ಪ್ರಭಾಸ್ ಹೊಸ ಸಿನಿಮಾ: ರಶ್ಮಿಕಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನಿಗೆ ಡಾರ್ಲಿಂಗ್ ಅವಕಾಶ?
'ಬಾಹುಬಲಿ' ಸರಣಿ ನಂತರ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸ್ತಿದ್ದಾರೆ. ಆದರೆ ಬಾಹುಬಲಿನ ಮೀರಿಸುವಂತಹ ಸಿನಿಮಾ ಬರಲೇ ಇಲ್ಲ. 'ಆದಿಪುರುಷ್' ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. 'ಸಲಾರ್', 'ಪ್ರಾಜೆಕ್ಟ್- K' ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಇದೀಗ ಯಂಗ್ ರೆಬಲ್‌ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್ ಹರಿದಾಡ್ತಿದೆ.
ವಯಸ್ಸು 40 ದಾಟಿದ್ರು ಪ್ರಭಾಸ್ ಮದುವೆ ಬಗ್ಗೆ ಆಲೋಚಿಸುತ್ತಿಲ್ಲ. ಸದಾ ಸಿನಿಮಾ ಧ್ಯಾನ ಮಾಡುತ್ತಿದ್ದಾರೆ. ಒಂದಕ್ಕಿಂತ ಒಂದು ಅದ್ಧೂರಿ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಸದ್ಯ ಪ್ರಭಾಸ್ ನಂಬಿ 3 ಸಿನಿಮಾಗಳಿಗೆ 1000 ಕೋಟಿ ರೂ.ಗೂ ಅಧಕ ಬಂಡವಾಳ ನಿರ್ಮಾಪಕರು ಹೂಡಿದ್ದಾರೆ. ಇನ್ನು ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಇದೀಗ ಮತ್ತೊಂದು ಕಥೆಗೆ ಯಂಗ್ ರೆಬಲ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಕಳೆದ ವರ್ಷ 'ಸೀತಾ ರಾಮಂ' ಎನ್ನುವ ಪೀರಿಯಡ್ ರೊಮ್ಯಾಂಟಿಕ್ ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕ ಹನು ರಾಘವಪೂಡಿ ಗೆದ್ದಿದ್ದರು. ಇದೀಗ ಆತ ಹೇಳಿದ ಕಥೆ ಪ್ರಭಾಸ್‌ಗೆ ಇಷ್ಟವಾಗಿದೆಯಂತೆ. ಸಿನಿಮಾ ಯಾವಾಗ ಶೂಟಿಂಗ್, ತಾರಾಗಣದಲ್ಲಿ ಯಾರೆಲ್ಲಾ ಇರ್ತಾರೆ ಎನ್ನುವುದು ಮಾತ್ರ ಪಕ್ಕಾ ಆಗಿಲ್ಲ. ಆದರೆ ಸೂಪರ್ ಹಿಟ್ ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆಯಂತೆ. ಕ್ರೇಜಿ ಕಾಂಬಿನೇಷನ್‌ನಲ್ಲಿ ಪ್ರಭಾಸ್ ಮುಂದಿನ ಸಿನಿಮಾ ಪ್ಲ್ಯಾನ್ ಮಾಡ್ತಿರೋದು ಗೊತ್ತಾಗುತ್ತಿದೆ.
10 ವರ್ಷಗಳ ಹಿಂದೆ 'ಅಂದಾಲ ರಾಕ್ಷಸಿ' ಸಿನಿಮಾ ಮೂಲಕ ಹನು ರಾಘವಪೂಡಿ ಸ್ವತಂತ್ರ ನಿರ್ದೇಶಕರಾಗಿದ್ದರು. 'ಕೃಷ್ಣಗಾಡಿ ವೀರ ಪ್ರೇಮಗಥಾ', 'ಲೀ', 'ಪಡಿ ಪಡಿ ಲೇಚೆ ಮನಸು' ಎನ್ನುವ ಸಿನಿಮಾಗಳನ್ನು ನಿರ್ದೇಶಿಸಿ ಹನು ಗಮನ ಸೆಳೆದರು. ಆದರೆ 'ಸೀತಾ ರಾಮಂ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ದೊಡ್ಡ ಹೆಸರು ತಂದುಕೊಟ್ಟಿದೆ. ಇದೇ ಕಾರಣಕ್ಕೆ ನಿರ್ದೇಶಕರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅಂದಗಾಗೆ ಪ್ರಭಾಸ್ ಜೊತೆ ಹನು ರೊಮ್ಯಾಂಟಿಕ್ ಸಿನಿಮಾ ಮಾಡ್ತಿಲ್ಲ ಎನ್ನಲಾಗ್ತಿದೆ.

'ಸೀತಾ ರಾಮಂ' ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಆದರೆ ಚಿತ್ರದ ಪ್ರಮುಖ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದರು. ತೆಲುಗಿನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಹಿಂದಿಗೂ ಡಬ್ ಆಗಿ ಸದ್ದು ಮಾಡಿತ್ತು. ಓಟಿಟಿಯಲ್ಲಿ ಎಲ್ಲಾ ದೊಡ್ಡಮಟ್ಟದಲ್ಲಿ ರೀಚ್ ಆಗಿತ್ತು. ಹನು ರಾಘವಪೂಡಿ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಭಾಸ್ ಕೂಡ ಇದೇ ಕಾರಣಕ್ಕೆ ಕತೆ ಕೇಳಿದ್ದಾರೆ.
ನಿರ್ದೇಶಕರು ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಕೆಲದ ದಿನಗಳ ಹಿಂದೆ ರಾಮ್‌ಚರಣ್‌ಗೆ ಕೂಡ ನಿರ್ದೇಶಕರು ಕಥೆ ಹೇಳಿದ್ದಾರೆ ಎನ್ನಲಾಗಿತ್ತು. ಇದೀಘ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನಲಾಗ್ತಿದೆ. ಪ್ರಭಾಸ್ ನಟನೆಯ 'ಸಲಾರ್', 'ಪ್ರಾಜೆಕ್ಟ್- K' ಸಿನಿಮಾಗಳ ಶೂಟಿಂಗ್ ಬಹುತೇಕ ಮುಕ್ತಾಯದ ಹಂತ ತಲುಪಿದೆ ಎನ್ನಲಾಗ್ತಿದೆ. ಸೆಪ್ಟೆಂಬರ್ 20ಕ್ಕೆ 'ಸಲಾರ್', ಸಂಕ್ರಾಂತಿ ಹಬ್ಬಕ್ಕೆ 'ಪ್ರಾಜೆಕ್ಟ್- K' ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ.

ಮಾರುತಿ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಪ್ರಭಾಸ್ ಸದ್ದಿಲ್ಲದೇ ನಟಿಸ್ತಿದ್ದಾರೆ. ಇದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎನ್ನಲಾಗ್ತಿದೆ, ಬರೀ ತೆಲುಗಿನಲ್ಲಿ ಮಾತ್ರ ತೆರೆಗೆ ಬರುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ನಟಿಸುತ್ತಿದ್ದಾರೆ. ವರ್ಷಾಂತ್ಯಕ್ಕೆ ಈ 3 ಪ್ರಾಜೆಕ್ಟ್‌ಗಳ ಕಂಪ್ಲೀಟ್ ಆಗಲಿದೆ. ಅಷ್ಟರಲ್ಲೇ ಹನು ರಾಘವಪೂಡಿ ಸಿನಿಮಾ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











