ವಾರೆವ್ಹಾ.. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ?
ಸ್ಟಾರ್ ನಟರನ್ನು ಒಟ್ಟಿಗೆ ತೆರೆಮೇಲೆ ತೋರಿಸಿ ಬಾಕ್ಸಾಫೀಸ್ ಶೇಕ್ ಮಾಡುವ ಟ್ರೆಂಡ್ ನಡೀತಿದೆ. ದಶಕಗಳ ಬಳಿಕ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕೂಡ ಒಟ್ಟಿಗೆ ನಟಿಸೋ ಸುದ್ದಿ ಬಂದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರೆ ಎನ್ನುವುದು ಹೊಸ ಸುದ್ದಿ.
'KGF' ಸರಣಿ ಹಾಗೂ 'ಸಲಾರ್' ಸಿನಿಮಾ ಮಾಡಿ ಪ್ರಶಾಂತ್ ನೀಲ್ ಸೂಪರ್ ಸಕ್ಸಸ್ ಕಂಡಿದ್ದಾರೆ. ಸದ್ಯ ತೆಲುಗು ನಟ ಜ್ಯೂ. ಎನ್‌ಟಿಆರ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಬಣ್ಣ ಹಚ್ಚುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ರಿಷಬ್ ಹಾಗೂ ತಾರಕ್ ನಡುವೆ ಆತ್ಮೀಯ ಒಡನಾಟವಿದೆ. ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರ ಮೂಲದವರು. ಹಾಗಾಗಿ ತಾರಕ್ ಕನ್ನಡ ಕೂಡ ಮಾತನಾಡುತ್ತಿದ್ದಾರೆ. 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಅವರು ರಿಷಬ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದರು. ಹಾಗಾಗಿ 'ಕಾಂತಾರ-1' ಚಿತ್ರದಲ್ಲಿ ತಾರಕ್ ಕೂಡ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ರಿಷಬ್ ಚಿತ್ರದಲ್ಲಿ ಎನ್‌ಟಿಆರ್ ಅಲ್ಲ ಎನ್‌ಟಿಆರ್ ಚಿತ್ರದಲ್ಲೇ ರಿಷಬ್ ನಟಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ಈ ಹಿಂದೆ ಜ್ಯೂ. ಎನ್‌ಟಿಆರ್, ಪ್ರಶಾಂತ್ ನೀಲ್ ಅವರಿಗೆ ತಮ್ಮ ಹುಟ್ಟೂರು ಕುಂದಾಪುರವನ್ನು ರಿಷಬ್ ಶೆಟ್ಟಿ ಪರಚಯಿಸಿದ್ದರು. ಮೂವರು ಒಟ್ಟಿಗೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು. ತಾರಕ್ ತಾಯಿ ಕೂಡ ಈ ವೇಳೆ ಜೊತೆಗಿದ್ದರು. ತಾಯಿ ಆಸೆಯಂತೆ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಅವರು ಹೇಳಿದ್ದರು.

ಜ್ಯೂ. ಎನ್‌ಟಿಆರ್ ಅಭಿಮಾನಿ ಪ್ರಶಾಂತ್ ನೀಲ್. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಹಿಂದೆ ಕರ್ನಾಟಕದ ಕರಾವಳಿ ಭಾಗದಲ್ಲೇ ಸಣ್ಣ ಶೆಡ್ಯೂಲ್ ಶೂಟಿಂಗ್ ನಡೆದಿತ್ತು. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಚಿತ್ರದ 'ಡ್ರ್ಯಾಗನ್' ಎಂಬ ಟೈಟಲ್ ಪರಿಶೀಲನೆಯಲ್ಲಿ ಚಿತ್ರತಂಡ ಇರುವುದಾಗಿ ಹೇಳಲಾಗ್ತಿದೆ.
'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ತೆಲುಗಿನಲ್ಲಿ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೀಕ್ವೆಲ್ ಬಗ್ಗೆ ಕೂಡ ಆಂಧ್ರ, ತೆಲಂಗಾಣದಲ್ಲಿ ಭಾರೀ ಕ್ರೇಜ್ ಇದೆ. 100 ಕೋಟಿ ರೂ.ಗೆ ತೆಲುಗು ರಾಜ್ಯಗಳ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ 'ಡ್ರ್ಯಾಗನ್' ಚಿತ್ರದಲ್ಲಿ ರಿಷಬ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೆ ಕ್ರೇಜ್ ಹೆಚ್ಚುತ್ತದೆ ಎನ್ನುವ ಲೆಕ್ಕಾಚಾರ ಕೂಡ ಇರಬಹುದು. ಆದರೆ ಈ ಬಗ್ಗೆ ಅಧಿಕೃತ ಸಿಕ್ಕಿಲ್ಲ.
'ಕಾಂತಾರ-1' ಚಿತ್ರದ ಬಳಿಕ 'ಜೈ ಹನುಮಾನ್' ಹಾಗೂ ಶಿವಾಜಿ ಬಯೋಪಿಕ್ ಸಿನಿಮಾಗಳನ್ನು ರಿಷಬ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಸಿತಾರಾ ಎಂಟರ್‌ಟ್ರೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಸಿನಿಮಾ ಮಾಡಲು ಸೈ ಎಂದಿದ್ದಾರೆ. ಶೀಘ್ರದಲ್ಲೇ 'ಕಾಂತಾರ-1' ಸಿನಿಮಾ ಬಿಡುಗಡೆ ಆಗ್ತಿದೆ. ಇದೆಲ್ಲದರ ನಡುವೆ ತಾರಕ್- ಪ್ರಶಾಂತ್ ಕಾಂಬಿನೇಷನ್ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಅನುಮಾನ ಮೂಡಿದೆ.
ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ಡ್ರ್ಯಾಗನ್' ಸಿನಿಮಾ ನಿರ್ಮಾಣ ಆಗ್ತಿದೆ. ಇದೊಂದು ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ನೀಲ್ ಟೇಕಿಂಗ್, ತಾರಕ್ ಮಾಸ್ ಪರ್ಫಾರ್ಮನ್ಸ್ ನೋಡೊಕೆ ಸಿನಿರಸಿಕರು ಕಾಯುತ್ತಿದ್ದಾರೆ. ಇವರಿಬ್ಬರ ಜೊತೆ ರಿಷಬ್ ಕೂಡ ಸೇರಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರಂಟಿ.


Click it and Unblock the Notifications











