ಮೃಣಾಲ್ ಠಾಕೂರ್, ಶ್ರೀಲೀಲಾಗೆ ಸೆಡ್ಡು ಹೊಡೆದ ಗಾಳಿಪಟ 2 ಚೆಲುವೆ ; ರಾಮ್ ಚರಣ್ 'ಪೆದ್ದಿ'ಯಲ್ಲಿ ಐಟಂ ಡ್ಯಾನ್ಸ್ ?
ಸಾಮಾನ್ಯವಾಗಿ ಒಬ್ಬ ಸೂಪರ್ ಸ್ಟಾರ್ ನಾಯಕನ ಚಿತ್ರ ಆರಂಭವಾದರೆ, ಆ ಚಿತ್ರದ ಸುತ್ತಮುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇಲಿ ಹೋದರೂ ಹುಲಿ ಹೋಯ್ತು ಅಂತ ಜನ ಚರ್ಚೆ ಮಾಡಲು ಶುರು ಮಾಡುತ್ತಾರೆ.
ಇನ್ನೂ ಇದು ಐಟಂ ಸಾಂಗ್‌ಗಳ ಯುಗ. ಚಿತ್ರದ ಕಥೆಗೆ ಹಾಡು ಅವಶ್ಯಕತೆ ಇರುತ್ತಾ ಇಲ್ವಾ ..? ಸೆಕೆಂಡರಿ. ಒಟ್ನಲ್ಲಿ ಮದನಾರಿ ಹೀಗೆ ಬಂದು ಹಾಗೇ ಹೋಗಬೇಕು. ಮೋಹಕವಾದ ನಗೆ ಬೀರಿ ಮಾದಕ ನೃತ್ಯ ಮಾಡಬೇಕು ಎನ್ನುವ ಅಲಿಖಿತ ನಿಯಮ ಚಿತ್ರರಂಗದಲ್ಲಿದೆ. ಹಲವರು ಈ ಫಾರ್ಮುಲಾ ಅಡಿಯಲ್ಲಿಯೇ ಕೆಲಸ ಮಾಡುತ್ತಾರೆ ಕೂಡ.

ಹೀಗಾಗಿಯೇ ಸ್ಟಾರ್ ಒಬ್ಬನ ಚಿತ್ರ ಶುರುವಾದರೆ ಸಾಕು, ಚಿತ್ರದಲ್ಲಿನ ವಿಶೇಷವಾದ ಹಾಡಿಗೆ ಹೆಜ್ಜೆ ಹಾಕುವ ಚೋರಿ ಯಾರಿರಬಹುದು ಎನ್ನುವ ಚರ್ಚೆಯನ್ನು ಅಭಿಮಾನಿಗಳು ಚಿತ್ರತಂಡಕ್ಕೂ ಮೊದಲೇ ಮಾಡಲು ಶುರು ಮಾಡುತ್ತಾರೆ. ಉದಾಹರಣೆಗೆ ''ಪೆದ್ದಿ'' ಸುತ್ತ ಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನೇ ತೆಗೆದುಕೊಳ್ಳಿ.
ಹೌದು, ಪೆದ್ದಿ.. ರಾಮ್ ಚರಣ್ ತೇಜಾ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ. ಆರಂಭದಿಂದಲೂ ತೀವೃ ಕುತೂಹಲ ಕೆರಳಿಸುತ್ತಾ, ಸದ್ದು ಮಾಡುತ್ತಾ, ಸುದ್ದಿಯಾಗುತ್ತಾ ಬಂದ ಈ ಚಿತ್ರ ಹಾಗೇ ನೋಡಿದರೆ ಇದೇ ಏಪ್ರಿಲ್ 30ರಂದು ತೆರೆಗೆ ಬರಬೇಕಿತ್ತು.
ಆದರೆ,ಚಿತ್ರೀಕರಣ ಇನ್ನು ಮುಗಿದಿಲ್ಲ. ಎರಡು ಹಾಡುಗಳನ್ನು ಸೆರೆ ಹಿಡಿಯುವುದು ಇನ್ನೂ ಬಾಕಿಯಿದೆ.ಇದಲ್ಲದೇ ಪೋಸ್ಟ್ ಪ್ರೊಡಕ್ಷನ್, ವಿಎಫ್‌ಎಕ್ಸ್ ಕೆಲಸ ಕೂಡ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ರಿಲೀಸ್ ಡೇಟ್ ಬದಲಿಸಬೇಕಾಗಿದೆ. ಸದ್ಯ ಈ ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗುತ್ತೆ ಎಂಬ ಮಾತು ಇದೆ. ಆದರೆ, ಜೂನ್ ಮೊದಲ ವಾರ ಯಶ್ ಅಭಿನಯದ ''ಟಾಕ್ಸಿಕ್'' ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಯಶ್ ಎದುರು ರಾಮ್ ಚರಣ್ ಕಣಕ್ಕಿಳಿಯುತ್ತಾರಾ..? ಭಂಡ ಧೈರ್ಯದ ಪ್ರದರ್ಶನ ಮಾಡುತ್ತಾರಾ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.
ಈ ಪ್ರಶ್ನೆಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆಯಾದರೂ, ''ಪೆದ್ದಿ''ಯ ಅಂಗಳದಲ್ಲಿ ಸಂಯುಕ್ತಾ ಮೆನನ್ ಕಾಲ್ಗೆಜ್ಜೆಯ ಸದ್ದು ಕೇಳಿ ಬರಲಿದೆ ಎನ್ನುವ ಮಾತು ಸದ್ಯ ಹೈದರಾಬಾದ್‌ನೆಲ್ಲೆಡೆ ಕೇಳಿ ಬರುತ್ತಿದೆ.

ಹೌದು, ಸಂಯುಕ್ತಾ ಮೆನನ್.. ಟಾಲಿವುಡ್‌ನಲ್ಲಿ ಲಕ್ಕಿ ಗರ್ಲ್ ಎಂದೇ ಕರೆಯಲ್ಪಡುತ್ತಿರುವ ಚೆಲುವೆ. ಹೇಳಿಕೊಳ್ಳಲು ಕೇರಳದವರಾದರೂ ಇವರನ್ನು ಅಪ್ಪಿ ಒಪ್ಪಿ ಹೊತ್ತು ಮೆರೆಸುತ್ತಿರುವುದು ಮಾತ್ರ ತೆಲುಗು ಚಿತ್ರರಂಗ.
''ವಿರೂಪಾಕ್ಷ''.. ''ಬಿಂಬಿಸಾರ''..''ಭೀಮ್ಲಾ ನಾಯಕ್''..''ಲವ್ ಮಿ''.. ''ಅಖಂಡ 2''.. ಹೀಗೆ ಒಂದಾದ ಮೇಲೊಂದು ತೆಲುಗು ಚಿತ್ರಗಳಲ್ಲಿ ಮಿಂಚಿರುವ ಸಂಯುಕ್ತಾ ಕನ್ನಡದಲ್ಲಿ ''ಗಾಳಿಪಟ 2'' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನವನ್ನು ಕೂಡ ಮಾಡಿದ್ದರು.
ಇಂಥಾ ಸಂಯುಕ್ತಾ ಮೆನನ್ ''ಪೆದ್ದಿ'' ಚಿತ್ರದಲ್ಲಿ ಐಟಂ ಹಾಡೊಂದಕ್ಕೆ ಕುಣಿಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇನ್ನು ''ರಂಗಸ್ಥಲಂ'' ಚಿತ್ರದಲ್ಲಿನ "ಜಿಗೇಲು ರಾಣಿ" ಹಾಡು ಯಾವ ಮಟ್ಟಕ್ಕೆ ಹಿಟ್ ಆಗಿತ್ತು ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ. ಸಂಯುಕ್ತಾ ಹೆಜ್ಜೆ ಹಾಕಲಿರುವ ಹಾಡು ''ಜಿಗೇಲು ರಾಣಿ''ಯನ್ನು ಕೂಡ ಮೀರಿಸುವಂತಹದ್ದು ಎನ್ನುವ ಮಾತು ಕೂಡ ಇದೇ ವೇಳೆ ಕೇಳಿ ಬರುತ್ತಿದ್ದು ಈ ಹಾಡಿಗೆ ಸಂಯುಕ್ತಾ ಮೆನನ್ ಅವರನ್ನು ಚಿತ್ರತಂಡ ಪರಿಗಣಿಸಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವಾದರೆ ರಾಮ್ ಚರಣ್ ಎನರ್ಜಿ ಮತ್ತು ಸಂಯುಕ್ತಾ ಗ್ಲಾಮರ್, ಕಿಕ್ಕೇರಿಸುವುದರಲ್ಲಿ ಸಂಶಯವಿಲ್ಲ.
ಅಂದ್ಹಾಗೇ ಈ ಹಿಂದೆ ಇದೇ ಹಾಡಿನ ವಿಚಾರಕ್ಕೆ ಸಂಬಂಧಿಸಿದಂತೆ ಮೃಣಾಲ್ ಠಾಕೂರ್ ಮತ್ತು ಶ್ರೀಲೀಲಾ ಅವರ ಹೆಸರು ಚಿತ್ರನಗರಿಯಲ್ಲಿ ಕೇಳಿ ಬಂದಿತ್ತು. ಆದರೆ. ಕೇವಲ ಅಂತೆ-ಕಂತೆಯಾಗಿಯಷ್ಟೇ ಅದು ಉಳಿಯಿತು. ಈಗ ಸಂಯುಕ್ತಾ ಮೆನನ್ ಹೆಸರು ಚಾಲ್ತಿಯಲ್ಲಿದೆ. ರಾಮ್ ಚರಣ್ ಜೊತೆ ಸಂಯುಕ್ತಾ ''ಪೆದ್ದಿ''ಗಾಗಿ ಕುಣಿಯುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications