ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ?
ರಜನಿಕಾಂತ್ ಸದ್ಯ 'ಜೈಲರ್- 2' ಚಿತ್ರದಲ್ಲಿ ನಟಿಸ್ತಿದ್ದಾರೆ. ನೆಲ್ಸನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಲೈವಾ 173 ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಸುಂದರ್ ಸಿ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಅವರು ಹೊರ ಬಂದಿದ್ದಾರೆ.
ಕಮಲ್ ಹಾಸನ್ ನಿರ್ಮಾಣದ ತಲೈವಾ173 ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಗೊಂದಲ ಮುಂದುವರೆದಿದೆ. ಕಾರ್ತಿಕ್ ಸುಬ್ಬರಾಜ್, ಧನುಷ್, ರಾಮ್‌ಕುಮಾರ್ ಬಾಲಕೃಷ್ಣನ್, ಕೆ. ಎಸ್ ರವಿಕುಮಾರ್ ಸೇರಿದಂತೆ ಹಲವರ ಹೆಸರು ಕೇಳಿ ಬರ್ತಿದೆ. ಡಿಸೆಂಬರ್ 12ರಂದು ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಲಿದೆ.

ರಜಿನಿಕಾಂತ್ ವಯಸ್ಸು 75 ಆಗ್ತಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿದ್ದಾರೆ. ಅದೇ ಕಾರಣಕ್ಕೆ ಒಂದು ಸಿನಿಮಾ ಚಿತ್ರೀಕರಣದಲ್ಲಿ ಇರುವಾಗಲೇ ಮತ್ತೊಂದು ಸಿನಿಮಾ ಘೋಷಣೆ ಆಗುತ್ತಿದೆ. ಮುಂದಿನ ಚಿತ್ರಕ್ಕೆ ಕಮಲ್ ಹಾಸನ್ ಜೊತೆ ಕೈಜೋಡಿಸಿದ್ದಾರೆ.
ಕಮಲ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಸುಂದರ್ ಸಿ. ಚಿತ್ರ ನಿರ್ದೇಶನ ಮಾಡಲ್ಲ ಎಂದ ಬಳಿಕ ಯಾರು ಸಾರಥಿ ಆಗ್ತಾರೆ ಎನ್ನುವ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲ. ಆದರೆ ಈ ಹಿಂದೆ 'ಪಾರ್ಕಿಂಗ್' ಸಿನಿಮಾ ಕಟ್ಟಿಕೊಟ್ಟಿದ್ದ ರಾಮ್‌ಕುಮಾರ್ ಬಾಲಕೃಷ್ಣನ್ ಹೇಳಿದ ಕಥೆಯನ್ನು ತಲೈವಾ ಒಪ್ಪಿದ್ದಾರಂತೆ. ಅದೇ ಫೈನಲ್ ಆಗುವ ಸಾಧ್ಯತೆಯಿದೆ. ಇದೇ ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ನಟಿಸುತ್ತಾ ಎನ್ನಲಾಗ್ತಿದೆ.

ಸಹನ ಸೌಂದರ್ಯದಿಂದ ಗಮನ ಸೆಳೆದವರು ಸಾಯಿ ಪಲ್ಲವಿ. ಈಗಾಗಲೇ 'ರಾಮಾಯಣ' ಸೇರಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಮುಂದೆ ರಜನಿಕಾಂತ್ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸಾಯಿ ಪಲ್ಲವಿ ಜೊತೆ ನಟ ಕದೀರ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಎಲ್ಲದಕ್ಕೂ ಶೀಘ್ರದಲ್ಲೇ ಸ್ಪಷ್ಟನೆ ಸಿಗಲಿದೆ.
ಸಾಯಿ ಪಲ್ಲವಿ ನಟಿಸುವುದು ನಿಜ, ಆದರೆ ನಾಯಕಿಯಾಗಿ ಅಲ್ಲ. ಬೇರೊಂದು ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗ್ತಿದೆ. ರಾಮ್‌ಕುಮಾರ್ ನಿರ್ದೇಶನದ 'ಪಾರ್ಕಿಂಗ್' ಸಿನಿಮಾ 2 ವರ್ಷಗಳ ಹಿಂದೆ ಹಿಟ್ ಆಗಿತ್ತು. ಓಟಿಟಿಗೆ ಬಂದು ಪರಭಾಷಾ ಪ್ರೇಕ್ಷಕರನ್ನು ರಂಜಿಸಿತ್ತು. ಅಂದಹಾಗೆ ರಜನಿಕಾಂತ್ ದೊಡ್ಡ ಅಭಿಮಾನಿ ರಾಮ್‌ಕುಮಾರ್. ತಮ್ಮ ನೆಚ್ಚಿನ ನಟನನ್ನು ನಿರ್ದೇಶನ ಮಾಡುವ ಅವಕಾಶ ಸಿಕ್ಕರೆ ಹೇಗೆ ಸಿನಿಮಾ ಮಾಡಬಹುದು ಎನ್ನುವ ಕುತೂಹಲ ಮೂಡಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಮ್‌ಕುಮಾರ್ ಚಿಕ್ಕಂದಿನಲ್ಲಿ ರಜನಿಕಾಂತ್ ಸಿನಿಮಾ ನೋಡಿ ನಾನು ಸ್ಫೂರ್ತಿ ಪಡೆದಿದೆ. ಅದೇ ಕಾರಣಕ್ಕೆ ಚಿತ್ರರಂಗಕ್ಕೆ ಬಂದೆ. 'ಬಾಷಾ' ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದಿನೋ ಗೊತ್ತಿಲ್ಲ. ವಿಸಿಆರ್ ಟೇಪ್ ಹಾಕಿ ಟಿವಿಯಲ್ಲಿ ಪದೇ ಪದೆ ನೋಡ್ತಿದ್ದೆ. ಅಷ್ಟರಮಟ್ಟಿಗೆ ನಾನು ತಲೈವಾ ಅಭಿಮಾನಿ. ಅದೇ ಪ್ರೇರಣೆಯಿಂದ ಚಿತ್ರರಂಗಕ್ಕೆ ಬಂದೆ ಎಂದು ಹೇಳಿದ್ದರು.
ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ನಟಿಸಲು ಒಪ್ಪಿದ್ದಾರೆ. ಅದು ಯಾವಾಗ? ಆ ಸಿನಿಮಾ ನಿರ್ದೇಶಕ ಯಾರು? ಎನ್ನುವುದು ಗೊತ್ತಿಲ್ಲ. ತಲೈವಾ 173 ಚಿತ್ರದಲ್ಲೇ ಇಬ್ಬರೂ ತೆರೆಹಂಚಿಕೊಂಡರೆ ಅಚ್ಚರಿ ಪಡಬೇಕಿಲ್ಲ. ರಜನಿಕಾಂತ್ ಹುಟ್ಟುಹಬ್ಬಕ್ಕೆ 'ಜೈಲರ್- 2' ಟೀಸರ್ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ರಜನಿಕಾಂತ್ ಹಾಗೂ ರಾಮ್‌ಕುಮಾರ್ ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ.


Click it and Unblock the Notifications











