Kantara-2: ಈ ಬಾರಿ ಪಂಜುರ್ಲಿ, ಶಿವ, ಪಾರ್ವತಿ ಸುತ್ತಾ ಕ್ಯಾಮರಾ ಹಿಡಿತ್ತಾರಾ ರಿಷಬ್ ಶೆಟ್ಟಿ?
ಕನ್ನಡ ಚಿತ್ರರಂಗದ ಹೆಮ್ಮೆ 'ಕಾಂತಾರ' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸದ್ಯ ಚಿತ್ರದ ಪ್ರೀಕ್ವೆಲ್ ಸಿದ್ಧತೆಗಳು ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಮತ್ತೊಮ್ಮೆ ಇಡೀ ವಿಶ್ವವೇ ತಿರುಗಿ ನೋಡುವಂತಹ ಚಿತ್ರಕ್ಕೆ ರಿಷಬ್ ಅಂಡ್ ಟೀಮ್ ಪ್ಲ್ಯಾನ್ ಮಾಡ್ತಿದೆ.
ಮಂಗಳೂರಿನಲ್ಲಿ 'ಕಾಂತಾರ'-2 ಸ್ಕ್ರಿಪ್ಟ್ ವರ್ಕ್ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಆರಂಭದಲ್ಲೇ ಸಿನಿಮಾ ಸೆಟ್ಟೇರಬೇಕಿತ್ತು. ಕಾರಣಾಂತರಗಳಿಂದ ತಡವಾಗುತ್ತಿದೆ. ಎಷ್ಟೇ ತಡವಾದರೂ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬರಬೇಕು ಎಂದು ಹೊಂಬಾಳೆ ಸಂಸ್ಥೆ ನಿರ್ಧರಿಸಿದೆ. ಎಲ್ಲಾ ವಿಭಾಗಗಳಲ್ಲೂ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ರಿಷಬ್ ಶೆಟ್ಟಿ ಸಿನಿಮಾ ಬಗ್ಗೆ ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ಸಿನಿಮಾ ಕಥೆ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಚಿತ್ರದ ಕತೆಯ ಕಾಲಘಟ್ಟದ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರದಲ್ಲಿ 4ನೇ ಶತಮಾನದ ಕತೆಯನ್ನು ರಿಷಬ್ ಶೆಟ್ಟಿ ಹೇಳಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ಕಾಂತಾರ' ಚಿತ್ರದಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ಎಪಿಸೋಡ್ ಹೈಲೆಟ್ ಆಗಿತ್ತು. ಇದೀಗ 'ಪಂಜುರ್ಲಿ' ದೈವದ ಮೂಲದ ಬಗ್ಗೆ ಪ್ರೀಕ್ವೆಲ್ ಕತೆ ಇರುತ್ತದೆ ಎನ್ನಲಾಗ್ತಿದೆ.
ಕಾಡುಬೆಟ್ಟು ಶಿವನ ಕತೆಯನ್ನು 'ಕಾಂತಾರ' ಚಿತ್ರದಲ್ಲಿ ನೋಡಿದ್ದೇವೆ. ಪ್ರೀಕ್ವೆಲ್‌ನಲ್ಲಿ ಆತನ ತಂದೆಯ ಕತೆ ಇರುತ್ತದೆ ಎನ್ನುವ ಲೆಕ್ಕಾಚಾರ ಇದೆ. ಆದರೆ ರಿಷಬ್ ಅದಕ್ಕಿಂತಲೂ ಹಲವು ಶತಮಾನಗಳ ಹಿಂದಿನ ಕತೆಯನ್ನು ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ ಎನ್ನಲಾಗ್ತಿದೆ. ಪಂಜುರ್ಲಿ ದೈವದ ಹುಟ್ಟು ಹೇಗಾಯ್ತು ಅನ್ನೋದನ್ನು ಕಟ್ಟಿಕೊಡುತ್ತಾರೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿ ಒಂದು.
ಅಂದಹಾಗೆ ಪಂಜುರ್ಲಿ ದೈವದ ಹುಟ್ಟು, ಮಹಿಮೆಯ ಬಗ್ಗೆ ಕರಾವಳಿಯ ಪ್ರದೇಶಗಳಿಗೆ ತಕ್ಕಂತೆ ಭಿನ್ನ ಕತೆಗಳಿವೆ. ಅದರಲ್ಲಿ ರಿಷಬ್ ಶೆಟ್ಟಿ ಯಾವ ಕತೆಯನ್ನು ಹೇಳುತ್ತಾರೆ? ಎನ್ನುವ ಕುತೂಹಲವೂ ಇದೆ. ಒಂದರ್ಥದಲ್ಲಿ 'ಕಾಂತಾರ-2' ಸಿನಿಮಾ ಸಂಪೂರ್ಣವಾಗಿ ಭಕ್ತಿಪ್ರದಾನ ಸಿನಿಮಾ ರೂಪ ತಾಳುವ ಸಾಧ್ಯತೆಯಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಏಷ್ಯಾನೆಟ್ ಸುವರ್ಣ ಸಂದರ್ಶನದಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ ಸಿನಿಮಾ ಬಜೆಟ್ ಬಗ್ಗೆಯೂ ಮೌನ ಮುರಿದಿದ್ದಾರೆ. ಕಾಂತಾರ ಚಿತ್ರ ಮಾಡುವ ಸಮಯದಲ್ಲೂ ನನ್ನ ತಲೆಯಲ್ಲಿ ಬಹಳ ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಆಲೋಚನೆ ಇತ್ತು. ಅಲ್ಲಿಯವರೆಗೆ ನಾನೊಬ್ಬ ಸಾಧಾರಣ ನಟ ಆಗಿದ್ದೆ ಅಷ್ಟೆ. ಅವತ್ತಿಗೆ ನನ್ನ ಮೇಲೆ 16 ಕೋಟಿ ರೂ. ಬಜೆಟ್ ತುಂಬಾ ದೊಡ್ಡದೇ ಆಗಿತ್ತು. ಈಗ ಹೊಂಬಾಳೆ ಫಿಲ್ಮ್ಸ್ ನಾನೊಂದು ಕತೆ ಹೇಳಿದ್ದೇನೆ. ಅವರಿಗೆ ಆ ಕತೆ ಬಹಳ ಇಷ್ಟವಾಗಿದೆ. ಅದಕ್ಕೆ ತಕ್ಕಂತೆ ಬಜೆಟ್ ಕೊಡ್ತಾರೆ. ಚಿತ್ರಕ್ಕೆ ಏನೇನು ಬೇಕೋ ಅದನ್ನು ಸಿನಿಮಾ ಕೇಳುತ್ತದೆ" ಎಂದಿದ್ದಾರೆ.
ಪಂಜುರ್ಲಿ ದೈವ ಹಾಗೂ ಶಿವ- ಪಾರ್ವತಿ ಕತೆಯೂ ಚಿತ್ರದಲ್ಲಿರುತ್ತದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಬಹಳ ದೊಡ್ಡಮಟ್ಟದಲ್ಲಿಯೇ 'ಕಾಂತಾರ-2' ಸಿನಿಮಾ ಬರೋದು ಪಕ್ಕಾ ಆಗಿದೆ. ಇನ್ನು ಈ ಬಾರಿ ಪಂಜುರ್ಲಿ ದೈವದ ಕತೆ ಹೇಳುವುದರಿಂದ ಗ್ರಾಫಿಕ್ಸ್ ವರ್ಕ್ ಜಾಸ್ತಿ ಇರುತ್ತದೆ ಎನ್ನಲಾಗ್ತಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ಮತ್ತೊಮ್ಮೆ ಕರಾವಳಿಯ ನಂಬಿಕೆ, ದೈವಾರಾಧನೆಯನ್ನು ರೋಚಕವಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ.
ಇತ್ತೀಚೆಗೆ ಮಲಯಾಳಂ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಜ್ ಬಿ. ಶೆಟ್ಟಿ 'ಕಾಂತಾರ-2' ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡರು. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರುತ್ತದೆ ಎಂದಿದ್ದರು. ಒಟ್ನಲ್ಲಿ ಸೆಟ್ಟೇರುವುದಕ್ಕು ಮುನ್ನವೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ.


Click it and Unblock the Notifications











