Toxic: ಗೋವಾದಲ್ಲಿ ರಾಕಿಂಗ್ ಸ್ಟಾರ್; ಟಾಕ್ಸಿಕ್ ಶೂಟಿಂಗ್ ಯಾವಾಗ?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಿದೆ. ಆದರೆ ಸದ್ಯಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಬಹಳ ದೊಡ್ಡಮಟ್ಟದಲ್ಲೇ ಈ ಸಿನಿಮಾ ಪ್ಲ್ಯಾನ್ ನಡೀತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಭಿಮಾನಿಗಳಂತೂ ಈ ಚಿತ್ರ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಅನೌನ್ಸ್ ಬಳಿಕ ಯಾವುದೇ ಹೊಸ ಅಪ್‌ಡೇಟ್ ಸಿಗಲಿಲ್ಲ. 3 ತಿಂಗಳಿಂದ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗದೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮನವಿ ಮಾಡುತ್ತಿದ್ದಾರೆ.

ಟ್ವಿಟರ್‌ನಲ್ಲಿ ಇದ್ದಕ್ಕಿದಂತೆ #ToxicTheMovie ಟ್ರೆಂಡ್ ಆಗುತ್ತಿದೆ. ಸದ್ಯ ಯಶ್ ಗೋವಾದಲ್ಲಿದ್ದಾರೆ ಎನ್ನಲಾಗ್ತಿದೆ. ಅಭಿಮಾನಿಗಳ ಜೊತೆ ಗೋವಾದಲ್ಲಿ ರಾಕಿ ಭಾಯ್ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇನ್ನು ಯಶ್ ಮುಂದಿನ ಚಿತ್ರಕ್ಕಾಗಿ ಕಸರತ್ತು ಮಾಡಿ ದೇಹವನ್ನು ಮತ್ತಷ್ಟು ಹುರಿಗೊಳಿಸುತ್ತಿದ್ದಾರೆ. ಇತ್ತೀಚೆಗೆ ಯಶ್ ಲುಕ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.
ಅಂದಹಾಗೆ ಏಪ್ರಿಲ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಶ್ರೀಲಂಕಾ, ಕರ್ನಾಟಕ ಹಾಗೂ ಗೋವಾದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಿನಿಮಾ ಅನೌನ್ಸ್‌ಮೆಂಟ್ ಟೀಸರ್‌ನಲ್ಲೇ ಇದು ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಸಿನಿಮಾ ಎನ್ನುವ ಸುಳಿವು ಕೊಟ್ಟಿತ್ತು ಚಿತ್ರತಂಡ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ರೇಂಜ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ. ದೇಶ ವಿದೇಶದ ತಂತ್ರಜ್ಞರು, ಕಲಾವಿದರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಬರೀ ಅನೌನ್ಸ್‌ಮೆಂಟ್ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ಇಡೀ ಸಿನಿಮಾ ಯಾವ ತರ ಮೂಡಿ ಬರುತ್ತದೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.
ಇತ್ತೀಚೆಗೆ ಯಶ್ ಹೋದಲ್ಲಿ ಬಂದಲ್ಲಿ ತಲೆಗೆ ಮಪ್ಲೇರ್ ಅಥವಾ ಉಲ್ಲನ್ ಬೀನಿ ಕ್ಯಾಪ್ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕಾಗಿ ಹೊಸ ಹೇರ್‌ಸ್ಟೈಲ್ ಮಾಡಿಸಿದ್ದು ಅದು ರಿವೀಲ್ ಆಗದಂತೆ ಈ ರೀತಿ ಮುಚ್ಚಿಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಯಶ್ 'ಪೆಪ್ಸಿ' ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಕಳೆದ ವರ್ಷ ಬಂದಿದ್ದ ಜಾಹೀರಾತು ಸಖತ್ ಸದ್ದು ಮಾತ್ತು. ಇದೀಗ ಮತ್ತೊಂದು ಜಾಹೀರಾತು ಬಿಡುಗಡೆಯಾಗಿದೆ. ಅದರಲ್ಲಿ ಯಶ್ ಸ್ಟೈಲ್, ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಜಾಹೀರಾತಿಗಾಗಿ ಯಶ್ ಭಾರೀ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಆಪ್ತ ಸ್ನೇಹಿತ ಪಾನಿಪುರಿ ಕಿಟ್ಟಿ ಜಿಮ್ ಉದ್ಘಾಟನೆ ವೇಳೆ ಮಾಧ್ಯಮಗಳ ಜೊತೆ ಯಶ್ ಮಾತನಾಡಿದ್ದರು. "ಟಾಕ್ಸಿಕ್ ಚಿತ್ರದ ಚಿತ್ರೀಕರಣ ಆದಷ್ಟು ಬೇಗ ಶುರುವಾಗುತ್ತದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ನಡೀತಿದೆ. ಶೂಟಿಂಗ್ ಇಲ್ಲ ಅಂತ ನಾನು ಸುಮ್ಮನೆ ಕೂತಿಲ್ಲ. ಬಹಳ ಬ್ಯುಸಿ ಇದ್ದೀನಿ. ಸಾಕಷ್ಟು ತಯಾರಿ ನಡೆಯುತ್ತಿದೆ" ಎಂದಿದ್ದರು.

ಮುಂದಿನ ವರ್ಷ ಏಪ್ರಿಲ್ 10ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ ಮಾಡುವ ಸಾಧ್ಯತೆಯಿದೆ. ಇನ್ನುಳಿದಂತೆ ಸಾನಿಯಾ ಸರ್ದಾರಿಯಾ ಕಾಸ್ಟ್ಯೂಮ್ಸ್ ಡಿಸೈನ್ ಮಾಡಲಿದ್ದು ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಮಲಯಾಳಂ ನಟ ಟೊವಿನೋ ಥಾಮಸ್ ಕೂಡ ನಟಿಸುವ ಸಾಧ್ಯತೆಯಿದೆ. ಲಂಡನ್ ಮೂಲದ ಜೆರೆಮಿ ಸ್ಟಾಕ್ ಟೀಸರ್‌ಗೆ ಮ್ಯೂಸಿಕ್ ಮಾಡಿದ್ದರು. ಆತನೇ ಚಿತ್ರಕ್ಕೆ ಟ್ಯೂನ್ ಹಾಕುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











