'ಸಲಾರ್' ಟೀಸರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್? ಪ್ರಭಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿದೆ. ಸದ್ಯ ಚಿತ್ರದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. KGF ಸರಣಿ ನಂತರ ಪ್ರಶಾಂತ್ ನೀಲ್, ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆ ಕೈ ಜೋಡಿಸಿರೋದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ 'ಸಲಾರ್' ತೆರೆಗಪ್ಪಳಿಸಬೇಕಿತ್ತು. ಕೊರೋನಾ ಹಾವಳಿಯಿಂದ ಶೂಟಿಂಗ್ ತಡವಾಗಿ ಸಮಸ್ಯೆ ಆಗಿತ್ತು. ಸದ್ಯ ಈವರೆಗೆ ಚಿತ್ರದ ಪೋಸ್ಟರ್‌ಗಳು ಮಾತ್ರ ರಿಲೀಸ್ ರಿಲೀಸ್ ಆಗಿದೆ. ಅಭಿಮಾನಿಗಳು ಟೀಸರ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇದೀಗ ಟೀಸರ್ ರಿಲೀಸ್ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗ್ತಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ಜಗಪತಿ ಬಾಬು ಸೇರಿದಂತೆ ಕನ್ನಡ ನಟರಾದ ದೇವರಾಜ್, ಪ್ರಮೋದ್, ಭಜರಂಗಿ ಲೋಕಿ ಬಣ್ಣ ಹಚ್ಚಿದ್ದಾರೆ.

ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಮ್ಯೂಸಿಕ್ 'ಸಲಾರ್' ಚಿತ್ರಕ್ಕಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪ್ರಶಾಂತ್ ನೀಲ್ ಎಲಿವೇಷನ್ ಸೀನ್‌ಗಳಲ್ಲಿ ಆರಡಿ ಕಟೌಟ್ ಪ್ರಭಾಸ್‌ನ ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಇನ್ನು ಚಿತ್ರದ ಅಪ್‌ಡೇಟ್‌ಗಾಗಿ ಡಾರ್ಲಿಂಗ್ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸದ್ಯ ಸಿನಿಮಾ ಟೀಸರ್ ಬಗ್ಗೆ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ.
'ಆದಿಪುರುಷ್' ಜೊತೆ 'ಸಲಾರ್' ಎಂಟ್ರಿ
ಬಾಹುಬಲಿ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಜೂನ್ 16ಕ್ಕೆ ಈ ಪೌರಾಣಿಕ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. 500 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ 'ಸಲಾರ್' ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ಈ ಕ್ರೇಜಿ ನ್ಯೂಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಜೂನ್ 16ಕ್ಕೆ 'ಸಲಾರ್' ಟೀಸರ್?
ನಾನಾ ಕಾರಣಕ್ಕೆ 'ಆದಿಪುರುಷ್' ಸಿನಿಮಾ ಸುದ್ದಿಯಲ್ಲಿರೋದು ಗೊತ್ತೇಯಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಾವಿರಾರು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗ್ತಿದೆ. ಹಾಗಾಗಿ ಈ ಸಿನಿಮಾ ಜೊತೆಗೆ 'ಸಲಾರ್' ಟೀಸರ್ ಅಟ್ಯಾಚ್ ಮಾಡಿ ಬಿಟ್ಟರೆ ರೀಚ್ ಚೆನ್ನಾಗಿರುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆಯಂತೆ. ಇದೇ ಕಾರಣಕ್ಕೆ ಟೀಸರ್ ಜೂನ್ 16ಕ್ಕೆ ರಿಲೀಸ್ ಆಗುತ್ತೆ ಎನ್ನಲಾಗ್ತಿದೆ. ಅದೇ ನಿಜವಾದರೆ ಪ್ರೇಕ್ಷಕರಿಗೆ ಡಬಲ್ ಧಮಾಕ ಅನ್ನಬಹುದು.
'ಆದಿಪುರುಷ್' ಗ್ರ್ಯಾಂಡ್ ಈವೆಂಟ್
ಜೂನ್ 6ಕ್ಕೆ ತಿರುಪತಿಯಲ್ಲಿ 'ಆದಿಪುರುಷ್' ಸಿನಿಮಾ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರವನ್ನು ಅಷ್ಟೇ ದೊಡ್ಡದಾಗಿ ಪ್ರೇಕ್ಷಕರ ಮುಂದೆ ಕೊಂಡೊಯ್ಯುವ ಪ್ರಯತ್ನ ನಡೀತಿದೆ. ಈ ಹಿಂದೆ 'ತಾನಾಜಿ' ಸಿನಿಮಾ ಕಟ್ಟಿಕೊಟ್ಟಿದ್ದ ಓಂ ರಾವುತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಆದಿಪುರುಷ್' ಟೀಸರ್ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೆ ಟ್ರೈಲರ್ ಕೊಂಚ ಭರವಸೆ ಮೂಡಿಸಿದೆ. ತ್ರೀಡಿಯಲ್ಲಿ ಪ್ರೇಕ್ಷಕರು ರಾಮಾಯಣ ಕಾವ್ಯ ಕಣ್ತುಂಬಿಕೊಳ್ಳಬಹುದು.

ರಾಮಾಯಣ ಕಾವ್ಯ
ವಾಲ್ಮೀಕಿ ಬರೆದ ರಾಮಾಯಣ ಕಾವ್ಯವನ್ನು ಆ ನಂತರ ಸಾಕಷ್ಟು ಜನ ಕವಿಗಳು ಬೇರೆ ಬೇರೆ ರೀತಿ ಕಟ್ಟಿಕೊಟ್ಟಿದ್ದಾರೆ. ಮುಂದೆ ನಾಟಕಗಳಾಗಿ ಕೂಡ ಜನರ ಮುಂದೆ ಬಂದಿತ್ತು. ತಂತ್ರಜ್ಞಾನ ಬೆಳೆದಂತೆ ಸಿನಿಮಾ ಹಾಗೂ ಧಾರಾವಾಹಿ ರೂಪದಲ್ಲೂ 'ರಾಮಾಯಣ'ವನ್ನು ಜನ ನೋಡಿದ್ದಾರೆ. ಆದರೆ ಇವತ್ತಿನ ತಂತ್ರಜ್ಞಾನದಲ್ಲಿ ತ್ರಿಡಿಯಲ್ಲಿ ಅದೇ ಕಥೆಯನ್ನು 'ಆದಿಪುರುಷ್' ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.


Click it and Unblock the Notifications











