ಸಾಯಿ ಪಲ್ಲವಿ ಮಾಡಬೇಕಿದ್ದ ಖ್ಯಾತ ಗಾಯಕಿ ಬಯೋಪಿಕ್ ಅವಕಾಶ ರುಕ್ಮಿಣಿ ಪಾಲಾಯ್ತು?
ಚಿತ್ರರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ಆಗಲ್ಲ. ಕೆಲವೊಮ್ಮೆ ಬದಲಾವಣೆ ಅನಿವಾರ್ಯ ಎನಿಸಿಬಿಡುತ್ತದೆ. ಕಾರಣಾಂತರಗಳಿಂದ ನಟ, ನಟಿ ಅವಕಾಶ ಕಳೆದುಕೊಳ್ಳುವುದು, ಅಚ್ಚರ ಎನ್ನುವಂತೆ ಅವಕಾಶ ಗಿಟ್ಟಿಸಿಕೊಳ್ಳುವುದು ನಡೆಯುತ್ತಿರುತ್ತದೆ. ಸದ್ಯ ಸಾಯಿ ಪಲ್ಲವಿ ಮಾಡಬೇಕಿದ್ದ ಬಯೋಪಿಕ್ ಸಿನಿಮಾ ಅವಕಾಶ ರುಕ್ಮಿನಿ ವಸಂತ್ ಪಾಲಾಗಿದೆ ಎನ್ನುವ ಚರ್ಚೆ ನಡೀತಿದೆ.
ಅದ್ಭುತ ಡ್ಯಾನ್ಸ್ ಹಾಗೂ ಸಹಜ ಅಭಿನಯದಿಂದ ಸಾಯಿ ಪಲ್ಲವಿ ಮೋಡಿ ಮಾಡಿದ್ದಾರೆ. ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಮತ್ತು ಭಕ್ತಿ ಗೀತೆಗಳ ಗಾಯಕಿ ಎಂ. ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಆ ಅವಕಾಶ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರನ್ನು ಹುಡುಕಿ ಬಂದಿದೆ ಎನ್ನಲಾಗ್ತಿದೆ.

ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಸಂಗೀತಗಾರ್ತಿ ಎಂ. ಎಸ್ ಸುಬ್ಬುಲಕ್ಷ್ಮಿ ಜೀವನದ ಕಥೆಯನ್ನು ತೆಲುಗು ನಿರ್ದೇಶಕ ಎಂ. ಎಸ್ ಸುಬ್ಬುಲಕ್ಷ್ಮಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಅದರಲ್ಲೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವುದು ವಿಶೇಷ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಎಂ. ಎಸ್ ಸುಬ್ಬುಲಕ್ಷ್ಮಿ ಸಾಧನೆಯ ಕಥೆಯನ್ನು ಸಿನಿಮಾ ಮಾಡುವ ಪ್ರಯತ್ನ ಬಹಳ ದಿನಗಳಿಂದ ನಡೀತಿದೆ. ಚಿತ್ರಕಥೆ ಹೆಣೆಯುವ ಕೆಲಸ ಕೂಡ ಸಾಗುತ್ತಿದೆ. ಸಾಯಿ ಪಲ್ಲವಿ ಆ ಪಾತ್ರ ಸೂಕ್ತ ಎನ್ನುವ ಚರ್ಚೆ ನಡೀತಿತ್ತು. ಅಧಿಕೃತವಾಗಿ ಸಿನಿಮಾ ಘೋಷಣೆ ಆಗುವ ಮುನ್ನ ರುಕ್ಮಿಣಿ ವಸಂತ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕುತೂಹಲ ಮೂಡಿಸಿದೆ.

ಚಿಕ್ಕ ವಯಸ್ಸಿನಲ್ಲೇ ಕರ್ನಾಟಕ ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ಎಂ. ಎಸ್ ಸುಬ್ಬುಲಕ್ಷ್ಮಿ ಬಳಿಕ ಸಾಧನೆಯ ಶಿಖರವನ್ನೇರಿದರು. ಸಾಕಷ್ಟು ಪ್ರಶಸ್ತಿ ಗೌರವಗಳಿಗೆ ಪಾತ್ರರಾದರು. ನಾಲ್ಕು ತಮಿಳು ಹಾಗೂ ಒಂದು ಹಿಂದಿ ಚಿತ್ರದಲ್ಲಿ ಕೂಡ ನಟಿಸಿದ್ದರು. ಭಾರತರತ್ನ ಜೊತೆಗೆ ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮವಿಭೂಷಣ ಹೀಗೆ ಹಲವು ಪ್ರಶಸ್ತಿಗಳು ಅವರ ಕೀರ್ತಿ ಹೆಚ್ಚಿಸಿದ್ದವು.
ಕನ್ನಡದ ನಟಿ ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಅಂಗಳಕ್ಕೂ ಜಿಗಿಯಲಿದ್ದಾರೆ. ತಮ್ಮ ಅಭಿನಯದ ಮೂಲಕ ಕಮಾಲ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಆಕೆ ಎಂ. ಎಸ್ ಸುಬ್ಬುಲಕ್ಷ್ಮಿನಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕುತೂಹಲ ಮೂಡಿಸಿದೆ.
ಸಾಯಿ ಪಲ್ಲವಿ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಈ ಬಯೋಪಿಕ್ ಚಿತ್ರದಲ್ಲಿ ನಟಿಸ್ತಿಲ್ಲ ಎನ್ನಲಾಗ್ತಿದೆ. ಕನ್ನಡದ 'ಟಾಕ್ಸಿಕ್', ತೆಲುಗಿನ 'ಡ್ರ್ಯಾಗನ್' ಸೇರಿ ಹಲವು ಸಿನಿಮಾಗಳು ರುಕ್ಮಿಣಿ ಕೈಯಲ್ಲಿವೆ. ಬಾಲಿವುಡ್ ಸಿನಿಮಾ ಕಥೆಗಳನ್ನು ಕೇಳುತ್ತಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ.
ಸದ್ಯ 'ರಾಮಾಯಣ' ಸರಣಿ ಸಿನಿಮಾಗಳಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸೀತೆ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಧನುಷ್ ಜೋಡಿಯಾಗಿ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೆಸರಿಡದ ಮತ್ತೆರಡು ಸಿನಿಮಾಗಳು ಕೂಡ ಆಕೆಯ ಕೈಯಲ್ಲಿವೆ. ಹಾಗಾಗಿ ಎಂ. ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಚಿತ್ರದಲ್ಲಿ ಆಕೆ ನಟಿಸಲು ಸಾಧ್ಯವಾಗ್ತಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ.
ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಎಂ. ಎಸ್ ಸುಬ್ಬುಲಕ್ಷ್ಮಿ ಬಯೋಪಿಕ್ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. ನಾಲ್ಕೈದು ವರ್ಷಗಳ ಹಿಂದೆ ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು. ವಿದ್ಯಾ ಬಾಲನ್ ಚಿತ್ರದಲ್ಲಿ ಸುಬ್ಬುಲಕ್ಷ್ಮಿ ಪಾತ್ರ ಮಾಡ್ತಾರೆ ಎನ್ನಲಾಗಿತ್ತು. ಬಳಿಕ ಆ ಸುದ್ದಿ ತಣ್ಣಗಾಗಿತ್ತು.


Click it and Unblock the Notifications