇ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಸಂಸ್ಥೆ 3 ಸಿನಿಮಾಗಳನ್ನು ಘೋಷಿಸಿರುವುದು ಗೊತ್ತೇಯಿದೆ. 'ಸಲಾರ್- 2' ಬಿಟ್ಟರೆ ಇನ್ನೆರಡು ಚಿತ್ರಗಳಿಗೆ ನಿರ್ದೇಶಕರು ಯಾರು ಎನ್ನುವುದು ಪಕ್ಕಾ ಆಗಿಲ್ಲ. ಅದರಲ್ಲಿ ಒಂದು ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ.

ರಿಷಬ್ ಶೆಟ್ಟಿ ನಟನೆಯ 'ಜೈ ಹನುಮಾನ್' ಚಿತ್ರವನ್ನು ಕೂಡ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಅಧಿಕೃತವಾಗಿ ಆ ಸಿನಿಮಾ ಘೋಷಣೆ ಆಗಿದೆ. 'ಕಾಂತಾರ- 1' ಬಳಿಕ ಇದೇ ಚಿತ್ರದಲ್ಲಿ ರಿಷಬ್ ನಟಿಸಲಿದ್ದಾರೆ. ಇನ್ನು 'ಅಧೀರ' ಎಂಬ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿದೆ. 'ಬ್ರಹ್ಮ ರಾಕ್ಷಸ' ಚಿತ್ರದಲ್ಲಿ ರಣ್‌ವೀರ್ ಸಿಂಗ್ ವಿಲನ್ ಆಗಿ ನಟಿಸಬಹುದು ಎನ್ನುವ ಮಾತುಗಳು ಹಿಂದೆ ಕೇಳಿಬಂದಿತ್ತು. ಆದರೆ ಈಗ ಆ ಪಾತ್ರಕ್ಕೆ ರಾಣಾ ಹೆಸರು ಪರಿಶೀಲನೆಯಲ್ಲಿದೆ ಎನ್ನಲಾಗ್ತಿದೆ.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ನಡೀತಿದೆ. ಹಾಗಾಗಿ ಯಾವ ಭಾಷೆಯ ನಟರು ಯಾವ ಭಾಷೆಯ ಚಿತ್ರದಲ್ಲಿ ಬೇಕಾದರೂ ನಟಿಸುತ್ತಾರೆ. ಪ್ರಭಾಸ್ ಎದುರು ರಣ್‌ವೀರ್ ಸಿಂಗ್ ಅಥವಾ ರಾಣಾ ಇಬ್ಬರಲ್ಲಿ ಯಾರು ಬೇಕಾದರೂ ನಟಿಸಬಹುದು. ಒಟ್ಟಾರೆ ಪೌರಾಣಿಕ ಜಾನಪದ ಕಥಾಹಂದರದ 'ಬ್ರಹ್ಮರಾಕ್ಷಸ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಅಧಿಕೃತವಾಗಿ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ.


Click it and Unblock the Notifications











