ರಾಕಿಂಗ್ ಸ್ಟಾರ್ ಯಶ್ ಭಾವನಾಗಿ ಕರ್ನಾಟಕ ಅಳಿಯ ಅಖಾಡಕ್ಕೆ?
ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸದ್ಯ 2 ಸಿನಿಮಾಗಳ ಕಡೆ ಫೋಕಸ್ ಮಾಡಿದ್ದಾರೆ. 'ಟಾಕ್ಸಿಕ್' ಚಿತ್ರವನ್ನು ನಿರ್ಮಿಸಿ ನಟಿಸುವುದರ ಜೊತೆಗೆ ರಾಯಾಯಣ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾವಣನ ಪಾತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್ ಚಿತ್ರ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಾಮಾಯಣ ಕಾವ್ಯ ಮತ್ತೊಮ್ಮೆ ದೃಶ್ಯರೂಪ ಪಡೀತಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ.

'ಟಾಕ್ಸಿಕ್' ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದು ಯಶ್ 'ರಾಮಾಯಣ' ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ. ನಿಮಿತ್ ಮಲ್ಹೋತ್ರಾ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಯಶ್ ಕೂಡ ಅವರೊಟ್ಟಿಗೆ ಕೈ ಜೋಡಿಸಿದ್ದಾರೆ. ಇಂದಿನ ತಂತ್ರಜ್ಞಾನ ಬಳಸಿ ಬಹಳ ಸೊಗಸಾಗಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
ಹನುಮಂತನಾಗಿ ಸನ್ನಿ ಡಿಯೋಲ್, ಕೈಕೇಯಿ ಆಗಿ ಲಾರಾ ದತ್ತಾ, ಇಂದ್ರದೇವನಾಗಿ ಕುನಾಲ್ ಕಪೂರ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ರಾಮಾಯಣ ಚಿತ್ರದಲ್ಲಿ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಚಿತ್ರದಲ್ಲಿ ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರದಲ್ಲಿ ಆಕೆಯ ಪತಿಯ ಪಾತ್ರದಲ್ಲಿ ವಿವೇಕ್ ನಟಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ. ರಾಮಾಯಣದಲ್ಲಿ ರಾವಣ ಹಾಗೂ ವಿದ್ಯುತ್ಜಿಹ್ವ ನಡುವೆ ಯುದ್ಧ ನಡೆಯುತ್ತದೆ.
ಶೂರ್ಪನಖಿ ಕಲ್ಕೇಯ ದಾನವ ಕುಲದ ದಾನವ ರಾಜಕುಮಾರ ವಿದ್ಯುತ್ಜಿಹ್ವನನ್ನು ಗುಟ್ಟಾಗಿ ಮದುವೆ ಆಗಿರುತ್ತಾಳೆ. ದಾನವರು ಹಾಗೂ ರಾಕ್ಷಸರು ಶತ್ರುಗಳಂತಿದ್ದರು. ಹಾಗಾಗಿ ಇವರಿಬ್ಬರ ಮದುವೆ ಇಷ್ಟವಿಲ್ಲದೇ ರಾವಣ ಇಬ್ಬರನ್ನು ಕೊಲ್ಲಲು ಮುಂದಾಗುತ್ತಾನೆ. ಮದುವೆಯಾದಳು. ಯುದ್ಧ ನಡೆದು ವಿದ್ಯುತ್ಜಿಹ್ವ ಸಾಯುತ್ತಾನೆ. ಶೂರ್ಪನಖಿಯನ್ನು ಅತ್ತಿಗೆ ಮಂಡೋದರಿ ಉಳಿಸಿಕೊಳ್ಳುವ ಕಥೆಯಿದೆ. ಸದ್ಯ ರಾವಣ ಹಾಗೂ ವಿದ್ಯುತ್ಜಿಹ್ವ ನಡುವಿನ ಯುದ್ಧದ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಒಂದ್ಕಾಲದಲ್ಲಿ ವಿವೇಕ್ ಒಬೆರಾಯ್ ಬಾಲಿವುಡ್ ಅಂಗಳದಲ್ಲಿ ಹವಾ ಎಬ್ಬಿಸಿದ್ದರು. ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಐಶ್ವರ್ಯ ರೈ ಹಾಗೂ ವಿವೇಕ್ ಲವ್ ಸ್ಟೋರಿ ಗುಟ್ಟಾಗಿ ಏನು ಉಳಿದಿರಲಿಲ್ಲ. ಬಳಿಕ ಇದ್ದಕ್ಕಿದಂತೆ ವಿವೇಕ್ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿತ್ತು. ಕರ್ನಾಟಕದ ಖ್ಯಾತ ರಾಜಕಾರಣಿ ಜೀವರಾಜ್ ಆಳ್ವ ಅವರನ್ನು ವಿವೇಕ್ ಒಬೆರಾಯ್ 15 ವರ್ಷಗಳ ಹಿಂದೆ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ ಕನ್ನಡದ 'ರುಸ್ತುಂ' ಚಿತ್ರದಲ್ಲಿ ಶಿವಣ್ಣನ ಎದುರು ನಟಿಸಿದ್ದರು. ರಾಮಾಯಣ ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಮೊದಲ ಭಾಗದಲ್ಲಿ ಸೀತಾ ಅಪಹರಣದವರೆಗಿನ ಸನ್ನಿವೇಶಗಳನ್ನು ಮಾತ್ರ ಕಟ್ಟಿಕೊಡುವ ಲೆಕ್ಕಾಚಾರ ನಡೀತಿದೆ. ಹಾಗಾಗಿ ರಾವಣನ ಹಿನ್ನೆಲೆ, ಇಂದ್ರದೇವ ಹಾಗೂ ವಿದ್ಯುತ್ಜಿಹ್ವ ಜೊತೆಗಿನ ಯುದ್ಧದ ಸನ್ನಿವೇಶಗಳನ್ನು ತೋರಿಸುತ್ತಾರೆ ಎನ್ನಲಾಗ್ತಿದೆ.
ಮುಂದಿನ ವರ್ಷ ದೀಪಾವಳಿ ಹಬ್ಬಕ್ಕೆ ರಾಮಾಯಣ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. 2027ರ ದೀಪಾವಳಿ ಸಂಭ್ರಮದಲ್ಲಿ 2ನೇ ಭಾಗ ಬಿಡುಗಡೆಗೆ ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ರಣ್‌ಬೀರ್ ಹಾಗೂ ಸಾಯಿಪಲ್ಲವಿ ಎರಡನೇ ಭಾಗದ ಚಿತ್ರೀಕರಣದಲ್ಲಿ ಭಾಗಿ ಆಗುವ ಸುಳಿವು ಸಿಗುತ್ತಿದೆ.


Click it and Unblock the Notifications











